5 ಜನರನ್ನು ಭೀಕರವಾಗಿ ಕೊಂದಿದ್ದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ಕಾಯಂ!
ಬೆಂಗಳೂರು ಜೂ.10: ಭೀಕರ ಹತ್ಯೆಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಗೆ ಇದೀಗ ಗಲ್ಲು ಶಿಕ್ಷೆ ಕಾಯಂ ಆಗಿದೆ. ಪತ್ನಿ ಶೀಲ ಶಂಕಿಸಿ ಪತ್ನಿ ಹಾಗೂ ಮೂವರು ಮಕ್ಕಳು ಸೇರಿದಂತೆ 5 ಜನರನ್ನ ಕೊಂದಿದ್ದ ವ್ಯಕ್ತಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನ ಇದೀಗ ಹೈಕೋರ್ಟ್ ಕೂಡ ಕಾಯಂಗೊಳಿಸಿದೆ. ಈ ಮೂಲಕ ಮಹತ್ವದ ತೀರ್ಪು ಹೊರಡಿಸಿದೆ ಹೈಕೋರ್ಟ್.
ಮತ್ತೊಂದ್ಕಡೆ ಮರಣ ದಂಡನೆ ವಿಧಿಸುವ ಪ್ರಕರಣಗಳ ಸಂಬಂಧ ಎದುರಾಗುವ ಸಮಸ್ಯೆಗಳ ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಇಲಾಖೆಗೆ ಮಾರ್ಗಸೂಚಿ ನೀಡಿದೆ. ಈ ಮೂಲಕ ಬಳ್ಳಾರಿ ಜಿಲ್ಲೆ ಕಂಪ್ಲಿಯ ಬೈಲೂರು ತಿಪ್ಪಯ್ಯನಿಗೆ ಮರಣದಂಡನೆ ದೃಢಪಟ್ಟಿದ್ದು, ಒಂದೋ ಈ ವ್ಯಕ್ತಿ ಇದೀಗ ಶಿಕ್ಷೆ ಅನುಭವಿಸಬೇಕು, ಇಲ್ಲ ಈಗ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕಿದೆ. ಹಾಗಾದ್ರೆ ಈ ಪ್ರಕರಣದ ಹಿನ್ನೆಲೆಯಾದರೂ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮರಣದಂಡನೆ ಶಿಕ್ಷೆಗೆ ಅರ್ಹ!
ಇನ್ನು ಮರಣದಂಡನೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಅಪರಾಧಿ ಬೈಲೂರು ತಿಪ್ಪಯ್ಯ ಹಾಗೂ ಮರಣ ದಂಡನೆ ಶಿಕ್ಷೆ ದೃಢೀಕರಣಕ್ಕಾಗಿ ಪ್ರಾಸಿಕ್ಯೂಷನ್ ಇಲಾಖೆ ಸಲ್ಲಿಸಿದ್ದ 2 ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಹಾಗೂ ನ್ಯಾಯಮೂರ್ತಿ ಜಿ.ಬಸವರಾಜು ಅವರಿದ್ದ ವಿಭಾಗೀಯಪೀಠ ಮಹತ್ವದ ಆದೇಶವನ್ನು ನೀಡಿದೆ. ಪ್ರಸ್ತುತ ಪ್ರಕರಣ ಮರಣದಂಡನೆ ಶಿಕ್ಷೆಗೆ ಅಗತ್ಯವಿರುವ ಅಪರೂಪದ ಪ್ರಕರಣಗಳಲ್ಲಿ ಒಂದಾಗಿದೆ. ಆರೋಪಿ ಮರಣದಂಡನಿಗೆ ಅರ್ಹನಾಗಿದ್ದಾನೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಆತ್ಮ ಸಾಕ್ಷಿಯನ್ನು ಆಘಾತಗೊಳಿಸಿದೆ
ಇದರ ಜೊತೆಗೆ ಪ್ರಕರಣದಲ್ಲಿ ಅರ್ಜಿದಾರರಾಗಿರುವ ಆರೋಪಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 3 ಮಕ್ಕಳು ಸೇರಿದಂತೆ 5 ಜನರ ಸಾವಿಗೆ ಕಾರಣವಾಗಿದ್ದಾರೆ. ಅಪರಾಧ ದುಷ್ಕೃತ್ಯ & ಕ್ರೌರ್ಯವನ್ನ ಗಂಭೀರವಾಗಿ ಪರಿಗಣಿಸಿ ವಿಚಾರಣಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ದೃಢೀಕರಿಸುವುದು ಬಿಟ್ಟು ಬೇರೆ ಯಾವುದೇ ಆಯ್ಕೆ ಇಲ್ಲವಾಗಿದೆ ಎಂದು ಹೈಕೋರ್ಟ್ ಪೀಠ ತಿಳಿಸಿದೆ. ಹಾಗೇ, ಘಟನೆ ಬಳಿಕ ಆರೋಪಿ ಮನೆಯಿಂದ ಹೊರಬಂದು ವೈಶ್ಯೆಯನ್ನು ಕೊಂದಿದ್ದೇನೆ ಎಂದು ಘಂಟಾ ಘೋಷವಾಗಿ ಹೇಳಿದ್ದಾನೆ. ಈ ಘಟನೆ ನ್ಯಾಯಾಪೀಠ ಸೇರಿದಂತೆ ಎಲ್ಲರ ಆತ್ಮ ಸಾಕ್ಷಿಯನ್ನು ಆಘಾತಗೊಳಿಸಿದೆ ಎಂದು ತಿಳಿಸಿದೆ.
ನ್ಯಾಯಾಲಯದಿಂದ ಮಾರ್ಗಸೂಚಿ ಪ್ರಕಟ
ಅಲ್ಲದೆ ಘಟನೆಯಲ್ಲಿ ಗಾಯಗೊಂಡು ಬದುಕುಳಿದಿರುವ ಮಗುವಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಡತ ರವಾನಿಸುವಂತೆ ಹೈಕೋರ್ಟ್‌ನ ಹೆಚ್ಚುವರಿ ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದೆ. ಮರಣದಂಡನೆ ದೃಢೀಕರಿಸುವಂತೆ ಕೋರಿ ಸಲ್ಲಿಸುವ ಅರ್ಜಿಗಳ ವಿಚಾರಣೆಗೆ ಪ್ರಾಸಿಕ್ಯೂಷನ್ ಇಲಾಖೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನ ಕೂಡ ಹೈಕೋರ್ಟ್ ಪ್ರಕಟಿಸಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದ್ದು, ಮುಂದೆ ಓದಿ.
ಸಂಪೂರ್ಣ ಮಾಹಿತಿ ಪಡೆಯಬೇಕು
ಮರಣದಂಡನೆಗೆ ಗುರಿಯಾದ ಕೈದಿಗಳು ಜೈಲುಗಳಲ್ಲಿ ನಡವಳಿಕೆ. ಅಪರಾಧಿ ಮಾನಸಿಕ ಹಾಗೂ ಶಾರೀರಿಕ ಮೌಲ್ಯಮಾಪನ ಮಾಡಬೇಕು. ಕೈದಿ ಕುಟುಂಬದ ಹಿನ್ನೆಲೆ ವಿವರ, ಒಡಹುಟ್ಟಿದವರು, ಸಂಬಂಧ ಹಿಂಸೆ ಅಥವಾ ನಿರ್ಲಕ್ಷದ ವಿವರಣೆ. ಪೋಷಕರ ಅಭಿಪ್ರಾಯ ಕುಟುಂಬ ಸದಸ್ಯರ ಜೊತೆ ಸಂಬಂಧ, ಶೈಕ್ಷಣಿಕ ಹಿನ್ನೆಲೆ. ಜೊತೆಗೆ ಸಾಮಾಜಿಕ ಆರ್ಥಿಕ ಹಿನ್ನೆಲೆ, ಅಪರಾಧ ಪೂರ್ವದಲ್ಲಿನ ಅಪರಾಧಗಳ ಕುರಿತ ವಿವರಣೆಯನ್ನು ಪಡೆದುಕೊಳ್ಳಬೇಕು. ಹೀಗೆ ಈ ಎಲ್ಲ ವಿವರಗಳನ್ನು ಶಿಕ್ಷೆಯನ್ನು ದೃಢೀಕರಣ ಕೋರಿ ಸಲ್ಲಿಸುವ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು ಎಂದು ನ್ಯಾಯಪೀಠ ಪ್ರಾಸಿಕ್ಯೂಷನ್ ಇಲಾಖೆಗೆ ನಿರ್ದೇಶನ ನೀಡಿದೆ.
ಭೀಕರ ಘಟನೆ ನಡೆದಿದ್ದು ಹೇಗೆ?
ಬಳ್ಳಾರಿಯ ಹೊಸಪೇಟೆ ಕಂಪ್ಲಿಯ ಕೆಂಚನಗುಡ್ಡ ವಾಸಿ ಕೂಲಿ ಕಾರ್ಮಿಕ ಈ ಬೈಲೂರು ತಿಮ್ಮಯ್ಯ ತನ್ನ ಪತ್ನಿಗೆ ಕಳೆದ 12 ವರ್ಷಗಳಿಂದ ಅಕ್ರಮ ಸಂಬಂಧ ಇದೆ ಎಂದು ಸದಾ ಗಲಾಟೆ ನಡೆಸುತ್ತಿದ್ದ. ಅಲ್ಲದೆ, ನಮಗೆ ಇರುವ 4 ಮಕ್ಕಳಲ್ಲಿ ಒಬ್ಬರು ಮಾತ್ರ ನನಗೆ ಜನಿಸಿದ್ದಾರೆ. ಇನ್ನುಳಿದವರು ಅಕ್ರಮ ಸಂತಾನ ಎಂದು ಆರೋಪಿಸಿ ಜಗಳ ಮಾಡುತ್ತಿದ್ದ. ಇದೇ ರೀತಿ ಗಲಾಟೆ ಮುಂದುವರೆಯುತ್ತಿದ್ದು, 2012ರ ಫೆಬ್ರವರಿ 25 ರಂದು ಪತ್ನಿ ಪಕೀರಮ್ಮ ಸೇರಿ ಅತ್ತಿಗೆ ಗಂಗಮ್ಮ, ಮಕ್ಕಳಾದ ಪವಿತ್ರ ಹಾಗೂ ನಾಗರಾಜು, ರಾಜಪ್ಪ ಮೇಲೆಯೂ ಹಲ್ಲೇ ನಡೆಸಿದ್ದನಂತೆ ಬೈಲೂರು ತಿಮ್ಮಯ್ಯ. 5 ಮಂದಿಗೂ ತೀವ್ರತರದ ಗಾಯಗಳಾಗಿದ್ದು ಸಾವನ್ನಪ್ಪಿದ್ದರು.
ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿಯ ವಿರುದ್ಧ 36 ಸಾಕ್ಷಿಗಳು ಮತ್ತು 51 ಸಾಕ್ಷ್ಯಾದಾರಗಳ ಜತೆ ಬಳ್ಳಾರಿಯ ಸೆಷನ್ಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ್ದ ಬಳ್ಳಾರಿ ಸೆಷನ್ಸ್ ನ್ಯಾಯಾಲಯ ಆರೋಪಿಗೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 302(ಕೊಲೆ)ರ ಅಡಿಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಇದೀಗ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಈ ಆದೇಶವನ್ನು ಎತ್ತಿಹಿಡಿದಿದೆ.












Click it and Unblock the Notifications