ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ
ಬೆಂಗಳೂರು, ಮೇ 07 : ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ಬಾರಿ ಮಳೆಯಾಗಿದೆ. ಗುಡುಗು, ಗಾಳಿ ಸಹಿತವಾಗಿ ಸುರಿದ ಮಳೆಯ ಆರ್ಭಟಕ್ಕೆ ಕೆಲವು ಜಿಲ್ಲೆಗಳಲ್ಲಿ ಹಾನಿ ಉಂಟಾಗಿದೆ.
ಮಂಗಳವಾರ ಚಾಮರಾಜನಗರ, ಮೈಸೂರು, ಬೆಂಗಳೂರು, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಾರಿ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಸಂಜೆ 7.30ರಿಂದ ಗುಡುಗು ಸಹಿತ ಮಳೆ ಸುರಿದಿದೆ.
ಬೆಂಗಳೂರಿನಲ್ಲಿ ಸಂಜೆ ಸುರಿದ ಮಳೆ, ಜೋರಾಗಿ ಬೀಸಿದ ಗಾಳಿಗೆ ಆರ್‌ಎಂವಿ 2ನೇ ಹಂತದ 7ನೇ ಅಡ್ಡ ರಸ್ತೆಯಲ್ಲಿ ಮರ ನೆಲಕ್ಕುರುಳಿದೆ. ನಗರದಲ್ಲಿ 12ಕ್ಕೂ ಹೆಚ್ಚು ಮರಗಳು ಉರುಳಿವೆ. ಬೈಕ್ ಮತ್ತು ಕಾರುಗಳ ಮೇಲೆ ಮರ ಬಿದ್ದು ಹಾನಿಯಾಗಿದೆ.

ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಾ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಬಾರಿ ಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಸುರಿದು ಬೆಂಗಳೂರಿನಲ್ಲಿ ಸಂಜೆ ಜನ ಜೀವನ ಅಸ್ತವ್ಯಸ್ತವಾಯಿತು.
ಯಶವಂತಪುರ, ಜಯನಗರ, ಮೆಜೆಸ್ಟಿಕ್, ಪೀಣ್ಯ, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಕತ್ರಿಗುಪ್ಪೆ, ಬಸವನಗುಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಾರಿ ಮಳೆಯಾಗಿದೆ. ಹಲವು ಕಡೆ ರಸ್ತೆಯಲ್ಲಿ ನೀರು ತುಂಬಿದೆ. ವಿದ್ಯುತ್, ಕೇಬಲ್ ಸಂಪರ್ಕ ಕಡಿತಗೊಂಡಿದೆ.
* ನೆಲಮಂಗಲದಲ್ಲಿ ಬಾರಿ ಮಳೆಯಾಗಿದೆ. ತರಕಾರಿ ಮಾರುಕಟ್ಟೆಗೆ ನೀರು ನುಗ್ಗಿ ವ್ಯಾಪಾರಿಗಳು ಪರದಾಡಿದರು. ಕಾಲುವೆ ತುಂಬಿ ಕೊಳಚೆ ನೀರು ಅಂಗಡಿಗಳಿಗೆ ನುಗ್ಗಿತು.
* ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ತೆಂಗಿನ ಮರಕ್ಕೆ ಸಿಡಿಲು ಬಡಿದು ಅದರಲ್ಲಿ ಬೆಂಕಿ ಹೊತ್ತಿಕೊಂಡಿದೆ.

* ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ಸಿದ್ದಾಪುರ ಸೇರಿದಂತೆ ಹಲವು ಕಡೆ ಮಂಗಳವಾರ ಮಧ್ಯಾಹ್ನ ಗಾಳಿ ಸಹಿತ ಮಳೆಯಾಗಿದೆ.
* ಮೈಸೂರಿನಲ್ಲಿಯೂ ಮಳೆಯಾಗಿದ್ದು, ಕೆಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
* ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದು ಹಾನಿ ಉಂಟಾಗಿದೆ.
* ಕೋಲಾರ ಜಿಲ್ಲೆಯ ಮಾಲೂರು, ಬಂಗಾರಪೇಟೆ, ಮುಳಬಾಗಿಲು, ಕೆಜಿಎಫ್‌ಗಳಲ್ಲಿ ಉತ್ತಮ ಮಳೆಯಾಗಿದೆ.
* ಆನೇಕಲ್‌ನಲ್ಲಿ ಆಲಿಕಲ್ಲು ಸಹಿತವಾಗಿ ಮಳೆ ಸುರಿದಿದೆ. ಜೋರಾಗಿ ಗಾಳಿ ಬೀಸಿದ್ದರಿಂದ ಎರಡು ತೆಂಗಿನ ಮರ ಧರೆಗುರುಳಿದೆ.












Click it and Unblock the Notifications