ಇವರು ಬಡವರಿರಬಹುದು, ಇವರ ಜೀವನ ಪ್ರೀತಿಗೆ ಬಡತನವಿಲ್ಲ!

Posted By:
Subscribe to Oneindia Kannada

ಇಲ್ಲಿ ಅಳಲಿದೆ, ಶ್ರಮವಿದೆ, ಸ್ವಾವಲಂಬನೆಯ ಹಿತವಿದೆ, ಖುಷಿ ಇದೆ, ತಾಳ್ಮೆ, ಸಹನೆ, ನಗುವಿನ ಹದವಿದೆ, ವಿಶ್ವಾಸ, ನಂಬಿಕೆ, ಪ್ರೀತಿಯೆಂಬ ಮಾಧುರ್ಯವಿದೆ. ಇದು ಬಡತನವನ್ನೇ ಹಾಸಿ ಹೊದ್ದು ಮಲಗುತ್ತಿರುವ ಬಡವರ ಬದುಕಿನ ಚಿತ್ರಣ. ಒಟ್ಟಿನಲ್ಲಿ ಇವರು ಅವರದೇ ಅಂಗೈ ಅಗಲ ಸಾಮ್ರಾಜ್ಯದಲ್ಲಿ ರಾಜ, ರಾಣಿಯರಾಗಿರುತ್ತಾರೆ.

"ವಿಶಾಲವಾದ ಜಗತ್ತಲ್ಲಿ ಬದುಕಲು ಏನೂ ಇಲ್ಲ ಎಂದಾಕ್ಷಣ ಅವರು ಬಡವರಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡುವವರೆಲ್ಲಾ ಶ್ರೀಮಂತರಲ್ಲ. ಜಗತ್ತಿನಲ್ಲಿ ಪ್ರತಿಯೊಬ್ಬರು ಒಂದಲ್ಲಾ ಒಂದು ಕಾರಣದಿಂದ ಬಡವರೇ. ಬಡವರಿಗೆ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಬಿಸಿಲು, ಮಳೆ, ಚಳಿಗೆ ಜಗ್ಗದೆ ದುಡಿಯುವುದು ತಪ್ಪುವುದಿಲ್ಲ, ರಸ್ತೆ ಮೇಲೆ ಮಲಗಿ ಚಂದ್ರ, ನಕ್ಷತ್ರ ನೋಡುತ್ತಾ ಕನಸು ಕಾಣುವ ಪರಿಪಾಠ ನೀಗುವುದಿಲ್ಲ. ಆದರೂ ಇವರು ಜೀವನದ ಕೊನೆಯವರೆಗೂ ಶ್ರಮದ ತತ್ವ ಇಟ್ಟುಕೊಂಡೇ ಬಾಳಬಂಡಿ ಎಳೆಯುತ್ತಾರೆ.

'ನಾನು ಬಡವ, ನಾನು ಬಡವಿ, ನಮ್ಮ ಪ್ರೀತಿಗೆ ಬಡತನವಿಲ್ಲ, ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ನಮ್ಮ ಸಂಸಾರ ಆನಂದ ಸಾಗರ, ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ, ಅಂಗೈ ಅಗಲ ಜಾಗ ಸಾಕು ಹಾಯಾಗಿ ಇರೋಕೆ' ಇದು ನಮ್ಮ ನಾಡಿನ ಮೂಲೆಮೂಲೆಯಲ್ಲೂ ಕಷ್ಟ ಕಾರ್ಪಣ್ಯದಿಂದ ಬದುಕುವ ಜನರ ಜೀವನ ಸಿದ್ಧಾಂತವಿದು.

ನಾವು ಬಡವರನ್ನು ಕಂಡು ಮರುಗುತ್ತೇವೆ, ಕೊರಗುತ್ತೇವೆ, ಕೊನೆಗೆ ಕಣ್ಣೀರಿಡುತ್ತೇವೆ, ಕರುಳು ಕಿವುಚುವ ಸಂದರ್ಭ ಕಂಡರೆ ನಮ್ಮಲ್ಲಿರುವ ಹಣವನ್ನು ಕೊಟ್ಟು ನಮ್ಮದು ಪರೋಪಕರದ ಬದುಕು ಎಂದು ದೊಡ್ಡದಾಗಿ ಹೇಳುತ್ತಾ ತಿರುಗುತ್ತೇವೆ. ಕೊಂಚ ಯೋಚಿಸಿ, ನಾವು ಅವರಿಗೆ ನೀಡುವ ಸಹಾಯದಿಂದ ಕ್ಷಣಕಾಲಕ್ಕೆ ಸುಖ ಸಿಗುತ್ತದೆ. ಆದರೆ ಇವರ ಮುಂದಿನ ಬದುಕು?

ಫೇಸ್ ಬುಕ್ , ವಾಟ್ಸಪ್, ಟ್ವಿಟರ್ ಹೀಗೆ ನಾನಾ ಮಾಧ್ಯಮಗಳ ಮೂಲಕ ಹರಿದಾಡಿದ, ಮನಸ್ಸನ್ನು ತಟ್ಟಿದ ಕೆಲವು ಫೋಟೋಗಳನ್ನು ನಮ್ಮದೇ ಬರಹದೊಂದಿಗೆ ನಿಮ್ಮ ಮುಂದೆ ಇರಿಸಿದ್ದೇವೆ. 'ಒಂದು ಚಿತ್ರ ಸಾವಿರ ಪದಗಳಿಗೆ ಸಮ'.ಈ ಫೋಟೋಗಳನ್ನು ನೋಡಿ, ನಿಮ್ಮ ಅಭಿಪ್ರಾಯ, ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನಮ್ಮ ಪ್ರೀತಿಗೆ ಬಡತನವಿಲ್ಲ

ನಮ್ಮ ಪ್ರೀತಿಗೆ ಬಡತನವಿಲ್ಲ

ವಯಸ್ಸಾದರೂ ಕೆಲಸ ಮಾಡುವ ಉತ್ಸಾಹ ಕುಂದಿಲ್ಲ. ದಶಮಾನಗಳ ಪ್ರೀತಿಯಲ್ಲಿ ಬಡತನ ಕಾಣದ ಅಜ್ಜಿ ತಾತ ಹೇಳುವುದೇನು? 'ಜಗತ್ತಿನಲ್ಲಿ ಗಂಡ ಹೆಂಡತಿಯ ಪ್ರೀತಿ ಎಲ್ಲಾ ಪ್ರೀತಿಗಳಿಗಿಂತ ದೊಡ್ಡ ಪ್ರೀತಿ. ನಾವು ಕೊನೆವರೆಗೂ ಯಾವುದೇ ಕಷ್ಟ ಬಂದರೂ ಜೊತೆಯಲ್ಲೇ ಇರೋಣ ಎಂದು ನೀನು ನನಗೆ ಆಗಾಗ ಹೇಳ್ತಾ ಇದ್ದೆ. ಈಗ ನಾವು ಹಾಗೇ ಇದ್ದೇವಲ್ವಾ?'[ಚಿತ್ರ: ವಿಜಯ ರಾಘವನ್]

ನೀನು ನನಗೇನೂ ಭಾರವಲ್ಲ.

ನೀನು ನನಗೇನೂ ಭಾರವಲ್ಲ.

ಏಯ್ ನೀನು ನಿನ್ನದೇ ಆದ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ನನ್ನ ಬಡತನದ ಬದುಕಿನ ಹೊಣೆ ಹೊತ್ತಿದ್ದೀಯಾ. ನನಗೆ ನೀನು ಎಂದೂ ಭಾರವಾಗಿಲ್ಲ. ನಿನ್ನನ್ನೂ ಎಷ್ಟು ದೂರವಾದರೂ ಹೊತ್ತು ನಡೆಯಬಲ್ಲೆ. ನೀನು ನನ್ನೊಂದಿಗೆ ಇರುವವರೆಗೆ ಮಾತ್ರ. ನಿನ್ನ ಪಾದಗಳು ನೋಯದಿರಲಿ, ಮನ ಬಾಡದಿರಲಿ ನನ್ನ ಬಡತನದ ಹಾದಿಯಲಿ.

ನನ್ನ ಹತ್ತಿರ ಇರೋದು ಒಂದೇ ಅಂಗಿ

ನನ್ನ ಹತ್ತಿರ ಇರೋದು ಒಂದೇ ಅಂಗಿ

ನೋಡಿ ಸ್ವಾಮಿ ನನ್ನ ಹತ್ತಿರ ಇರೋದು ಇದೇ ಒಂದು ಅಂಗಿ. ಇದನ್ನೇ ನಾನು ಮತ್ತೆ ನನ್ನ ತಮ್ಮ ತೊಡಬೇಕು. ಇದನ್ನು ನಾನು ನೆನ್ನೆ ತೊಟ್ಟಿದ್ದೆ. ಈಗ ಈ ಅಂಗಿಯನ್ನು ತೊಳೆದು ಹಾಕುತ್ತಿದ್ದೇನೆ. ಇದನ್ನು ನಾಳೆ ನನ್ನ ತಮ್ಮ ತೊಡುತ್ತಾನೆ. ಹೇಗಿದೆ ನಮ್ಮ ಬಡತನದ ಹೊಂದಾಣಿಕೆ

ನಗು ನಗುತಾ ನಲಿ ನಲಿ

ನಗು ನಗುತಾ ನಲಿ ನಲಿ

ಈ ಮುದ್ದು ಮಕ್ಕಳ ನಗು ನೋಡ್ರೀ, ಎಷ್ಟು ಸೊಗಸಾಗಿದೆ. ತಮ್ಮ ಕೀಟಲೆ ಕಿತಾಪತಿಗಳನ್ನು ನೆನೆದು ನಗಾಡುತ್ತಿವೆ. ಇವರ ನಗುವಿನ ಕೋಟೆಯಲ್ಲಿ ಈತನೇ ರಾಜ, ಈಕೆಯೇ ರಾಣಿ. ಈ ಫೋಟೋ ನೋಡಿ ನೀವು ನಕ್ಕು ಬಿಡಿ ನಿಮ್ಮ ಬಾಲ್ಯದ ತುಂಟತನ, ತರಲೆಗಳ ನೆನೆದು.

ನೀನಿಲ್ಲದೇ ಹೇಗೆ ಬದುಕಲಿ

ನೀನಿಲ್ಲದೇ ಹೇಗೆ ಬದುಕಲಿ

ಗಂಡನಿಲ್ಲ, ಮಕ್ಕಳಿಲ್ಲ, ನಾನೀಗ ಒಬ್ಬಂಟಿ, ಹುಟ್ಟಿನಿಂದಲೇ ಬಡತನ. ನನಗೆ ನನ್ನವರು ಎಂದು ಆಗ ಬಹಳ ಮಂದಿ ಇದ್ದರು. ಈಗ ಅವರ ಸುಳಿವೇ ಇಲ್ಲ. ಇವರೆಲ್ಲಾ ನನ್ನೊಂದಿಗೆ ಇದ್ದಾಗ ನನ್ನ ಬದುಕು ಎಂದೂ ದೊಡ್ಡ ಹೊರೆಯಾಗಿಲ್ಲ. ಈಗ ಪ್ರತಿಯೊಂದು ಕ್ಷಣವೂ ದುಸ್ತರವಾಗಿದೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಿರುವ ಮಹಿಳೆ ನೋಡಿ.

ಹಾಯ್ ಹಲೋ, ನಮಸ್ಕಾರ

ಹಾಯ್ ಹಲೋ, ನಮಸ್ಕಾರ

ಹಾಯ್ ಹಲೋ ನಮಸ್ಕಾರ..ಹೇಗಿದ್ದೀರಾ ಎಲ್ಲಾ...ನಾವಂತೂ ಫುಲ್ ಬಿಂದಾಸ್ ಆಗಿದ್ದೇವೆ, ನಾವು ಶಾಲೆಗೆ ಹೋಗೋಕೆ ರೆಡಿಯಾಗ್ತೀದ್ದೇವೆ. ನಮ್ಮ ಕುಟುಂಬವನ್ನು ಸಂತೋಷವಾಗಿಡೋದಕ್ಕೆ ಏನಾದರೂ ಸಾಧನೆ ಮಾಡಲಿಕ್ಕೆ. ಕೊನೆಗೊಮ್ಮೆ ನಿಮಗೊಂದು ಹಾಯ್ ಮತ್ತೆ bye ಇರಲಿ ಎಂದು ಹೇಳೋಣ ಎಂದು ಬಂದ್ವಿ. [ಚಿತ್ರ: ವಿಜಯ ರಾಘವನ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
These people on the street are not bothered about their future. Because they have no future at all. We have picked some heart warming rich photos of poor people. Please share your valuable thoughts.
Please Wait while comments are loading...