ಟೆಕ್ಕಿ ವಿರುದ್ಧದ ವರದಕ್ಷಿಣೆ ಕಿರುಕುಳ ಪ್ರಕರಣ ರದ್ದುಗೊಳಿಸದ ಕೋರ್ಟ್
ಬೆಂಗಳೂರು, ಜುಲೈ 14; ಸಾಫ್ಟ್‌ವೇರ್ ಇಂಜಿನಿಯರ್ ಸಂಜಯ್ ಹೆಗಡೆ ವಿರುದ್ಧದ ವರದಕ್ಷಿಣೆ ಕಿರುಕುಳ ಪ್ರಕರಣ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಪ್ರಕರಣದಲ್ಲಿ ಎರಡು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಆದರೆ ವರದಕ್ಷಿಣೆ ಕಿರಕುಳವೇ ಆಕೆಯ ಸಾವಿಗೆ ಕಾರಣ ಎಂದು ಆಕೆಯ ತಂದೆ ದೂರು ನೀಡಿದ್ದರು. ಈ ಆರೋಪದಲ್ಲಿ ತನ್ನ ವಿರುದ್ಧ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಲು ಟೆಕ್ಕಿ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣ ಸಂಬಂಧ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದಲ್ಲಿನಡೆಯುತ್ತಿರುವ ವಿಚಾರಣೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಈ ಹಂತದಲ್ಲೇ ಪರಿಗಣಿಸಲಾಗದು: ಐಪಿಸಿ ಸೆಕ್ಷನ್ 304 ಬಿ ಪ್ರಕಾರ ಮದುವೆಯಾದ 7 ವರ್ಷಗಳ ಒಳಗೆ ಮಹಿಳೆ ಮೃತಪಟ್ಟಿದ್ದರೆ, ಸಾವಿಗೂ ಮೊದಲು ಆಕೆ ಪತಿ ಅಥವಾ ಆತನ ಕುಟುಂಬ ಸದಸ್ಯರಿಂದ ವರದಕ್ಷಿಣೆ ಕಿರುಕುಳ ಅನುಭವಿಸಿದ್ದರೆ, ಅದನ್ನು ವರದಕ್ಷಿಣೆ ಸಾವು ಎಂದು ಕರೆಯಲಾಗುತ್ತದೆ.
ಆದರೆ, ಈ ಅರ್ಜಿದಾರರ ಪತ್ನಿ 2 ವರ್ಷಗಳಿಂದ ಪತಿಯನ್ನು ತೊರೆದು ತವರು ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದ್ದರಿಂದ, ಈ ಪ್ರಕರಣದಲ್ಲಿಐಪಿಸಿ ಸೆಕ್ಷನ್ 304 ಬಿ ಅನ್ವಯಿಸುವುದಿಲ್ಲಎಂಬ ಅರ್ಜಿದಾರರ ವಾದವನ್ನು ಈ ಹಂತದಲ್ಲಿಯೇ ಪರಿಗಣೀಸಲಾಗದು ಎಂದು ಹೈಕೋರ್ಟ್ ಹೇಳಿದೆ.

ಅಲ್ಲದೇ, ಸಾಫ್ಟ್ ವೇರ್ ಇಂಜಿನಿಯರ್ ಆದ ಅರ್ಜಿದಾರರ ವಿರುದ್ಧದ ವಿಚಾರಣೆ ಮುಂದುವರಿಸಲು ಅಗತ್ಯವಿರುವ ಸಾಕಷ್ಟು ದಾಖಲೆಗಳನ್ನು ದೂರುದಾರರು ಒದಗಿಸಿದ್ದಾರೆ. ಆದರೆ, ಈ ಹಂತದಲ್ಲೇ ರದ್ದುಪಡಿಸಲು ದಾಖಲೆಯನ್ನು ಅರ್ಜಿದಾರರು ಒದಗಿಸಿಲ್ಲಎಂದೂ ನ್ಯಾಯಪೀಠ ತಿಳಿಸಿದೆ.
ಪೂರ್ಣ ಪ್ರಮಾಣದ ವಿಚಾರಣೆ: ಪ್ರಕರಣದ ದೂರಿನ ಪ್ರಕಾರ ದೂರುದಾರರ ಪುತ್ರಿ ಸಾಯುವುದಕ್ಕೂ ಮೊದಲು ಆಕೆಯ ಪತಿಯೊಂದಿಗೆ ಮೊಬೈಲ್‌ನಲ್ಲಿಅಳುತ್ತಾ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಪತಿಯೊಂದಿಗಿನ ಆ ದಿನದ ಸಂಭಾಷಣೆಯ ಕಾರಣದಿಂದಲೋ ಅಥವಾ ಹಲವು ವರ್ಷಗಳಿಂದ ಅನುಭವಿಸಿರುವ ಕಿರುಕುಳದ ಕಾರಣದಿಂದಲೋ ಎನ್ನುವುದು ವಿಚಾರಣೆಯಿಂದಲೇ ತಿಳಿದುಬರಬೇಕಿದೆ.
ಆದ್ದರಿಂದ, ಪ್ರಕರಣದಲ್ಲಿಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 304 ಬಿ ಅಡಿಯಲ್ಲಿನ ಆರೋಪ ಸಾಬೀತುಪಡಿಸುವ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆ. ದೂರುದಾರರ ಮಗಳು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕ್ರೌರ್ಯ ಅಥವಾ ವರದಕ್ಷಿಣೆ ಕಿರುಕುಳ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದೆಯೇ ಎಂಬ ವಿಚಾರ ಪೂರ್ಣಪ್ರಮಾಣದ ವಿಚಾರಣೆಯಿಂದ ಹೊರ ಬರಬೇಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ದಂಪತಿ 2017ರಲ್ಲಿ ಮದುವೆಯಾಗಿದ್ದರು. ವಿವಾಹವಾದ ಕೆಲವೇ ದಿನಗಳಲ್ಲಿ ಗಂಡ-ಹೆಂಡತಿಯ ಸಂಬಂಧದಲ್ಲಿ ಬಿರುಕು ಮೂಡಿತ್ತು. ಇದರಿಂದ, ಪತಿಯ ಮನೆ ತೊರೆದ ಪತ್ನಿ ಬೆಂಗಳೂರಿನಲ್ಲಿರುವ ತವರು ಮನೆಗೆ ತೆರಳಿದ್ದರು. ಎರಡು ವರ್ಷಗಳಿಂದ ಇಬ್ಬರ ನಡುವೆ ರಾಜಿ ಸಂಧಾನ ಮಾಡಲು ಹಿರಿಯರು ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದವು.
ದಂಪತಿ ನಡುವೆ ಹೊಂದಾಣಿಕೆ ಮೂಡದ ಹಿನ್ನೆಲೆಯಲ್ಲಿ ಇಬ್ಬರೂ ಹಿಂದು ವಿವಾಹ ಕಾಯ್ದೆಯ ಸೆಕ್ಷ ನ್ 13 ಬಿ ಅಡಿಯಲ್ಲಿಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣಾ ಹಂತದಲ್ಲಿದ್ದಾಗಲೇ ಪತ್ನಿ 2022ರ ಜೂ.12ರಂದು ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪೊಲೀಸರಿಗೆ ದೂರು ನೀಡಿದ್ದ ಮೃತಳ ತಂದೆ, ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಮಗಳಿಗೆ ಅಳಿಯ ಸದಾ ಹಣಕ್ಕಾಗಿ ಪೀಡಿಸುತ್ತಿದ್ದ. ಎಷ್ಟೋ ಬಾರಿ ಅಳಿಯ-ಮಗಳು ಚೆನ್ನಾಗಿರಲಿ ಎಂದು ನಾನೇ ನನ್ನ ಬ್ಯಾಂಕ್ ಖಾತೆಯಿಂದ ಆತನಿಗೆ ಹಣ ವರ್ಗಾಯಿಸಿದ್ದೆ.
ಅಷ್ಟಾದರೂ ಆತ ಹಣಕ್ಕಾಗಿ ಮತ್ತೆ ಮತ್ತೆ ಪೀಡಿಸುತ್ತಿದ್ದ, ಕಿರುಕುಳ ತಾಳಲಾರದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು. ಐಪಿಸಿ ಸೆಕ್ಷ ನ್ 304ಬಿ (ವರದಕ್ಷಿಣೆ ಸಾವು), 313 (ಬಲವಂತದ ಗರ್ಭಪಾತ) ಹಾಗೂ 498ಎ (ವರದಕ್ಷಿಣೆ ಕಿರುಕುಳ) ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.












Click it and Unblock the Notifications