Narendra Modi: ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಿಗೆ ಹಿಮಾಚಲ, ರಾಜಸ್ಥಾನ ಜನ ಈಗಲೂ ಕಾಯುತ್ತಿದ್ದಾರೆ; ಮೋದಿ ವ್ಯಂಗ್ಯ
2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ತೊಡಗಿಸಿಕೊಂಡಿವೆ. ಇನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಇನ್ನಿಲ್ಲದ ಕಸರತ್ತು ನಡೆಸಿರುವ ಬಿಜೆಪಿ, ತನ್ನ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಂವಾದ ಕಾರ್ಯಕ್ರಮ ಆಯೋಜಿಸಿದೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ, ಏಪ್ರಿಲ್ 27ರಂದು ವರ್ಚುವಲ್ ಸಭೆಯ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಜ್ಜಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟರು.

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ, "ಕೆಲವು ಪಕ್ಷಗಳು ಪ್ರಜಾಪ್ರಭುತ್ವ ಎಂದರೆ ಚುನಾವಣೆಗಳನ್ನು ಗೆಲ್ಲುವುದಷ್ಟೇ ಅಂದುಕೊಂಡಿವೆ. ಗೆಲುವಿಗಾಗಿ ಅವರು ಏನು ಮಾಡಲೂ ಸಿದ್ಧ, ಅವರಿಗೆ ಅಭಿವೃದ್ಧಿ ಬೇಕಿಲ್ಲ. ತುಷ್ಟೀಕರಣ ನೀತಿಗಾಗಿ ಭರ್ಜರಿ ಖರ್ಚು ಮಾಡುತ್ತಾರೆ," ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ಗೆ ವಾರಂಟಿ ಇಲ್ಲದಾಗಿದೆ
ಇನ್ನು ಈ ಹಿಂದೆ ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಈಡೇರಿಸದ ಬಗ್ಗೆ ಮಾತನಾಡಿದ ನರೇಂದ್ರ ಮೋದಿ, "ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದ ಜನರು ಕಾಂಗ್ರೆಸ್ ನೀಡಿದ್ದ ಗ್ಯಾರೆಂಟಿಗಳಿಗೆ ಪಾಪ ಈಗಲೂ ಕಾಯುತ್ತಿದ್ದಾರೆ. ಕಾಂಗ್ರೆಸ್‌ನ ವಾರಂಟಿಯದ್ದೇ ವಾಯಿದೆ ಮುಗಿದಿರುವಾಗ ಅಂಥ ಪಕ್ಷದಿಂದ ಏನು ತಾನೇ ಗ್ಯಾರೆಂಟಿ ನಿರೀಕ್ಷಿಸಲು ಸಾಧ್ಯ?," ಎಂದು ವ್ಯಂಗ್ಯವಾಡಿದರು.
ಇದೀಗ ಕರ್ನಾಟಕದಲ್ಲಿ ಜನರಿಗೆ ಗ್ಯಾರಂಟಿ ಯೋಜನೆ ಕೊಡುವುದರ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ. ಕಾಂಗ್ರೆಸ್ನವರ ಸುಳ್ಳು ಗ್ಯಾರಂಟಿಗೆ ಯಾರೂ ಬಲಿಯಾಗಬೇಡಿ ಎಂದು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.
"ಕರ್ನಾಟಕದ ಯುವಪೀಳಿಗೆಯ ಭವಿಷ್ಯದ ಬಗ್ಗೆ ನಾವೆಲ್ಲ ಯೋಚಿಸಬೇಕಿದೆ. ಅದಕ್ಕಾಗಿಯೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬೇರೆ ಪಕ್ಷಗಳಂತೆ ಬಿಜೆಪಿಗೆ ಯಾವುದೇ ಶಾರ್ಟ್ ಕಟ್ ಇಲ್ಲ. ದೇಶದ ಅಭಿವೃದ್ಧಿಗಾಗಿ ಬಿಜೆಪಿ ಸದಾ ಶ್ರಮಿಸುತ್ತದೆ," ಎಂದು ಪ್ರಧಾನಿ ಮೋದಿ ಹೇಳಿದರು.
ಕೋವಿಡ್ -19 ಸಂದರ್ಭದಲ್ಲಿ ವರ್ಷಗಟ್ಟಲೇ ಬಡವರಿಗೆ ಉಚಿತ ಅಕ್ಕಿ ವಿತರಣೆ ನೀಡಿದ್ದೇವೆ. ಬಿಜೆಪಿಗೆ ಬಡವರ ಬಗ್ಗೆ ಅಪಾರ ಕಾಳಜಿ ಇದ್ದು, ಬಡವರ ಉದ್ಧಾರಕ್ಕಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ 25 ವರ್ಷಗಳ ಹಿಂದೆ ಆಸ್ಪತ್ರೆ ಮತ್ತು ವೈದ್ಯರ ಸಂಖ್ಯೆ ಬಹಳ ಕಡಿಮೆ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವೈದ್ಯರ ಸಂಖ್ಯೆ ಬಹಳಷ್ಟು ಹೆಚ್ಚಿದೆ ಎಂದರು.
ಎಫ್‌ಡಿಐ ಅಂದರೆ ನನ್ನ ಪಾಲಿಗೆ ಫಸ್ಟ್ ಡೆವೆಲಪ್ ಇಂಡಿಯಾ. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರವಿದ್ದಾಗ ವಿದೇಶಿ ನೇರ ಬಂಡವಾಳ ಕೇವಲ 1 ಲಕ್ಷ ಕೋಟಿ ರೂ. ಬಂದಿತ್ತು. ಆದರೆ ನಮ್ಮ ಸರ್ಕಾರ ಕಳೆದ ನಾಲ್ಕೇ ವರ್ಷಗಳಲ್ಲಿ 4 ಲಕ್ಷ ಕೋಟಿ ರೂ. ಆಕರ್ಷಿಸಿದ್ದೇವೆ ಎಂದು ಮಾಹಿತಿ ನೀಡಿದರು.
"ದೇಶದಲ್ಲಿ ಮೊದಲ ಏಮ್ಸ್ ಅನ್ನು 1956ರಲ್ಲಿ ನಿರ್ಮಿಸಲಾಯಿತು. ಎರಡನೇ ಏಮ್ಸ್ ಅನ್ನು 2003ರಲ್ಲಿ ಅಟಲ್ ಜೀ ನೇತೃತ್ವದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. 2014ರವರೆಗೆ ಕೇವಲ 7 ಏಮ್ಸ್‌ಗಳಿದ್ದವು. ಇಂದು ಅವುಗಳ ಸಂಖ್ಯೆ 20ಕ್ಕೆ ಏರಿದೆ. ಇದು ಡಬಲ್ ಎಂಜಿನ್ ಸರ್ಕಾರದ ಶಕ್ತಿ," ಎಂದು ಬಿಜೆಪಿ ಕಾರ್ಯಕರ್ತರಿಗೆ ನರೇಂದ್ರ ಮೋದಿ ತಿಳಿಸಿದರು.
"ಮುಂದಿನ 5 ವರ್ಷ ದೇಶದ ಪಾಲಿಗೆ ಅಭಿವೃದ್ಧಿಯ ಪರ್ವ. ಅಭಿವೃದ್ಧಿಯ ನೆಲೆಯಲ್ಲಿ ಈ ಐದು ವರ್ಷಗಳು ಬಹು ಮುಖ್ಯವಾಗಿವೆ. ಅಭಿವೃದ್ಧಿ ಅಂದರೆ ಏನು ಎಂಬುದರ ಬಗೆಗೂ ಒಂದು ಸ್ಪಷ್ಟ ಚಿತ್ರಣ ಇರಬೇಕಾದ ಅಗತ್ಯವಿದೆ. ಹಾಗಾಗಿ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಬದಲಾವಣೆ ಸಾಧ್ಯ," ಎಂದು ಬಿಜೆಪಿ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಕರ್ನಾಟಕ ಹನುಮನ ಜನ್ಮಸ್ಥಳ ಮತ್ತು ಸಾಂಸ್ಕೃತಿಕತೆಯ ತವರೂರಾಗಿದೆ. ಅದೇ ರೀತಿ ಆಧ್ಯಾತ್ಮದಲ್ಲಿಯೂ ಸಾಕಷ್ಟು ಸಾಧನೆ ಮಾಡಿದೆ. ಆಧಾತ್ಮಿಕತೆಯು ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗಲು ಪ್ರಮುಖ ಪಾತ್ರ ವಹಿಸಿದೆ ಎಂದರು.
ಇನ್ನು ತಮ್ಮ ಭಾಷಣದಲ್ಲಿ ಸಂತರು, ಕನಕದಾಸರು, ಶಿವ ಶರಣರ ಬಗ್ಗೆ ಉಲ್ಲೇಖಿಸಿದ ನರೇಂದ್ರ ಮೋದಿ, ಕನ್ನಡ ಭಾಷೆ ಸಮೃದ್ಧ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಕರ್ನಾಟಕದ ಜನರನ್ನು ದಶಕದಿಂದಲೂ ನಾನು ನೋಡುತ್ತಿದ್ದೇನೆ. ರಾಜಕೀಯಕ್ಕೆ ಬರುವ ಮೊದಲೇ ಹಲವು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದೆ ಎಂದು ತಿಳಿಸಿದರು.
ಕನ್ನಡದ ಜನರ ಆಧ್ಯಾತ್ಮಿಕತೆಗೆ ಸರಿಸಾಟಿ ಇಲ್ಲ. ಆಧ್ಯಾತ್ಮ ಮತ್ತು ಸಾಮಾಜಿಕ ಅಭ್ಯುದಯಗಳೆರಡೂ ಜೊತೆಜೊತೆಗೇ ಸಾಗುತ್ತವೆ. ಸಮಾಜ ಸುಧಾರಣೆಗಾಗಿ ಕನ್ನಡದ ಜನ ಭಕ್ತಿ ಮತ್ತು ಶಕ್ತಿ ವಿನಿಯೋಗಿಸುತ್ತಾರೆ ಎಂದು ನರೇಂದ್ರ ಮೋದಿ ಹೇಳಿದರು.












Click it and Unblock the Notifications