Karnataka Rain: ಭಾರಿ ಮಳೆ ಮುನ್ಸೂಚನೆ; ಇಡೀ ರಾಜ್ಯಕ್ಕೆ 'ಯೆಲ್ಲೋ ಅಲರ್ಟ್'
ರಾಜ್ಯದಲ್ಲಿ ಎಷ್ಟು ಬಿಸಿಲು, ತಾಪಮಾನ ಹೆಚ್ಚಾಗಿತ್ತೋ ಅಷ್ಟೇ ತಂಪಾಗುವ ಸಾಧ್ಯತೆ ಹೆಚ್ಚಿದೆ. ಮುಂಗಾರು ಆರಂಭಕ್ಕೆ ಮುನ್ನವೇ ರಾಜ್ಯದಲ್ಲಿ ಮಳೆ ಅಬ್ಬರ ಶುರುವಾಗಿದ್ದು, ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೂ ಹವಾಮಾನ ಇಲಾಖೆ 'ಹಳದಿ ಎಚ್ಚರಿಕೆ' ನೀಡಿದೆ.
ಹೌದು ರಾಜ್ಯಾದ್ಯಂತ ಮುಂದಿನ ಒಂದು ವಾರ ಭಾರಿ ಮಳೆಯ ಮುನ್ಸೂಚನೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಮೇ17ರವರೆಗೆ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ.

ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಒಂದೇ ಬಾರಿ ಹಳದಿ ಎಚ್ಚರಿಕೆ ನೀಡಿದೆ. ಬಿರುಗಾಳಿ, ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.
ಕಳೆದ ಒಂದು ವಾರದಿಂದ ಭಾರಿ ಮಳೆ
ಕಳೆದ ಒಂದು ವಾರದಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ಭಾರಿ ಮಳೆಯಾಗುತ್ತಿದೆ. ಭಾನುವಾರ ರಾಯಚೂರು ಜಿಲ್ಲೆಯಲ್ಲಿ 135 ಮಿ.ಮೀ ಮಳೆಯಾಗಿದ್ದು ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ.
ಹಾಸನ 127.5 ಮಿ.ಮೀ, ತುಮಕೂರು 124.5 ಮಿ.ಮೀ, ಚಿಕ್ಕಮಗಳೂರು 118.5 ಮಿ.ಮೀ, ಶಿವಮೊಗ್ಗ 109.5 ಮಿ.ಮೀ, ಮೈಸೂರು 101 ಮಿ.ಮೀ, ಕೋಲಾರ 100.5 ಮಿ.ಮೀ, ದಕ್ಷಿಣ ಕನ್ನಡ 87.5 ಮಿ.ಮೀ, ಬೆಳಗಾವಿ 76.5 ಮಿ.ಮೀ, ಚಿಕ್ಕಬಳ್ಳಾಪುರ 73.5 ಮಿ.ಮೀ, ಬೆಂಗಳೂರು ನಗರ 70.5 ಮಿ.ಮೀ, ಚಿತ್ರದುರ್ಗ 66 ಮಿ.ಮೀ, ಬಳ್ಳಾರಿ 64.5 ಮಿ.ಮೀ, ಮಂಡ್ಯ 64.5 ಮಿ.ಮೀ, ಯಾದಗಿರಿ 61.5 ಮಿ.ಮೀ, ಹಾವೇರಿ 54 ಮಿ.ಮೀ, ಕೊಡಗು 52.5 ಮಿ.ಮೀ, ದಾವಣಗೆರೆ 51.5 ಮಿ.ಮೀ, ಬೆಂಗಳೂರು ಗ್ರಾಮಾಂತರ 48.5 ಮಿ.ಮೀ, ರಾಮನಗರ 45 ಮಿ.ಮೀ, ಕಲಬುರಗಿ 41.5 ಮಿ.ಮೀ, ಚಾಮರಾಜನಗರ 37.5 ಮಿ.ಮೀ, ಗದಗ 35.5 ಮಿ.ಮೀ, ಉತ್ತರ ಕನ್ನಡ 32.5 ಮಿ.ಮೀ, ಬೀದರ್ 32 ಮಿ.ಮೀ, ಉಡುಪಿ 24.5 ಮಿ.ಮೀ, ಬಾಗಲಕೋಟೆ 24 ಮಿ.ಮೀ, ಕೊಪ್ಪಳ 23 ಮಿ.ಮೀ, ವಿಜಯಪುರ 21.5 ಮಿ.ಮೀ, ಧಾರವಾಡ 20.5 ಮಿ.ಮೀ ಮಳೆಯಾಗಿದೆ.
ಮೇ 17ರವರೆಗೆ ಎಲ್ಲಾ ಜಿಲ್ಲೆಗಳಿಗೂ ಬಿರುಗಾಳಿ ಸಹಿತ ವ್ಯಾಪಕ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಮಿಂಚು, ಗುಡುಗು ಹೆಚ್ಚಿರಲಿದ್ದು, ಮಳೆಯಾಗುವ ಸಂದರ್ಭದಲ್ಲಿ ಮರದ ಅಡಿಯಲ್ಲಿ, ಎತ್ತರವಾದ ಪ್ರದೇಶದಲ್ಲಿ ನಿಲ್ಲದಂತೆ ಸೂಚನೆ ನೀಡಲಾಗಿದೆ.












Click it and Unblock the Notifications