ವಿರಾಜಪೇಟೆ, ಬಂಡೀಪುರದಲ್ಲಿ ಮಳೆ, ರೈತರಲ್ಲಿ ಸಂತಸ
ಮಡಿಕೇರಿ, ಮಾರ್ಚ್ 20 : ವಿರಾಜಪೇಟೆ ಮತ್ತು ಬಂಡೀಪುರದಲ್ಲಿ ಬುಧವಾರ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ರೈತರು ಸಂತಸಗೊಂಡಿದ್ದಾರೆ. ಬಂಡೀಪುರದಲ್ಲಿ ಮಳೆಯಾಗಿದ್ದರಿಂದ ಕಾಳ್ಗಿಚ್ಚಿನ ಆತಂಕ ದೂರವಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಮಳೆಯಾಗಿದೆ. ಪಾಲಿಬೆಟ್ಟ, ನೆಲ್ಯಹುದಿಕೇರಿ, ಅಮ್ಮತ್ತಿ, ಸುಂಟಿಕೊಟ್ಟ, ನಾಪೋಕ್ಲು, ಚೇರಂಬಾಣೆ ಮುಂತಾದ ಪ್ರದೇಶದಲ್ಲಿ ಮಳೆಯಾಗಿದೆ.
ಹಲವು ದಿನಗಳಿಂದ ಮಳೆ ಇಲ್ಲದೇ ಬಿಸಿಲಿನ ತಾಪಕ್ಕೆ ಕಾಫಿ ಗಿಡ, ಕರಿಮೆಣಸಿನ ಬಳ್ಳಿ ಒಣಗಿ ಹೋಗಿದ್ದವು. ಬೆಳೆಗಾರರು ಕಾಫಿ ತೋಟಕ್ಕೆ ಕೆರೆಯಿಂದ ನೀರು ಹಾಯಿಸುತ್ತಿದ್ದರು. ಮಳೆ ಬಂದಿರುವುದರಿಂದ ರೈತರು ಸಂತಸಗೊಂಡಿದ್ದಾರೆ.

ವಿರಾಜಪೇಟೆಯಲ್ಲಿ 27 ಮಿ.ಮೀ, ಸೋಮವಾರಪೇಟೆಯಲ್ಲಿ 26 ಮಿ.ಮೀ.ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆ ಸುರಿದಿದ್ದರಿಂದ ಸಂತಸಗೊಂಡಿದ್ದಾರೆ. ಈ ವಾರದಲ್ಲಿ ಮತ್ತೆ ಮಳೆಯಾಗುವ ನಿರೀಕ್ಷೆ ಇದೆ.
ಬಂಡೀಪುರದಲ್ಲಿಯೂ ಮಳೆ : ಬಂಡೀಪುರದ ಎ.ಎಂ.ಗುಡಿ ವಲಯದಲ್ಲಿ ಮಳೆಯಾಗಿದ್ದು ಒಣಗಿ ನಿಂತಿದ್ದ ಕಾಡಿನಲ್ಲಿ ಕಾಳ್ಗಿಚ್ಚು ಉಂಟಾಗುವ ಆತಂಕ ದೂರವಾಗಿದೆ. ಸಣ್ಣಪುಟ್ಟ ಹಳ್ಳಗಳಲ್ಲಿ ನೀರು ತುಂಬಿಕೊಂಡಿದ್ದು ಕಾಡುಪ್ರಾಣಿಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಅಣ್ಣೂರು, ಚೊಕ್ಕನಹಳ್ಳಿಯಲ್ಲಿ 20.5 ಮೀ.ಮೀ, ಹುಣಸೂರಿನ ಹನಗೋಡಿನಲ್ಲಿ 7 ಮೀ.ಮೀ ಮಳೆಯಾಗಿದೆ. ಪಿರಿಯಾಪಟ್ಟಣದಲ್ಲಿ ತುಂತುರು ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹೇಳಿದೆ.












Click it and Unblock the Notifications