Weather Report: ಫೆಂಗಲ್ ಚಂಡಮಾರುತ ಎಫೆಕ್ಟ್; ರಾಜ್ಯದ 10 ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ
ಫೆಂಗಲ್ ಚಂಡಮಾರುತ ತಮಿಳುನಾಡಿನ ಕರಾವಳಿ, ಪುದುಚೆರಿಯಲ್ಲಿ ಶನಿವಾರ ಅಪ್ಪಳಿಸಲಿದ್ದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಮಿಳುನಾಡು, ಪುದುಚೆರಿಯಲ್ಲಿ ವ್ಯಾಪಕ ಮಳೆಯಾಗಲಿದ್ದು ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಮತ್ತು ಹಲವು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ಘೋಷಣೆ ಮಾಡಲಾಗಿದೆ. ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರ ಮತ್ತು ಭಾನುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ದಕ್ಷಿಣ ಒಳನಾಡಿನ 10 ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದ್ದು, ಬಳಿಕ ಮಳೆ ಪ್ರಮಾಣ ಪೂರ್ತಿಯಾಗಿ ಕಡಿಮೆಯಾಗಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಚಾಮರಾಜನಗರ, ತುಮಕೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಮುನ್ಸೂಚನೆ ಕೊಟ್ಟಿದೆ.
ಶನಿವಾರ ಮಾತ್ರವಲ್ಲದೆ ಭಾನುವಾರ ಕೂಡ ವ್ಯಾಪಕ ಮಳೆಯಾಗುವ ನಿರೀಕ್ಷೆಯಿಂದ ಮುಖ್ಯವಾಗಿ ಭಾನುವಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೆಚ್ಚಿದ ಚಳಿಗೆ ನಡುಗಿದ ಜನ
ರಾಜ್ಯದಲ್ಲಿ ಬೇಸಿಗೆಯಲ್ಲಿ ಮಿತಿ ಮೀರಿದ ಬಿಸಿಲಿಗೆ ಜನ ಸಾಕ್ಷಿಯಾಗಿದ್ದರು. ಅದಾದ ಬಳಿಕ ಮುಂಗಾರು ಅಬ್ಬರಿಸಿತ್ತು, ಭಾರಿ ಮಳೆಯಿಂದಾಗಿ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿ ಹರಿದಿವೆ. ಬಹುತೇಕ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಬಿಸಿಲು, ಮಳೆಯಂತೆ ಈ ಬಾರಿ ಚಳಿ ಕೂಡ ತೀವ್ರವಾಗಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಈಗಾಗಲೇ ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು ಜನ ನಡುಗಿದ್ದಾರೆ. ಆರಂಭದಲ್ಲೇ ಚಳಿ ಇಷ್ಟೊಂದು ತೀವ್ರವಾಗಿದ್ದರೆ ಮುಂದಿನ ದಿನಗಳಲ್ಲಿ ಇನ್ನೆಷ್ಟು ಹೆಚ್ಚಬಹುದು ಎನ್ನುವ ಆತಂಕ ಶುರುವಾಗಿದೆ.












Click it and Unblock the Notifications