ಉಪ ಸಭಾಪತಿಗಳನ್ನು ಎಳೆದೊಯ್ದ ಕಾಂಗ್ರೆಸ್ ಸದಸ್ಯರು: ರಣರಂಗವಾದ ಪರಿಷತ್ ಕಲಾಪ!
ಬೆಂಗಳೂರು, ಡಿ. 15: ನಿರೀಕ್ಷೆಯಂತೆಯೆ ರಾಜ್ಯ ವಿಧಾನ ಪರಿಷತ್‌ನಲ್ಲಿ ಕೋಲಾಹಲ ಉಂಟಾಗಿದೆ. ಆದರೆ ಮೇಲ್ಮನೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸದಸ್ಯರು ನೂಕಾಟ, ತಳ್ಳಾಟ ನಡೆಸಿ ಕೈ-ಕೈ ಮಿಲಾಯಿಸಿದ ಘಟನೆ ನಡೆಯಿತು. ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಗದ್ದಲ ಉಂಟಾಗುವ ಸಾಧ್ಯತೆಗಳನ್ನು ಮೊದಲೇ ಊಹಿಸಲಾಗಿತ್ತಾದರೂ, ಇಷ್ಟೊಂದು ಮಟ್ಟದಲ್ಲಿ ಕೋಲಾಹಲ ಉಂಟಾಗುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈ ಘಟನೆ ಮೂರು ಪಕ್ಷಗಳಿಗೂ ಕಪ್ಪು ಚುಕ್ಕೆ ಎಂದು ಇದೇ ಸಂದರ್ಭದಲ್ಲಿ ಪರಿಷತ್‌ನ ಅತಿ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಅವರು ಸದನದ ಬಳಿಕ ವಿಧಾನಸಭೆಯಲ್ಲಿ ವಿಷಾಧ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 11.10ರ ಸುಮಾರಿಗೆ ವಿಧಾನ ಪರಿಷತ್ ಕಲಾಪ ಪುನಾರಂಭವಾಯಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ಶುರುವಾದ ಗದ್ದಲ, ಇತಿಹಾದಲ್ಲಿಯೇ ಅತ್ಯಂತ ಕೆಟ್ಟ ನಡೆಗಳಿಗೆ ಸಾಕ್ಷಿಯಾಯ್ತು. ವಿಧಾನ ಪರಿಷತ್‌ನಲ್ಲಿ ಏನೇನಾಯ್ತು? ಇಲ್ಲಿದೆ ಸಂಪೂರ್ಣ ಮಾಹಿತಿ.

ಪೀಠದಿಂದ ಎಳೆದೊಯ್ದರು
ವಿಧಾನ ಪರಿಷತ್ ಕಲಾಪ ಆರಂಭವಾಗುಗುದಕ್ಕೂ ಮೊದಲೇ ಸಭಾಪತಿ ಸ್ಥಾನದಲ್ಲಿ ಉಪಸಭಾಪತಿ, ಜೆಡಿಎಸ್ ಪಕ್ಷದ ಧರ್ಮೇಗೌಡ ಅವರನ್ನು ಬಿಜೆಪಿ ಸದಸ್ಯರು ಕೂಡಿಸಿದ್ದರು. ಅದನ್ನು ಕಂಡು ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಅವರನ್ನು ಎಬ್ಬಿಸಿ ಎಳೆದೊಯ್ದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಬಿಜೆಪಿ ಸದಸ್ಯರು ಮತ್ತೆ ಅವರನ್ನು ಕರೆತಂದು ಪೀಠದ ಮೇಲೆ ಕೂಡಿಸಲು ಪ್ರಯತ್ನಿಸಿದರು.

ಪೀಠದಲ್ಲಿ ಬಸವರಾಜ್ ಪಾಟೀಲ್
ಅಷ್ಟರಲ್ಲಿ ಅದಕ್ಕೆ ಆಸ್ಪದ ಕೊಡದ ಕಾಂಗ್ರೆಸ್ ಸದಸ್ಯರು, ಕಾಂಗ್ರೆಸ್ ಪಕ್ಷದ ಸದಸ್ಯ ಬಸವರಾಜ ಪಾಟೀಲ ಇಟಗಿ ಅವರನ್ನು ಸಭಾಪತಿ ಪೀಠದಲ್ಲಿ ಕುಳ್ಳಿರಿಸಿ ಅವರ ಸುತ್ತಲೂ ತಡೆಗೋಡೆಯಂತೆ ನಿಂತು ಕೊಂಡಿದ್ದರು. ಸಭಾಪತಿ ವಿರುದ್ಧ ಸಲ್ಲಿಸಿರುವ ಅವಿಶ್ವಾಸ ನಿರ್ಣಯ ಸೂಚನೆಯ ಬಗ್ಗೆ ಮೊದಲು ಪ್ರಸ್ತಾಪವಾಗಬೇಕು ಎಂದು ಜೆಡಿಎಸ್-ಬಿಜೆಪಿ ಸದಸ್ಯರು ಒತ್ತಾಯಿಸಿ ಘೋಷಣೆ ಕೂಗಿದರು. ಆದರೆ ಈಗಾಗಲೇ ಅದು ತಿರಸ್ಕಾರವಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಹೇಳುತ್ತಿದ್ದರು. ಒಟ್ಟಾರೆ ಯಾರು? ಏನನ್ನು ಮಾತನಾಡುತ್ತಿದ್ದಾರೆ ಎಂಬುದು ಅರಿವಾಗದಂತೆ ಗದ್ದಲವಿತ್ತು.

ಸಭಾಪತಿಗಳಿಗೆ ಬಾಗಿಲು ಬಂದ್!
ಇನ್ನು ಆರಂಭದಲ್ಲಿಯೇ ಪೀಠದ ಹಿಂದೆ ಇರುವ ಬಾಗಿಲ ಮೂಲಕ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಸದನದ ಸಭಾಂಗಣ ಪ್ರವೇಶಿಸದಂತೆ ಬಿಜೆಪಿ ಸದಸ್ಯರು ಬಾಗಿಲನ್ನು ಬಂದ್ ಮಾಡಿದ್ದರು. ವಿಧಾನ ಪರಿಷತ್ ಮಾರ್ಷಲ್ ಅವರು ಹಾಗೂ ಮಾರ್ಷಲ್‌ಗಳು ಬಾಗಿಲು ತೆಗೆಯಲು ಪ್ರಯತ್ನಿಸಿದರು. ಅದಕ್ಕೆ ಬಿಜೆಪಿ ಸದಸ್ಯರು ಅವಕಾಶ ನೀಡಲಿಲ್ಲ. ಹೀಗಾಗಿ ವಿಧಾನ ಪರಿಷತ್ ಕಲಾಪ ಸಂಪೂರ್ಣ ಗೊಂದಲದ ವಾತಾರಣದಿಂದ ಕೂಡಿತ್ತು.
Recommended Video

ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಕಡಿಮೆ ಸಂಖ್ಯೆಯಲ್ಲಿದ್ದ ಮಾರ್ಷಲ್ ಗಳಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಮಾರ್ಷಲ್‌ಗಳ ಸಹಾಯದಿಂದ ಪೀಠದಲ್ಲಿ ಆಸೀನರಾದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮತ್ತೆ ಮುಂದೂಡಿದರು.
ಬಿಜೆಪಿ ಸದಸ್ಯರು ತಮ್ಮ ವಿರುದ್ಧ ಕೊಟ್ಟಿದ್ದ ಅವಿಶ್ವಾಸ ಗೊತ್ತುವಳಿ ಕ್ರಮಬದ್ಧವಾಗಿಲ್ಲ ಎಂದು ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ತಿರಸ್ಕರಿಸಿದ್ದರು. ಬಳಿಕ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು. ಅದಾದ ಬಳಿಕ ಮತ್ತೆ ಸರ್ಕಾರ ವಿಧಾನ ಪರಿಷತ್ ಕಲಾಪ ಕರೆದಿತ್ತು. ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಅವಿಶ್ವಾಸ ವಿಚಾರದಲ್ಲಿ ಬಿಜೆಪಿಗೆ ಬೆಂಬಲ ಕೊಡಲು ನಿರ್ಧರಿಸಿ, ಅದಂತೆಯೆ ನಡೆದುಕೊಂಡಿದೆ.












Click it and Unblock the Notifications