ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಮು ಗಲಭೆಕೋರರಿಗೆ ಹೇಮಂತ್ ನಿಂಬಾಳ್ಕರ್ ಕಟ್ಟೆಚ್ಚರ

By ಡಿ.ಪಿ.ನಾಯ್ಕ, ಕಾರವಾರ
|
Google Oneindia Kannada News

ಕಾರವಾರ, ಅಕ್ಟೋಬರ್ 07 : ಕರಾವಳಿ ಭಾಗದಲ್ಲಿ ಕೋಮು ಗಲಭೆ ಹೆಚ್ಚಾಗುತ್ತಿದ್ದು, ಅದಕ್ಕೆ ಕಾರಣರಾಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ವಲಯದ ಪೊಲೀಸ್ ಮಹಾ ನಿರ್ದೇಶಕ ಹೇಮಂತ್ ನಿಂಬಾಳ್ಕರ್ ಅವರು ಕಟ್ಟೆಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಇರುವ ಅವಶ್ಯಕ ಕಾಯ್ದೆಗಳನ್ನು ಅನುಸರಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ನನ್ನ ವ್ಯಾಪ್ತಿಯ ಎಲ್ಲ 4 ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಉತ್ತರ ಕನ್ನಡದ ಕಾರವಾರದಲ್ಲಿ ನಡೆದ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಅವರು ಶನಿವಾರ ಮಾತನಾಡಿದರು.

Hemant Nimbalkar warns against communal violence

ಭಟ್ಕಳದಲ್ಲಿ ಪುರಸಭೆಯ ವಿಚಾರವಾಗಿ ನಡೆದ ಗಲಭೆಯೊಂದರಲ್ಲಿ ಕೆಲವರು ಪೊಲೀಸರ ಮೊಬೈಲ್ ಅನ್ನು ಕಸಿದುಕೊಂಡಿರುವುದು ಗೊತ್ತಾಗಿದೆ. ಹೀಗಾಗಿ ಅವರ ಮೇಲೆ ಯಾವ ರೀತಿ ದೂರು ದಾಖಲಾಗಿದೆಯೋ ಆ ಪ್ರಕಾರ ತನಿಖೆ ಕೈಗೊಳ್ಳಲಾಗುತ್ತದೆ. ಬೇಕು ಅಂತಲೇ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ತನಿಖೆ ಮುಗಿದ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದರು.

ದಕ್ಷಿಣ ಕನ್ನಡದಲ್ಲಿ ಐಸಿಸ್ ಚಟುವಟಿಕೆಯ ಕುರಿತು ತನಿಖೆ

ದಕ್ಷಿಣ ಕನ್ನಡದಲ್ಲಿ ಐಸಿಸ್ ಚಟುವಟಿಕೆಗಳಿಗೆ ತರಬೇತಿ ನಡೆಯುತ್ತಿದೆ ಎಂಬ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಹೇಳಿಕೆ ನೀಡಿರುವ ವ್ಯಕ್ತಿಯು ತನ್ನ ಧ್ವನಿ ಸಂದೇಶದಲ್ಲಿ ಯುವಕರು ದಾರಿ ತಪ್ಪುತ್ತಿದ್ದು, ಅದನ್ನು ತಡೆಯುವ ಉದ್ದೇಶದಿಂದ ಈ ಸಂದೇಶ ಕಳುಹಿಸಿರುವುದಾಗಿ ಹೇಳಿಕೊಂಡಿದ್ದಾನೆ ಎಂಬ ಮಾಹಿತಿ ನೀಡಿದರು.

ಈ ಬಗ್ಗೆ ತನಿಖೆ ನಡೆಸಿ ವಿಷಯದ ಸತ್ಯಾಸತ್ಯತೆಯನ್ನು ಕಂಡು ಹಿಡಿಯಲಾಗುವುದು. ಧ್ವನಿ ಸಂದೇಶ ಕಳುಹಿಸಿದ ವ್ಯಕ್ತಿಯ ವಿಚಾರಣೆಯನ್ನೂ ಕೂಡ ಮಾಡಲಾಗುವುದು. ಒಂದು ವೇಳೆ ಇದು ನಿಜ ಎಂದು ಕಂಡು ಬಂದರೆ ಅದನ್ನು ತಡೆಯಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಿಂಬಾಳ್ಕರ್ ವಿವರಿಸಿದರು.

ಸಾಮಾಜಿಕ ಜಾಲತಾಣದ ಬಳಕೆಯ ಅರಿವು

ಪ್ರತಿಯೊಬ್ಬರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಾವು ವಿಷಯಗಳನ್ನು ಪೋಸ್ಟ್ ಮಾಡುವಾಗ ಅದರ ಪರಿಣಾಮ ಏನಾಗಬಹುದು ಎಂಬುದನ್ನು ಅರಿತಿರಬೇಕು. ಅದು ಶಾಂತಿ ಭಂಗವಾಗುವ, ಕೋಮುವಾದವನ್ನು ಪ್ರಚೋದಿಸುವ ವಿಷಯವೇ ಎಂಬುದರ ಕುರಿತು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಜಾಗರೂಕರಾಗಿ ಒಳ್ಳೆಯ ವಿಚಾರಗಳನ್ನಷ್ಟೆ ಕಳುಹಿಸಬೇಕೆ ಹೊರತು ಅಶಾಂತಿಯನ್ನು ಉಂಟುಮಾಡುವ ಹೇಳಿಕೆಗಳನ್ನು ಕಳುಹಿಸಬಾರದು. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಇಂತಹ ಎಲ್ಲ ವಿಚಾರಗಳನ್ನು ಪರಿಶೀಲನೆ ಮಾಡಲು ಪ್ರತಿ ಜಿಲ್ಲೆಯಲ್ಲೂ ವಿಶೇಷ ಘಟಕ ಇದೆ. ಎಲ್ಲ ವೈಯಕ್ತಿಕ ಸಂದೇಶಗಳನ್ನು ಗಮನಿಸಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರ ಪಾತ್ರ ಅತೀ ಮುಖ್ಯ ಎಂದರು.

ಮಾದಕ ವಸ್ತು ಜಾಲದ ಮೂಲ ಹುಡುಕಬೇಕು

ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸರಬರಾಜನ್ನು ತಡೆಯಲು ಎಲ್ಲ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಶೇಷ ಸೂಚನೆ ನೀಡಲಾಗಿದೆ. ಕೇವಲ ಸ್ಥಳೀಯವಾಗಿ ಗಾಂಜಾ ಮಾರಾಟ ಮಾಡುವ ವ್ಯಕ್ತಿಗಳ ಮೇಲಷ್ಟೇ ಕ್ರಮ ಕೈಗೊಳ್ಳುವುದಲ್ಲದೆ ಅದರ ಮೂಲವನ್ನು ಪತ್ತೆಹಚ್ಚಿ, ಆ ಮೂಲಕ ಅದನ್ನು ಬುಡದಿಂದಲೇ ಕಿತ್ತುಹಾಕುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.

English summary
Hemant Nimbalkar, IPS, has warned those who are trying to instigate communal violence. He said stringent action will be taken against communal rioters. He was speaking at a function in Karwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X