ಮುರುಘಾ ಸ್ವಾಮೀಜಿಗೆ ಪವರ್ ಆಫ್ ಅಟಾರ್ನಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಬೆಂಗಳೂರು, ಅ.12. ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ-ಪೋಕ್ಸೋ ಕೇಸ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಪವರ್ ಆಫ್ ಅಟಾರ್ನಿ ಜಾರಿಗೆ ಹೈಕೋರ್ಟ್ ಅನುಮತಿ ನೀಡಿದೆ.
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬ್ರಹನ್ಮಠದ ವಿದ್ಯಾಪೀಠಕ್ಕೆ ಸೇರಿದ ಸಂಸ್ಥೆಗಳಿಗೆ ಸಂಬಂಧಿಸಿದ ಪವರ್ ಆಫ್ ಅಟಾರ್ನಿಯನ್ನು ಜೈಲಿನಿಂದಲೇ ಕಾರ್ಯಗತಗೊಳಿಸುವುದಕ್ಕೆ ಆದೇಶ ನೀಡಿದೆ. ಇದರಿಂದಾಗಿ ಮಠದ ಆಡಳಿತಕ್ಕೆ ಸಂಬಂಧಿಸಿದಂತೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿವೆ. ಇನ್ನು ಮುಂದೆ ಸ್ವಾಮೀಜಿ ಯಾರ ಹೆಸರಿಗೆ ಜಿಪಿಎ ಮಾಡುತ್ತಾರೋ ಅವರಿಗೆ ಎಲ್ಲ ಅಧಿಕಾರ ವರ್ಗಾವಣೆ ಆಗಲಿದೆ.
ಪವರ್ ಆಫ್ ಅಟಾರ್ನಿ ಕಾರ್ಯಗತಕ್ಕೆ ಅನುಮತಿ ನೀಡುವ ಸಂಬಂಧ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಸ್ವಾಮೀಜಿ ಪರ ವಾದ ಆಲಿಸಿದ ಬಳಿಕ ನ್ಯಾಯಪೀಠ, ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಪವರ್ ಆಫ್ ಅಟಾರ್ನಿ ಕಾರ್ಯಗತಕ್ಕೆ ಅನುಮತಿ ನೀಡುವಂತೆ ಕೋರಿ ಜೈಲಿನ ಅಧೀಕ್ಷಕರಿಗೆ ಅರ್ಜಿದಾರರು ಮನವಿ ಸಲ್ಲಿಸಬೇಕು. ಆ ಮನವಿಯನ್ನು ಅಧೀಕ್ಷಕರು ಪರಿಗಣಿಸಬೇಕು ಎಂದು ಆದೇಶ ನೀಡಿತು.
ಅಲ್ಲದೆ, ಪವರ್ ಆಫ್ ಅಟಾರ್ನಿ ಕಾರ್ಯಗತ ಮಾಡಿದ ನಂತರ ಅದರ ದಾಖಲೆಗಳನ್ನು ತನಿಖಾಧಿಕಾರಿಗಳು ಪಡೆದು, ಅರ್ಜಿದಾರರ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ವಿದ್ಯಾಪೀಠದ ಸಂಸ್ಥೆಗಳ ನೌಕರರು ಮತ್ತು ಇತರೆ ಸಿಬ್ಬಂದಿಗೆ ವೇತನ ವಿತರಿಸುವುದಕ್ಕೆ ಸಂಬಂಧಿಸಿದ ಚೆಕ್‌ಗಳಿಗೆ ಶರಣರು ಅ.3,6 ಮತ್ತು 9ರಂದು ಶರಣರು ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿಯೇ ಸಹಿ ಮಾಡಬಹುದು ಎಂದು ಸೆ.೩೦ರಂದು ಹೈಕೋರ್ಟ್ ಆದೇಶಿಸಿತ್ತು. ಆದರೆ, ಪವರ್ ಆಫ್ ಅಟಾರ್ನಿ ಕಾರ್ಯಗತಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ನೀಡಿರಲಿಲ್ಲ. ಇದರಿಂದ ಪವರ್ ಆಫ್ ಅಟಾರ್ನಿ ಕಾರ್ಯಗತಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೋರಿ ಶರಣರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಬುಧವಾರ ಅದರ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮೇಲಿನ ಆದೇಶ ಅರ್ಜಿ ಇತ್ಯರ್ಥಪಡಿಸಿದೆ.
ಅಲ್ಲದೆ, ಈ ಆದೇಶ ಅಕ್ಟೋಬರ್ ತಿಂಗಳಿಗೆ ವೇತನ ವಿತರಿಸುವುದಕ್ಕೆ ಮಾತ್ರ ಅನ್ವಯಿಸಲಿದೆ. ನೌಕರರಿಗೆ ವೇತನ ಪಾವತಿಸುವುದಕ್ಕೆ ಸಂಬಂಧಿಸಿದ ಚೆಕ್‌ಗಳನ್ನು ಬಿಟ್ಟು ಇತರೆ ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ನೀಡಲಾಗಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿತು.
ಪವರ್ ಆಫ್ ಅಟಾರ್ನಿ:
ಚೆಕ್‌ಗೆ ಸಹಿ ಹಾಕುವ ಈ ಅನುಮತಿ ಅಕ್ಟೋಬರ್ ತಿಂಗಳಿಗೆ ಮಾತ್ರ ಈ ಆದೇಶ ಅನ್ವಯ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಮುಂದಿನ ತಿಂಗಳಿನಿಂದ ಚೆಕ್ ಗಳಿಗೆ ಸಹಿ ಹಾಕುವ ಅಧಿಕಾರವನ್ನು ಸ್ವಾಮೀಜಿಯಿಂದ ಮತ್ತೊಬ್ಬರಿಗೆ ವರ್ಗಾಯಿಸುವ ಸಂಬಂಧ ಪವರ್ ಆಫ್ ಅಟಾರ್ನಿ ವ್ಯವಸ್ಥೆ ಮಾಡಬೇಕು. ಈ ಸಂಬಂಧದ ಮನವಿಯನ್ನು ವಿಚಾರಣಾ ನ್ಯಾಯಾಲಯ ಸಲ್ಲಿಸಿಬೇಕು. ನ್ಯಾಯಾಲಯ ಮನವಿ ಪರಿಗಣಿಸಿ ಕಾನೂನು ಪ್ರಕಾರ ಆದೇಶ ಮಾಡಬಹುದು ಎಂದು ನ್ಯಾಯಪೀಠ ಆದೇಶ ನೀಡಿದೆ.ಇದಕ್ಕೂ ಮುನ್ನ ಸ್ವಾಮೀಜಿ ಪರ ವಕೀಲರು, ಚಕ್ ಗೆ ಸಹಿ ಹಾಕುವ ಕುರಿತು ವಿವರವಾದ ಮಾಹಿತಿ ಸಲ್ಲಿಸಿದರು.
ನ್ಯಾಯಪೀಠ ಅಚ್ಚರಿ:
ಗುರುವಾರ ಚೆಕ್ ಗಳನ್ನು ವಿವರವಾಗಿ ಪರಿಶೀಲಿಸಿದ ನ್ಯಾಯಪೀಠ, "ಎಲ್ಲಾ ಚೆಕ್ ಗಳೂ ಸೆಲ್ಫ್ ಆರ್ ಟಿ ಜಿ ಎಸ್ ಎಂದಿವೆ.14,30 ಲಕ್ಷಗಳಷ್ಟು ಬೃಹತ್ ಮೊತ್ತದ ಈ ಚೆಕ್ ಗಳನ್ನು ಸೆಲ್ಫ್ ಎಂದು ನಮೂದಿಸಿಕೊಂಡು ಬಂದಿದ್ದೀರಿ. ಯಾಕೊ ಸರಿ ಕಾಣುತ್ತಿಲ್ಲ. ಈ ಮನವಿಯಲ್ಲಿ ಸ್ಪಷ್ಟತೆಯೇ ಇಲ್ಲ. ನೌಕರರಿಗೆ ಸಂಬಳ ನೀಡಬೇಕಾದ ಚೆಕ್ ಗಳು ಸೆಲ್ಫ್ ಎಂದು ತೋರಿಸುತ್ತಿದ್ದೀರಲ್ಲಾ " ಎಂದು ಅನುಮಾನ ವ್ಯಕ್ತಪಡಿಸಿತ್ತು.
ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಕಿರಣ್ ಜವಳಿ ಆಕ್ಷೇಪವ್ಯಕ್ತಪಡಿಸಿ, ಅರ್ಜಿದಾರರು ಸಲ್ಲಿಸಿರುವ ಪ್ರಸ್ತಾವ ಮೇಲ್ನೋಟಕ್ಕೆ ಸಮರ್ಪಕವಾಗಿಲ್ಲ. ಈ ಪ್ರಸ್ತಾವವನ್ನು ನ್ಯಾಯಪೀಠವು ಚಿತ್ರದುರ್ಗ ಸೆಷನ್ಸ್ ಕೋರ್ಟ್ ಗೇ ವರ್ಗಾಯಿಸುವುದು ಸೂಕ್ತ. ಅಲ್ಲಿನ ನ್ಯಾಯಾಧೀಶರೇ ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಬೇಕೆಂದರು.ನಿಮ್ಮ ಪ್ರಸ್ತಾವಸ್ಪಷ್ಟವಾಗಿ ವಿವರಿಸಿ. ನೌಕರರು ಹಸಿವಿನಿಂದ ಬಳಲಬಾರದು ಎಂಬುದಷ್ಟೇ ಕೋರ್ಟ್ ಕಾಳಜಿ. ಆದರೆ, ನೀವು ಈ ರೀತಿ ಸೆಲ್ಫ್ ಚೆಕ್ ಗಳನ್ನು ತೋರಿಸುತ್ತಿರುವುದು ಸರಿಯಲ್ಲ. ಸೆಷನ್ಸ್ ನ್ಯಾಯಾಲಯ ಇದನ್ನು ತಕ್ಷಣವೇ ಪರಿಶೀಲಿಸುವಂತೆ ಆದೇಶಿಸುತ್ತೇವೆ" ಎಂದು ಮೌಖಿಕವಾಗಿ ಹೇಳಿತು.
ಸ್ವಾಮೀಜಿ ಏಕೈಕ ಟ್ರಸ್ಟಿ:
ಸ್ವಾಮೀಜಿ ಪರ ವಕೀಲರು, ಸ್ವಾಮೀಜಿ ವಿದ್ಯಾಪೀಠದ ಏಕೈಕ ಟ್ರಸ್ಟಿಯಾಗಿದ್ದು, ಚೆಕ್ ಹಾಗೂ ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅನುಮತಿ ನೀಡಲು ವಿಚಾರಣಾಧೀನ ನ್ಯಾಯಾಲಯ ಅನುಮತಿ ನಿರಾಕರಿಸಿದೆ. ಇದರಿಂದಾಗಿ ಸಿಬ್ಬಂದಿಗೆ ವೇತನ ಭತ್ಯೆ ನೀಡಲು ಸಮಸ್ಯೆಯಾಗುತ್ತಿದೆ, ಸುಮಾರು 200 ಚಕ್ ಗಳಗೆ ಸ್ವಾಮೀಜಿ ಸಹಿ ಹಾಕಬೇಕಿದೆ. ಹಾಗಾಗಿ ಅಧೀನ ನ್ಯಾಯಾಲಯದ ಆದೇಶ ರದ್ದು ಮಾಡಬೇಕು, ನ್ಯಾಯಾಂಗ ಬಂಧನಲ್ಲಿದಲ್ಲಿರುವ ಸ್ವಾಮೀಜಿಗೆ ಸಹಿ ಹಾಕಲು ಅನುಮತಿ ನೀಡಬೇಕು ಎಂದು ಕೋರಿದರು.
ಸಿಬ್ಬಂದಿಯ ವೇತನಕ್ಕೆ ತೊಂದರೆ: ಚಿತ್ರದುರ್ಗದ ವಿಶೇಷ ಕೋರ್ಟ್ ಸೆಪ್ಟೆಂಬರ್ 20ರಂದು ಮಾಡಿರುವ ಆದೇಶವನ್ನು ರದ್ದು ಮಾಡಬೇಕು. ಅಲ್ಲದೇ, ಮಠ ಹಾಗೂ ವಿದ್ಯಾಪೀಠದ ನಿರ್ವಹಣೆ ಮತ್ತು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿಸಲು ಮಠ ಮತ್ತು ವಿದ್ಯಾಪೀಠದ ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅವಕಾಶ ಮಾಡಿಕೊಡುವಂತೆ ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಮೇಲ್ವಿಚಾರಕರಿಗೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.












Click it and Unblock the Notifications