Heavy Rain Alert: ಆಗುಂಬೆ ಘಾಟ್ ಹೆದ್ದಾರಿ ಇಂದಿನಿಂದ ಸೆ.30ರವರೆಗೆ ಭಾರೀ ವಾಹನಗಳಿಗೆ ಬಂದ್
ಬೆಂಗಳೂರು, ಜೂನ್ 15: ರಾಜ್ಯಾದ್ಯಂತ ಮಳೆ ಅಬ್ಬರಿಸುತ್ತಿದೆ. ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತದೆ. ಹೀಗಾಗಿ ಪ್ರಮುಖ ಘಾಟ್ ವಲಯಗಳಲ್ಲಿನ ಹೆದ್ದಾರಿ ರಸ್ತೆಯಲ್ಲಿ ಭೂಕೂಸಿತ, ಗುಡ್ಡ ಕುಸಿತಗಳು ಸಂಭವಿಸುತ್ತದೆ. ಸುರಕ್ಷತಾ ದೃಷ್ಟಿಯಿಂದ ಭಾರೀ ವಾಹನಗಳಿಗೆ ಸಂಚಾರ ನಿಷೇಧಿಸಲಾಗುತ್ತದೆ. ಇದೀಗ ಶಿವಮೊಗ್ಗ ಜಿಲ್ಲಾಧಿಕಾರಿ ಆಗುಂಬೆ ಘಾಟ್ ಅನ್ನು ಬಂದ್ ಮಾಡಿ ಕ್ರಮ ವಹಿಸಿದ್ದಾರೆ.
ನಾಡಿನಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದೆ. ಶಿವಮೊಗ್ಗ ವ್ಯಾಪ್ತಿಯಲ್ಲಿ ವಾರಗಳಿಂದಲೂ ಮಳೆ ಮುಂದುವರಿದಿದೆ. ಗುಡ್ಡ ಪ್ರದೇಶಗಳಿಂದ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಮುಂಜಾಗೃತ ಕ್ರಮವಾಗಿ ತೀರ್ಥಹಳ್ಳಿ-ಉಡುಪಿ ಸಂಪರ್ಕಿಸುವ ಆಗುಂಬೆ ಘಾಟ್ ಹೆದ್ದಾರಿ (169 A) ರಸ್ತೆಯನ್ನು ಭಾರೀ ವಾಹನಗಳಿಗೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಇಂದಿನಿಂದಲೇ ಭಾರೀ ವಾಹನಗಳಿಗೆ ನಿಷೇಧ
ಮುಂದಿನ ಇನ್ನಷ್ಟು ದಿನಗಳ ಕಾಲ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆ ಆಗಲಿದೆ. ಈಗಾಗಲೇ ಹವಾಮಾನ ಇಲಾಖೆ ಭಾರೀ ಮಳೆಗೆ 'ರೆಡ್ ಅಲರ್ಟ್' ನೀಡಿದೆ. ಮಳೆ ಮುಂದುವರಿದರೆ, ಗುಡ್ಡ ಕುಸಿತದಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಲಘು ವಾಹನಗಳನ್ನು ಬಿಟ್ಟು ಭಾರೀ ವಾಹನಗಳ ಸಂಚಾರವನ್ನು ಆಗುಂಬೆ ಘಾಟ್ ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಈ ಆದೇಶವು ಇಂದು ಜೂನ್ 15 ರಿಂದ ಸೆಪ್ಟಂಬರ್ 30 ರವರೆಗೆ ಜಾರಿಯಲ್ಲಿರಲಿದೆ.
ಪರ್ಯಾಯ ಮಾರ್ಗ ತಿಳಿಯಿರಿ
ಭಾರೀ ವಾಹನಗಳು ತೀರ್ಥಹಳ್ಳಿಗೆ ಉಡುಪಿಯಿಂದ ಕುಂದಾಪುರ, ಸಿದ್ದಾಪುರ, ಮಾಸ್ತಿಕಟ್ಟೆ ಮಾರ್ಗವಾಗಿ ತೀರ್ಥಹಳ್ಳಿಗೆ ಬರುವಂತೆ ಜಿಲ್ಲಾಡಳಿತ ಪರ್ಯಾಯ ಮಾರ್ಗ ಸೂಚಿಸಿದೆ. ಮುಂದಿನ ಮೂರುವರೆ ತಿಂಗಳು ಇದೇ ಮಾರ್ಗ ಅನುಸರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಮಲ್ಪೆ, ಉಡುಪಿಯಿಂದ ಆಗುಂಬೆ ತಿರುವುಗಳ ಮೂಲಕ ತೀರ್ಥಹಳ್ಳಿಗೆ ಸಂಪರ್ಕಿಸಲಾಗುತ್ತದೆ. ಇದೀಗ ಈ ಹೆದ್ದಾರಿ ಭಾರೀ ವಾಹನಗಳಿಗೆ ನಿಷೇಧಿಸಲಾಗಿದೆ.
ಭಾರೀ ಮಳೆ ಎಚ್ಚರಿಕೆ: ರೆಡ್ ಅಲರ್ಟ್
ಮುಂದಿನ ಮೂರು ದಿನ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು, ಐಎಂಡಿ ರೆಡ್ ಅಲರ್ಟ್ ನೀಡಿದೆ. ಕಳೆದೊಂದು ವಾರದಿಂದ ಈ ಜಿಲ್ಲೆಗಳಲ್ಲಿ 200 ಮಿಲಿ ಮೀಟರ್‌ಗೂ ಹೆಚ್ಚಿನ ಮಳೆ ಆಗುತ್ತಿದೆ. ಆಯಾ ಜಿಲ್ಲಾಡಳಿತಗಳು ಅಗತ್ಯ ಮುಂಜಾಗ್ರತೆ ವಹಿಸಿವೆ. ಮಂಗಳೂರಿನಲ್ಲಿ ನೆನ್ನೆಯಿಂದ ಸುರಿದ ಮಳೆಗೆ ಅಲ್ಲಲ್ಲಿ ರಸ್ತೆಗಳು, ವಿವಿಧ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.












Click it and Unblock the Notifications