Reservation: ಒಕ್ಕಲಿಗ, ಪಂಚಮಸಾಲಿ ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್‌ನಿಂದ ತಡೆ
ಬೆಂಗಳೂರು, ಜನವರಿ 12: ಕರ್ನಾಟಕದ ಪ್ರಬಲ ಜಾತಿ ಸಮುದಾಯಗಳಾದ ಪಂಚಮಸಾಲಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳಿಗೆ ಕರ್ನಾಟಕ ಸರ್ಕಾರ ನೀಡಿದ್ದ ಮೀಸಲಾತಿ ಹೆಚ್ಚಳ ಸಂಬಂಧದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದೆ.
ಈ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾದಂತಿದೆ. ಕರ್ನಾಟಕ ಸರ್ಕಾರದ ಮೀಸಲಾತಿ ಪರಿಷ್ಕೃತ ನಿರ್ಧಾರವನ್ನು ಪ್ರಶ್ನಿಸಿ ರಾಘವೇಂದ್ರ ಎಂಬುವವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಅಂತಿಮ ನೀಡುವವರೆಗೂ ಕರ್ನಾಟಕ ಸರ್ಕಾರ ಈ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಮೀಸಲಾತಿ ಸಂಬಂಧ ಮಹತ್ವದ ರಾಜಕೀಯ ಬೆಳವಣಿಯಾಗಿತ್ತು. 3ಎ ವರ್ಗದಲ್ಲಿದ್ದ ಒಕ್ಕಲಿಗರಿಗೆ 2ಸಿ ಅಡಿಯಲ್ಲಿ ಮೀಸಲಾತಿ ನೀಡಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಂಪುಟ ಸಮಿತಿ ಸೂಚನೆ ನೀಡಿತ್ತು. ಅಲ್ಲದೆ 3ಬಿ ವರ್ಗದಲ್ಲಿದ್ದ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಡಿ ಅಡಿಯಲ್ಲಿ ಮೀಸಲಾತಿ ನೀಡುವ ತೀರ್ಮಾನಕ್ಕೆ ಬಂದಿತ್ತು.

ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆ ಸುವರ್ಣಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸಂಪುಟ ಸಭೆಯ ಬಳಿಕ ಮಾತನಾಡಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಒಕ್ಕಲಿಗ ಮತ್ತು ಪಂಚಮಸಾಲಿ ಲಿಂಗಾಯತ ಮೀಸಲಾತಿ ಹೆಚ್ಚಳಕ್ಕೆ ಆದ್ಯತೆ ನೀಡುತ್ತೇವೆ. ಎರಡು ಕ್ಯಾಟಗರಿಗಳನ್ನು ಹೊಸದಾಗಿ ಸೃಷ್ಟಿ ಮಾಡುವ 2ಸಿ ಮತ್ತು 2ಡಿ ಕ್ಯಾಟಗರಿಗೆ ಸೇರಿಸಲಾಗುವುದು. ಮೀಸಲಾತಿ ಎಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಬಹುದು ಎಂಬುದರ ಬಗ್ಗೆ ಸದ್ಯದಲ್ಲೇ ನಿರ್ಧಾರ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು.












Click it and Unblock the Notifications