ಆರೋಗ್ಯ ಇಲಾಖೆಯ ಅಧಿಕಾರಿ ಅಬಕಾರಿ ಇಲಾಖೆಗೆ ವರ್ಗಾವಣೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು, ಸಿ.ಎಂ ಎಚ್ಚರಿಕೆ
ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಪತ್ರ ಬರೆದು ನಿರ್ದೇಶಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯವಾಗಿಸುವ ಬಿಜೆಪಿಯ ಸುಳ್ಳಿನ ಫ್ಯಾಕ್ಟರಿಯ ಮತ್ತೊಂದು ವಿಫಲ ಹುನ್ನಾರವಿದು. ಸನ್ಮಾನ್ಯ ಸುನೀಲ್ ಕುಮಾರ್ ಅವರೇ ದಿನಾಂಕವಿಲ್ಲದ, ರೆಫರೆನ್ಸ್ ಸಂಖ್ಯೆಯಿಲ್ಲದ ಒಂದು ನಕಲಿ ಪತ್ರವನ್ನು ಹಿಡಿದು ಜನರಲ್ಲಿ ಗೊಂದಲ ಸೃಷ್ಟಿಸಲು ಹೊರಟಿರುವ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ ? ಆರೋಗ್ಯ ಇಲಾಖೆಯ ಅಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಲು ನಮ್ಮ ನಿಯಮಗಳಲ್ಲಿ ಅವಕಾಶವೇ ಇಲ್ಲ ಎಂಬುದು ತಿಳಿಯದಷ್ಟು ಬೌದ್ಧಿಕ ದಿವಾಳಿತನವೇ ? ಈ ನಕಲಿ ಪತ್ರದ ಬಗ್ಗೆ ನಮ್ಮ ಮುಖ್ಯಮಂತ್ರಿ ಕಾರ್ಯಾಲಯದಿಂದ ಈಗಾಗಲೇ ದೂರು ದಾಖಲಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಸಮೀಪದ ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿರುವ 'ಪರಶುರಾಮ ಥೀಮ್ ಪಾರ್ಕ್' ನಲ್ಲಿ ಅನಾಥವಾಗಿರುವ ಪರುಶುರಾಮ ಪ್ರತಿಮೆ ಬಗ್ಗೆ ನಿಜವಾಗಿ ನೀವು ವಿಚಾರಮಾಡಬೇಕಾದದ್ದು. ಕಿಕ್ ಬ್ಯಾಕ್ ಅನುಮಾನ ಇರುವುದು ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ, ಥೀಮ್ ಪಾರ್ಕ್ ನಿರ್ಮಾಣ ಯೋಜನೆಯಲ್ಲಿ. ದೊಡ್ಡ ಸಂಭ್ರಮದ ಕಾರ್ಯಕ್ರಮ ಮಾಡಿ ʼಕೊಡಲಿ ಹಿಡಿದ ಪರುಶುರಾಮʼನನ್ನೇ ಅತಂತ್ರ ಮಾಡಿದ ಮಹಾನುಭಾವರು ನೀವು... ಪರಶುರಾಮನ ಪಂಚೇಂದ್ರಿಯಕ್ಕೂ (ಪಂಚ ಅಂಗಕ್ಕೂ) ಅಪಚಾರ ಮಾಡಿದ ನಿಮ್ಮಿಂದ ನೈತಿಕತೆ, ಪಾರದರ್ಶಕ ಆಡಳಿತದ ಪಾಠ ಕಲಿಯಬೇಕಾದ ದಿವಾಳಿತನ ನಮ್ಮ ಸರ್ಕಾರಕ್ಕಾಗಲಿ, ಜನನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಲಿ - ನನಗಾಗಲಿ ಇಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಾರ್ವಜನಿಕರ ಹಣವನ್ನು ನುಂಗುವುದು 'ಕ್ರಿಮಿನಲ್ ಅಫೆನ್ಸ್' ಎಂದು ನ್ಯಾಯಾಧೀಶರೇ ಹೇಳಿರುವಾಗ ನಾಚಿಕೆ ಬಿಟ್ಟು ನಕಲಿ ದಾಖಲೆಗಳೊಂದಿಗೆ ತಿರುಗಾಡುತ್ತಿದ್ದೀರಿ. ನಮ್ಮ ಇಲಾಖೆ ಬಗ್ಗೆ ಸುಳ್ಳು ಹರಡುವ ಮೊದಲು, ನ್ಯಾಯಾಲಯದಲ್ಲಿ ನಿಮ್ಮ ಹಗರಣಗಳಿಗೆ ಉತ್ತರ ನೀಡಲು ಸಿದ್ಧರಾಗಿ. ಸತ್ಯದ ಕುಣಿಕೆಯಲ್ಲಿ ಬಿದ್ದಿರುವ ನಿಮ್ಮ ಸುಳ್ಳುಗಳ ಸರಮಾಲೆಯನ್ನು ಕಂಡು ರೇಜಿಗೆಯಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ವೈದ್ಯರು, ಶುಶ್ರೂಷಕರು ಸೇರಿದಂತೆ 5600ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಿ ಆಡಳಿತಕ್ಕೆ ಪಾರದರ್ಶಕತೆ ತಂದ ಹೆಗ್ಗಳಿಕೆ ನಮ್ಮದು.
ಈ ಜ್ವಲಂತ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರ ಇದೆಯಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
1. ಸುನೀಲ್ ಕುಮಾರ್ ಅವರೇ ನೀವು ಇಂಧನ ಸಚಿವರಾಗಿದ್ದಾಗ ರಾಜ್ಯದಲ್ಲಿ ಎಷ್ಟು ಪ್ರಮಾಣದ ವಿದ್ಯುತ್ ಉದ್ಪಾದನೆ ಮಾಡಿದ್ರೀ?
2. ಕೌನ್ಸಿಲಿಂಗ್ ಮೂಲಕ ಎಷ್ಟು ಸಿಬ್ಬಂದಿಗೆ ವರ್ಗಾವಣೆ ಆದೇಶ ಮಾಡಿದ್ರೀ
3. ಇಂಧನ ಇಲಾಖೆಯಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ರೀ
4. ಕಾರ್ಕಳದ ಜನರು ಮತ ಕೊಟ್ಟು ಗೆಲ್ಲಿಸಿದ್ದಕ್ಕಾಗಿ ಋಣಭಾರ ಕಮ್ಮಿ ಮಾಡಿಕೊಳ್ಳುವುದಕ್ಕಾದರೂ ಉಡುಪಿ ಜಿಲ್ಲೆಗೆ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ
ಇವುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಈ ರೀತಿ ನಿರಂತರವಾಗಿ ಆತ್ಮವಂಚನೆ ಮಾಡಿಕೊಂಡು, ನಂಬಿದವರಿಗೂ ವಂಚಿಸಿ ಜನರ ಮಧ್ಯೆ ಅದೇಗೇ ತಿರುಗಾಡುವಿರಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶ್ನೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾರೋ ಕೆಲವು ಕಿಡಿಗೇಡಿಗಳು ನನ್ನ ಕಚೇರಿಯ ನಕಲಿ ಟಿಪ್ಪಣಿಯೊಂದನ್ನು ಸೃಷ್ಟಿಸಿ, ಮಂಡ್ಯ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ||ಕೆ.ಮೋಹನ್ ಇವರನ್ನು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಅಪಪ್ರಚಾರದಲ್ಲಿ ತೊಡಗಿರುವುದು ಖಂಡನೀಯ ಮತ್ತು ಅತ್ಯಂತ ಗಂಭೀರ ಸ್ವರೂಪದ ಅಪರಾಧವಾಗಿದೆ. ಈ ಬಗ್ಗೆ ನನ್ನ ಸಚಿವಾಲಯದ ಅಧಿಕಾರಿಗಳು ದೂರು ದಾಖಲಿಸಿದ್ದು, ಪೊಲೀಸ್ ಇಲಾಖೆ ಇದರ ಹಿಂದಿರುವ ದುಷ್ಟರನ್ನು ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಇಂತಹ ನಕಲಿ ಸುದ್ದಿಗಳನ್ನು ನಂಬಿ ಶೇರ್ ಮಾಡುವ ಮುನ್ನ ಜಾಲತಾಣ ಬಳಕೆದಾರರು ಎಚ್ಚರಿಕೆ ವಹಿಸಬೇಕು. ಈಗಿನ ಫೋಟೋಶಾಪ್ / ಎಐ ಯುಗದಲ್ಲಿ ವಾಟ್ಸ್‌ಆ್ಯಪ್ ಮಾಹಿತಿಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ಇತರರ ಜೊತೆ ಹಂಚಿಕೊಳ್ಳುವುದು ಕೂಡ ಅಪರಾಧವೆ ಆಗಿದೆ. ಸಕಾರಾತ್ಮಕ ಟೀಕೆಗೆ ನಾವು ಮುಕ್ತರಿದ್ದೇವೆ, ಸುಳ್ಳು ಸುದ್ದಿಗಳ ಅಪಪ್ರಚಾರವನ್ನು ಸಹಿಸುವುದಿಲ್ಲ ಎಂದಿದ್ದಾರೆ.












Click it and Unblock the Notifications