Karnataka Rains: ಆಗಸ್ಟ್ 27ರಿಂದ ರಾಜ್ಯಕ್ಕೆ ಮತ್ತೆ ಭಾರೀ ಮಳೆ, ಈ ಜಿಲ್ಲೆಗಳ ಶಾಲೆಗಳಿಗೆ ರಜೆ ಸಾಧ್ಯತೆ
ಬೆಂಗಳೂರು, ಆಗಸ್ಟ್ 25: ಕರ್ನಾಟಕದಾದ್ಯಂತ ಅಬ್ಬರಿಸಿದ್ದ ಮುಂಗಾರು ಮಳೆ ತಣ್ಣಗಾಯಿತು, ಬಿಸಿಲಿನ ದರ್ಶನವಾಗುತ್ತಿದೆ ಅನ್ನುವಷ್ಟರಲ್ಲಿ ಮತ್ತೆ ಭಾರೀ ಮಳೆ ಮುನ್ಸೂಚನೆ ಎಚ್ಚರಿಕೆ ನೀಡಲಾಗಿದೆ. ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಆಗಸ್ಟ್ 27 ರಿಂದ ಧಾರಾಕಾರವಾಗಿ ಜೋರು ಮಳೆ ಬರಲಿದೆ. ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ತಿಂಗಳುಗಳ ಕಾಲ ನಿರಂತರವಾಗಿ ಸುರಿದಿದ್ದ ಮಳೆ ತಾತ್ಕಾಲಿಕವಾಗಿ ಬ್ರೇಕ್ ನೀಡಿದೆ. ಈ ವಿರಾಮ ಗೌರಿ ಗಣೇಶ ಹಬ್ಬಕ್ಕೆ (ಆಗಸ್ಟ್ 27ಕ್ಕೆ) ಕೊನೆಯಾಗಲಿದೆ. ಮತ್ತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ. ಹವಾಮಾನದಲ್ಲಿ ದಿಢೀರ್ ಬದಲಾವಣೆ, ವೈಪರೀತ್ಯಗಳೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಆಗಸ್ಟ್ 27ರ ಬುಧವಾರದಿಂದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕನಿಷ್ಠ 150 ಮಿಲಿ ಮೀಟರ್‌ಗೂ ಹೆಚ್ಚು ಮಳೆ ನಿರೀಕ್ಷೆ ಇದೆ. ಈ ಜಿಲ್ಲೆಗಳಿಗೆ ಮೂರು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಆಗಸ್ಟ್ 27, 28 ರಂದು ಕಲಬುರಗಿ, ಬೀದರ್, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಹಾಗೂ ಒಂದು ದಿನ ಬೆಳಗಾವಿ, ಕೊಡಗು, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆ ಪ್ರಯುಕ್ತ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಭಾಗಗಳ ಹಲವೆಡೆ 48 ಗಂಟೆಗಳಲ್ಲಿ ಅಲ್ಲಲ್ಲಿ ಕನಿಷ್ಠ ಗರಿಷ್ಠ 115 ಮಿಲಿ ಮೀಟರ್‌ನಷ್ಟು ಮಳೆ ಆಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಕರ್ನಾಟಕ ಕೇಂದ್ರದ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ.
ಈ ಮಳೆ ಹಿನ್ನೆಲೆಯಲ್ಲಿ ಆಗಸ್ಟ್ 28, 29ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಭಾರಿ ಮಳೆಗೆ ಶಾಲೆಗಳಿಗೆ ರಜೆ ನೀಡುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಈ ತಿಂಗಳಲ್ಲಿ ಮಲೆನಾಡು, ಕರಾವಳಿ ಭಾಗಗಳಲ್ಲಿ ಶಾಲೆಗಳು ಮಳೆ ರಜೆ ಪಡೆದಿವೆ. ಇದು ತಿಂಗಳಾಂತ್ಯಕ್ಕೂ ವಿಸ್ತರಣೆ ಆಗಬಹುದು ಎನ್ನಲಾಗಿದೆ.
ಮುಂಗಾರು ಚುರುಕಿಗೆ ಏನು ಕಾರಣ?
ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಲು ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಉಂಟಾಗುತ್ತಿರುವ ಬದಲಾವಣೆ, ಸ್ಟ್ರಫ್ ಕಾರಣವಾಗಿದೆ. ಕಳೆದ ವಾರ ಒಡಿಶಾ ಕರಾವಳಿ, ಆಂಧ್ರ ಪ್ರದೇಶ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿತ್ತು. ಇದರಿಂದ ಬೆಂಗಳೂರು ಸೇರಿದಂತೆ ಒಳನಾಡು ಹಾಗೂ ಕರಾವಳಿಗೆ ಭಾರೀ ಮಳೆ ಉಂಟಾಗಿತ್ತು. ಇದೀಗ ಮತ್ತೆ ಅಂತದ್ದೆ ಪರಿಸ್ಥಿತಿ ನಿರ್ಮಾಣವಾಗಿದೆ. ಹವಾಮಾನ ಬದಲಾವಣೆಗಳಿಂದ ದಿಢೀರ್ ಮುಂಗಾರು ಚುರುಕಗೊಂಡಿದೆ.
ಬೆಂಗಳೂರು ಹವಾಮಾನ ವರದಿ
ಬೆಂಗಳೂರಿನಲ್ಲಿ ಸದ್ಯ ಮಳೆ ಎಚ್ಚರಿಕೆ ಇಲ್ಲ. ಇಲ್ಲಿ 29 ಗರಿಷ್ಠ ತಾಪಮಾನ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಆಗಸ್ಟ್ 27ರ ನಂತರ ವ್ಯಾಪಕ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications