ಹಿಜಾಬ್, ಕೇಸರಿ ಶಾಲು ಧರಿಸದಂತೆ ವಿದ್ಯಾರ್ಥಿಗಳಿಗೆ ನಿರ್ಬಂಧ: ಹೈಕೋರ್ಟ್ ಮೌಖಿಕ ಸೂಚನೆ
ಬೆಂಗಳೂರು, ಫೆಬ್ರವರಿ 10: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆಯನ್ನು ಆರಂಭಿಸಿರುವ ನ್ಯಾಯಪೀಠ, ಹಿಜಾಬ್, ಕೇಸರಿ ಶಾಲು ಸೇರಿದಂತೆ ಯಾವುದೇ ಧರ್ಮವನ್ನು ಸೂಚಿಸುವ ವಸ್ತ್ರವನ್ನು ಧರಿಸಲು ಯಾವ ವಿದ್ಯಾರ್ಥಿ ಮೇಲೂ ಒತ್ತಡ ಹೇರಬಾರದು ಎಂದು ಮೌಖಿಕವಾಗಿ ಹೇಳಿದೆ. ಆ ಕುರಿತು ಆದೇಶ ನೀಡುವುದಾಗಿ ಹೇಳಿರುವ ನ್ಯಾಯಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮಧ್ಯಾಹ್ನಕ್ಕೆ ಮುಂದೂಡಿದೆ.
ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಅವರಿದ್ದ ತ್ರಿಸದಸ್ಯಪೀಠ ಸುಮಾರು ಎರಡು ಗಂಟೆಗಳ ಕಾಲ ವಾದ-ಪ್ರತಿವಾದವನ್ನು ಆಲಿಸಿತು.
ಬಳಿಕ ''ಶಾಲಾ-ಕಾಲೇಜುಗಳು ಆರಂಭವಾಗಲಿ, ವಿಷಯ ನ್ಯಾಯಾಲಯದ ಮುಂದಿದೆ, ಕೋರ್ಟ್ ಆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಅಲ್ಲಿಯವರೆರೆಗೆ ಹಿಜಾಬ್ ಆಗಲಿ ಅಥವಾ ಕೇಸರಿ ಶಾಲು ಆಗಲಿ ಯಾವುದೇ ಧರ್ಮಕ್ಕೆ ಸಂಬಂಧಿಸಿದ ವಸ್ತುಗಳನ್ನು ಧರಿಸುವಂತಿಲ್ಲ ಮತ್ತು ಆ ಕುರಿತು ಯಾರೂ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಬಾರದು. ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಮರಳಬೇಕು ಎಂಬುದು ಕೋರ್ಟ್ ಆಶಯವಾಗಿದೆ,'' ಎಂದು ಮೌಖಿಕವಾಗಿ ಆದೇಶಿಸಿತು.

ಹಿಜಾಬ್ ಧರಿಸದೆ ಕಾಲೇಜಿಗೆ ಹೋಗಬೇಕು ಎನ್ನುವ ಮಧ್ಯಂತರ ಆದೇಶ ನೀಡಿದರೆ ಅದಕ್ಕೆ ತಮ್ಮ ವಿರೋಧವಿದೆ, ಹಾಗೆ ಮಾಡಿದರೆ ಸಂವಿಧಾನದ ಕಲಂ 25 ಅಮಾನತುಗೊಳಿಸಿದಂತಾಗುತ್ತದೆ, ವಿದ್ಯಾರ್ಥಿನಿಯರಿಗೆ ಕಷ್ಟವಾಗುತ್ತದೆ ಎಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಆಕ್ಷೇಪ ಎತ್ತಿದರು.
ಮತ್ತೊಬ್ಬ ಹಿರಿಯ ನ್ಯಾಯವಾದಿ ಸಂಜಯ್ ಹೆಗಡೆ ಕೂಡ ಅದಕ್ಕೆ ದನಿಗೂಡಿಸಿದರು.
ಆಗ ಸಿಜೆ ''ನಿಮಗೆ ನ್ಯಾಯಾಲಯದ ಮೇಲೆ ವಿಶ್ವಾಸವಿಲ್ಲವೆ, ಹಾಗಿದ್ದರೆ ಸ್ವಲ್ಪ ಕಾಯಿರಿ, ಕೆಲವೇ ದಿನಗಳು ಕಾಯಿರಿ,'' ಎಂದು ಹೇಳಿದರು.
ಇದಕ್ಕೂ ಮುನ್ನ ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿ, ಹಿಜಾಬ್‌ಗೆ ಪ್ರತಿಯಾಗಿ ಕೇಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ಇದರಿಂದ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಗಲಭೆ ವಾತಾವರಣ ಇದೆ. ಹೀಗಾಗಿ ಸರ್ಕಾರ ಹೈಸ್ಕೂಲ್ ಕಾಲೇಜುಗಳಿಗೆ ನಾಳೆವರೆಗೆ ರಜೆ ನೀಡಿದೆ. ನಾವು ಕಾಲೇಜುಗಳನ್ನು ಆರಂಭಿಸಲು ಸಿದ್ದರಾಗಿದ್ದೇವೆ, ಆದರೆ ಒಬ್ಬರು ಹಿಜಾಬ್ ಮತ್ತೊಬ್ಬರಿಂದ ಕೇಸರಿ ಶಾಲಿಗೆ ಒತ್ತಾಯ ಕೇಳಿಬರುತ್ತಿದೆ. ಇಂತಹ ಸ್ಥಿತಿಯಲ್ಲಿ ಕಾಲೇಜು ಆರಂಭಿಸುವುದು ಕಷ್ಟ. ಶಾಲಾ ಅಭಿವೃದ್ದಿ ಸಮಿತಿಯ ವಸ್ತ್ರಸಂಹಿತೆಗೆ ಬದ್ದವಾಗಿರಬೇಕು. ವಿವಾದಕ್ಕೆ ಸಂಬಂಧಿಸದ ದೊಡ್ಡ ಸಂಖ್ಯೆ ವಿದ್ಯಾರ್ಥಿಗಳಿದ್ದಾರೆ, ಅವರೆಲ್ಲಾ ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಆದರೆ, ಅರ್ಜಿದಾರರ ಪರ ವಕೀಲ ದೇವದತ್ ಕಾಮತ್, ಫೆ.3ರಿಂದ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಬಿಡುತ್ತಿಲ್ಲ. ಇದು ಅವರನ್ನು ಶಿಕ್ಷಣದಿಂದ ಮತ್ತು ಮೂಲಭೂತ ಹಕ್ಕುಗಳಿಂದ ವಂಚಿಸುವ ಕೆಲಸವಾಗಿದೆ. ಹಿಜಾಬ್ ಧರಿಸುವುದು ಧಾರ್ಮಿಕ ಅತ್ಯಗತ್ಯವಾಗಿದೆ ಎಂದು ವಾದಿಸಿದರು.
ಸಮವಸ್ತ್ರ ಹಾಗೂ ಹಿಜಾಬ್ ಧರಿಸಿ ತೆರಳಲು ಅನುಮತಿ ನೀಡಬೇಕು. ಹಿಜಾಬ್ ಧರಿಸುವುದು ಅವರವರ ಸಂಪ್ರದಾಯವಾಗಿದೆ. ಹಿಜಾಬ್‌ನಿಂದ ಬೇರೆಯವರಿಗೆ ಯಾವುದೇ ಸಮಸ್ಯೆ ಇಲ್ಲ. ಅದೇ ಬಣ್ಣದ ಹಿಜಾಬ್ ಧರಿಸಿ ತೆರಳಲು ಅನುಮತಿ ನೀಡಿ. ರಾಜ್ಯ ಸರ್ಕಾರ ಬೆಂಕಿಯೊಂದಿಗೆ ಆಟವಾಡುತ್ತಿದ್ದು, ಸರ್ಕಾರದ ಆದೇಶದಲ್ಲಿ ಹಿಜಾಬ್ ಹಕ್ಕಲ್ಲ ಎಂದಿದೆ ಎಂದು ಹೇಳಿದರು.
ಮೊದಲಿಗೆ ವಾದ ಮಂಡಿಸಿದ ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಸಂಜಯ್ ಹೆಗಡೆ, ಶಾಲೆಗಳಲ್ಲಿ ಮೊದಲು ಸಮವಸ್ತ್ರ ಎಂಬುದು ಇರಲಿಲ್ಲ. ತಮಿಳುನಾಡಿನಲ್ಲಿ ಮೊದಲಿಗೆ ಅದು ಶುರುವಾಯಿತು. 1995ರಲ್ಲಿ ಕರ್ನಾಟಕ ಸರ್ಕಾರ ನಿಯಮಗಳನ್ನು ರೂಪಿಸಿತು. ಶಾಲಾ ಪಠ್ಯಕ್ರಮ ಸಂಬಂಧ ಈ ನಿಯಮಗಳಿವೆ. ಆದರೆ ಪಿಯು ಕಾಲೇಜುಗಳಿಗೆ ಸಮವಸ್ತ್ರ ಸಂಬಂಧ ಯಾವುದೇ ನಿಯಮಗಳಿಲ್ಲ. ಸರ್ಕಾರದ ನಡೆ ಸಂವಿಧಾನಬಾಹಿರವಾಗಿದೆ ಎಂದು ಹೇಳಿದರು.












Click it and Unblock the Notifications