Heavy Rain alert: ರಾಜ್ಯದಲ್ಲಿ ಮುಂದಿನ ಮೂರು ಗಂಟೆಯಲ್ಲಿ ರಣಭೀಕರ ವರುಣಾರ್ಭಟ!
weather alert: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದೀಗ ಸೋಮವಾರ ಸಂಜೆ ಮೂರು ಗಂಟೆ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿದ್ದು, ವಾಯುಭಾರ ಕುಸಿತ ಸಹ ಮುಂದುವರಿದಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಭಾಗದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆಯಾಗಿದೆ. ಇದೀಗ ಸೋಮವಾರವೂ ರಾಜ್ಯದ ಹಲವು ಭಾಗದಲ್ಲಿ ಮಳೆಯಾಗಿದೆ. ಸೋಮವಾರ ರಾತ್ರಿ ಮೂರು ಗಂಟೆಗಳ ಕಾಲ ರಾಜ್ಯದ ಹಲವು ಭಾಗದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ಮೂರು ಗಂಟೆಯ ಅವಧಿಯಲ್ಲಿ ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ಮಿಂಚು ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಶಾನ್ಯ ಮಾನ್ಸೂನ್ ಪ್ರಭಾವ: ಇನ್ನು ಈಶಾನ್ಯ ಮಾನ್ಸೂನ್‌ನ ಪ್ರಭಾವವೂ ರಾಜ್ಯದ ಮೇಲೆ ಆಗುತ್ತಿದೆ. ಕಳೆದ ಎರಡು ಮೂರು ದಿನದಿಂದ ಈಶಾನ್ಯ ಮಾನ್ಸೂನ್ ಪ್ರಭಾವ ತೀವ್ರವಾಗಿದೆ. ಇನ್ನು ಈಶಾನ್ಯ ಮಾನ್ಸೂನ್‌ನಿಂದಾಗಿ ದಕ್ಷಿಣ ಒಳನಾಡಿನಲ್ಲಿ ಹಾಗೂ ಕರಾವಳಿ ಕರ್ನಾಟಕದ ಹೆಚ್ಚಿನ ಸ್ಥಳಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಅಕ್ಟೋಬರ್ 27ರ ವರೆಗೆ ಮಳೆ: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ಟೋಬರ್ 27ರ ವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಉತ್ತರ ತಮಿಳುನಾಡು ಹಾಗೂ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ನೈರುತ್ಯ ಭಾಗ ಹಾಗೂ ಬಂಗಾಳ ಕೊಲ್ಲಿಯ ಮೇಲಿನ ವಾಯುಭಾರ ಹಾಗೂ ಚಂಡಮಾರುತದ ಚಲನೆ ಇದೆ.
ಬೆಂಗಳೂರಿನಲ್ಲಿ ಹೇಗಿದೆ ಹವಾಮಾನ: ಇನ್ನು ಬೆಂಗಳೂರಿನಲ್ಲಿ ಮುಂದಿನ 24 ಗಂಟೆಯ ಅವಧಿಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಾಧರಣ ಮಳೆ ಗುಡುಗು ಸಹಿತ ರಾತ್ರಿ ಹಾಗೂ ಬೆಳಿಗ್ಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಗರಿಷ್ಠ ತಾಪಮಾನವು 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಜನ ಜೀವನ ಅಸ್ತವ್ಯಸ್ತ: ಇನ್ನು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿರುವುದರಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಂಗಳೂರಿನ ಹಲವು ರಸ್ತೆಗಳಲ್ಲಿ ನೀರು ನಿಂತುಕೊಂಡಿದ್ದು, ಜನ ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ. ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಇದೇ ಪರಿಸ್ಥಿತಿ ಇದೆ. ಇನ್ನು ರಾಜ್ಯದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಮನೆಯ ಪ್ರಮುಖ ವಸ್ತುಗಳು ಮಳೆಗೆ ಹಾನಿಯಾಗಿವೆ.
ನಿರಂತರ ಮಳೆಯಿಂದಾಗಿ ರೈತರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹತ್ತಿ ಸೇರಿದಂತೆ ಹಲವು ಬೆಳೆಗಳು ನಿರಂತರ ಮಳೆಯಿಂದ ಹಾನಿಯಾಗಿವೆ.












Click it and Unblock the Notifications