Karnataka monsoon: ರಾಜ್ಯದ ಈ ಭಾಗಗಳಲ್ಲಿ ಮುಂದಿನ 3 ದಿನಗಳ ಕಾಲ ಭಾರೀ ಮಳೆ
ಕರ್ನಾಟಕ, ಜುಲೈ, 12: ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದು ದೊಡ್ಡ ಅನಾಹುತಗಳನ್ನೇ ಸೃಷ್ಟಿಸಿದ್ದಾನೆ. ಅದರಲ್ಲೂ ಕರಾವಳಿ ಭಾಗದಲ್ಲಂತೂ ಕಳೆದ ಒಂದು ವಾರದಿಂದ ಮಳೆರಾಯ ಬೋರ್ಗರೆದಿದ್ದ. ಆದರೆ ಇಂದು ಮಾತ್ರ ಮಂಗಳೂರಿನ ಬಹುತೇಕ ಕಡೆಗಳಲ್ಲಿ ಬಿಸಿಲಿನ ವಾತಾರಣ ಮುಂದುವರೆದಿದೆ. ಇನ್ನು ನಾಳೆಯಿಂದ ಅಂದರೆ ಜುಲೈ 13ರಿಂದ 3 ದಿನಗಳ ಕಾಲ ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಂದು ವಾರದ ಕಾಲ ಎಡಬಿಡದೇ ಮಳೆ ಸುರಿದು ಭಾರೀ ಅನಾಹುತ ಸೃಷ್ಟಿಸಿದ ನಂತರ ಕರಾವಳಿ ಭಾಗದಲ್ಲಿ ಈಗ ಬಿಸಿಲಿನ ವಾತಾವರಣ ಮುಂದುವರೆದಿದೆ. ಇದರಿದ ಇಲ್ಲಿನ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಮಾತ್ರ ಆರಂಭದಿಂದಲೂ ಮುಂಗಾರು ಮಳೆ ಅನಾಹುತಗಳನ್ನೇ ಸೃಷ್ಟಿಸಿದೆ. ಆದರೆ ಇದೀಗ ಕರಾವಳಿ ಅಲ್ಲದೆ ರಾಜ್ಯದ ಬಹುತೇಕ ಕಡೆ ಎರಡು ದಿನದಿಂದ ಮಳೆ ಪ್ರಮಾಣ ಕೊಂಚ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ ನೋಡುವುದಾದರೆ ರಾಜ್ಯದ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದ್ದು, ಇಲ್ಲಿ ಸಂಜೆ ವೇಳೆಗೆ ಮಳೆರಾಯ ಅಬ್ಬರಿಸುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಅಲ್ಲದೆ ಕೆಲವೆಡೆ ಮುಂದಿನ ಮೂರು ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂದು ಸೂಚನೆಯನ್ನು ಸಹ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಭಾಗಗಳಲ್ಲಿ ಭಾರೀ ಮಳೆ ಬೀಳಲಿದೆ. ಅಲ್ಲದೆ ಕರಾವಳಿಯ ಜಿಲ್ಲೆಗಳು ಹಾಗೂ ಮಲೆನಾಡಿನ ಭಾಗದಲ್ಲೀ ಭಾರೀ ಮಳೆ ಸುರಿಯಲಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳ ಕಾಲ ಯಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ.
ಇನ್ನು ಉತ್ತರ ಕರ್ನಾಟಕದ ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹಾಗೆಯೇ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ, ಕೋಲಾರ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.
ಅಲ್ಲದೆ ಮೂರು ದಿನಗಳಿಂದ ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣವೂ ಗಣನೀಯವಾಗಿ ಇಳಿಕೆಯಾಗಿದೆ. ಕೊಡಗು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆ ಕಾವೇರಿಯಲ್ಲಿ ನೀರಿನ ಪ್ರಮಾಣವೂ ಇಳಿಮುಖ ಆಗಿದೆ ಎಂದು ತಿಳಿದುಬಂದಿದೆ.
ಕೆಆರ್‌ಎಸ್ ಜಲಾಶಯಕ್ಕೆ ಇಂದು ಬೆಳಗ್ಗೆ 4976 ಕ್ಯೂಸೆಕ್ ನೀರು ಹರಿದು ಬಂದಿತ್ತು. ಕಳೆದ ವರ್ಷ ಇದೇ ದಿನ 72,282 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಸದ್ಯ ಜಲಾಶಯದ ನೀರಿನ ಮಟ್ಟ 88 ಅಡಿಯಷ್ಟಿದೆ. ಅಂದರೆ 4 ದಿನದ ಅಂತರದಲ್ಲಿ ಹತ್ತು ಅಡಿಯಷ್ಟು ನೀರು ಜಲಾಶಯಕ್ಕೆ ಹರಿದುಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 122.56 ಅಡಿಯಷ್ಟು ನೀರು ಸಂಗ್ರಹವಾಗಿ ಜಲಾಶಯ ಬಹುತೇಕ ತುಂಬುವ ಹಂತಕ್ಕೆ ಬಂದಿತ್ತು.
ಅದೇ ರೀತಿ ಕೊಡಗಿನಲ್ಲಿ ಮೂರ್ನಾಲ್ಕು ದಿನ ಬಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಕೊಡಗಿನಲ್ಲಿ ಮಳೆ ಸುರಿದರೆ ಮಾತ್ರ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಲಿದೆ ಎಂದು ಇಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ. ಇದೇ ರೀತಿ ಕೇರಳದಲ್ಲೂ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಕಬಿನಿ ಜಲಾಶಯದ ನೀರಿನ ಒಳಹರಿವಿನ ಪ್ರಮಾಣವೂ ಕುಸಿತ ಕಂಡಿದೆ.
ಬುಧವಾರ ಜಲಾಶಯಕ್ಕೆ 2856 ಕ್ಯೂಸೆಕ್ ನೀರು ಒಳಬರುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ 34000 ಕ್ಯೂಸೆಕ್ ನೀರು ಬರುತ್ತಿತ್ತು. ಸದ್ಯ ಜಲಾಶಯದ ನೀರಿನ ಮಟ್ಟ 2268.93 ಅಡಿಯಿದೆ. ಭರ್ತಿಯಾಗಲು ಇನ್ನೂ 14 ಅಡಿ ನೀರು ಬರಬೇಕಾಗಿದೆ.












Click it and Unblock the Notifications