ಕಾಣದ 'ಕೈ': ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಇವರೇ ಕಾರಣ...
ಕಾಂಗ್ರೆಸ್ ಮುಕ್ತ ರಾಜ್ಯ ನಿರ್ಮಾಣ ಮಾಡುತ್ತೇವೆ ಎಂದು ಅಬ್ಬರಿಸುತ್ತಿದ್ದ ಬಿಜೆಪಿ ನಾಯಕರಿಗೆ ಈಗ ಢವಢವ ಶುರುವಾಗಿದೆ. ಇಡೀ ದೇಶದಲ್ಲಿ ಬಿಜೆಪಿ ಒಂದೊಂದು ರಾಜ್ಯಗಳನ್ನು ಕಳೆದುಕೊಳ್ಳುತ್ತಿದೆ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ಮೇಲೆ ಬಿಜೆಪಿಗೆ ದಕ್ಷಿಣ ಭಾಗದ ಬಾಗಿಲು ಶಾಶ್ವತವಾಗಿ ಬಂದ್ ಆಗೋ ಭೀತಿ ಎದುರಾಗಿದೆ.
ಇನ್ನೂ ಉತ್ತರ ಭಾರತದ ಸಾಕಷ್ಟು ಭಾಗಗಳಲ್ಲೂ ಬಿಜೆಪಿ ಅಧಿಕಾರದಲ್ಲಿ ಇಲ್ಲ. ಹಾಗಾದರೆ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರೋದು ಯಾಕೆ? ಇದಕ್ಕೆ ಕಾರಣರಾದ ಪ್ರಮುಖ ವ್ಯಕ್ತಿ ಯಾರು? ಈ ಪ್ರಶ್ನೆಗಳಿಗೆ ಬಿಜೆಪಿ ಪಾಳೆಯದಲ್ಲಿ ಹರಿದಾಡುತ್ತಿರುವ ಉತ್ತರಗಳೇನು? ಅನ್ನೋದರ ಬಗ್ಗೆ ನೋಡೋಣ.

ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಸ್ ಸಂತೋಷ್ ಎನ್ನಲಾಗುತ್ತಿದೆ. ಅಷ್ಟಕ್ಕೂ ಬಿಜೆಪಿ ಕರ್ನಾಟಕದಲ್ಲಿ ಸೋಲಿಕೆ ಬಿಎಸ್ ಸಂತೋಷ ಕಾರಣ ಆಗಿದ್ದು ಹೇಗೆ?
ಕರ್ನಾಟಕದಲ್ಲಿ ಗುಜರಾತ್ ಮಾಡೆಲ್ ತರಲು ಬಿಎಸ್ ಸಂತೋಷ್ ಮುಂದಾಗಿದ್ದರು. ಗುಜರಾತ್ ಮಾಡೆಲ್ ನೆಪದಲ್ಲಿ ಕರ್ನಾಟಕದ ನಂದಿನಿ ಹಾಲನ್ನು ಗುಜರಾತ್‌ನ ಅಮುಲ್ ಜೊತೆಗೆ ವಿಲೀನ ಮಾಡುವ ಯತ್ನ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದರಿಂದ ಕನ್ನಡದ ಜನ ಕಿಡಿ ಕಾರಿದ್ದರು. ಬಿಎಸ್ ಸಂತೋಷ್ ಅವರ ಇದೇ ಪ್ರಯತ್ನ ಕಾಂಗ್ರೆಸ್ ಗೆಲುವಿಗೆ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ ಎನ್ನುವ ವಿಶ್ಲೇಷಣೆಗಳಿವೆ.

ಬಿಜೆಪಿ ಸೋಲಿಗೆ ಮತ್ತೊಂದು ಕಾರಣ ಬಿಎಸ್‌ವೈ ಸೈಡ್‌ಲೈನ್ ಮಾಡಿದ್ದು. ರಾಜ್ಯದಲ್ಲಿ ಬಿಎಸ್‌ವೈ ಸಿಎಂ ಖುರ್ಚಿಯಿಂದ ಕೆಳಗೆ ಇಳಿದಿದ್ದು, ಆನಂತರ ಚುನಾವಣಾ ರಾಜಕೀಯಕ್ಕೆ ಗುಡ್‌ಬೈ ಹೇಳಿದ್ದರ ಹಿಂದೆ ಬಿಎಲ್ ಸಂತೋಷ ಕೈವಾಡವಿದೆ ಎನ್ನುವ ಮಾತುಗಳು ಬಿಜೆಪಿ ಪಾಳಯದಲ್ಲಿ ಹರಿದಾಡುತ್ತಿವೆ. ಇಲ್ಲಿ ಪ್ರಮುಖವಾಗಿ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಸಚಿವ ಸಂಪುಟ ನಿರ್ಮಾಣ ಅವಧಿ ವಿಳಂಬ, ಲಕ್ಷ್ಮಣ ಸವದಿ ಜೊತೆ ಮತ್ತಿಬ್ಬರಿಗೆ ಡಿಸಿಎಂ ಹುದ್ದೆ ಕಲ್ಪಿಸಿ ಬಿಎಸ್‌ವೈ ಮೇಲೆ ನಿಯಂತ್ರಣದ ಪ್ರಯತ್ನಗಳು ನಡೆದವು ಎನ್ನುವ ವಿಚಾರ, ಬಿಎಸ್‌ವೈ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಲವು ಬಾರಿ ಹೇಳಿಕೆ ನೀಡಿದ್ದು, ಹಿಂದೆ ಸಿಎಂ ಪಟ್ಟದಿಂದ ಕೆಳಗಿಳಿಸಲು ಆಂತರಿಕವಾಗಿ ಒತ್ತಡ ಹೇರಿದ ಆರೋಪಗಳು ಆಂತರಿಕವಾಗಿ ಕಿಚ್ಚು ಹೊತ್ತಿಸಿವೆ. ಇದೆಲ್ಲದರ ಹಿಂದೆ ಬಿಎಸ್ ಸಂತೋಷ ಇದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಇನ್ನೂ ಮೂರನೆಯದು ಲಿಂಗಾಯತರನ್ನು ಒಡೆಯೋ ರಣತಂತ್ರ ಬಿಜೆಪಿ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಹಿರಿಯ ಲಿಂಗಾಯತ ನಾಯಕರನ್ನು ಕಡೆಗಣನೆಗೆ ಬಿಎಸ್ ಸಂತೋಷ ಅವರೇ ನೇರ ಕಾರಣ ಅನ್ನೋ ಆರೋಪಗಳಿವೆ. ಈ ಬಾರಿ ಲಕ್ಷ್ಮಣ ಸವದಿ ಹಾಗೂ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಲು ಬಿಎಸ್ ಸಂತೋಷ ಅವರೇ ಕಾರಣ ಎಂದು ಜಗದೀಶ್ ಶೆಟ್ಟರ್ ಬಹಿರಂಗವಾಗಿ ಹೇಳಿಕೊಂಡಿದ್ದರು. ಜೊತೆಗೆ ರಾಜ್ಯದಲ್ಲಿ ಲಿಂಗಾಯತ ನಾಯಕರು ಹಾಗೂ ಬಿಎಸ್‌ವೈ ಅವರನ್ನು ಸೈಡ್‌ಲೈನ್ ಮಾಡಿ ಬ್ರಾಹ್ಮಣರೊಬ್ಬರನ್ನು ಸಿಎಂ ಮಾಡೋ ರಣತಂತ್ರ ನಡೆದಿತ್ತು ಅನ್ನೋ ಸುದ್ದಿಯೂ ಹರದಾಡಿತ್ತು.
ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪದ ಆರೋಪಗಳು ಇವೆ. ಬಸವರಾಜ್ ಬೊಮ್ಮಾಯಿ ಆಡಳಿತ ನಡೆಸುವಾಗ ಮುಕ್ತವಾಗಿ ಕಾರ್ಯ ನಿರ್ವಹಿಸಲು ಅಡಚಣೆ ಮಾಡಿದ ಆರೋಪ ಬಿಎಸ್ ಸಂತೋಷ ಅವರ ಮೇಲಿದೆ. ಈ ನಡುವೆ ಸಚಿವ ಸಂಪುಟ, ನಿಗಮ ಮಂಡಳಿಗಳ ನೇಮಕದಲ್ಲೂ ಬಿಎಸ್ ಸಂತೋಷ್ ಹಸ್ತಕ್ಷೇಪ ಮಾಡಿದ ಮಾತುಗಳು ಕೂಡ ಇದೀಗ ಕೇಸರಿ ಪಾಳೆಯದಲ್ಲಿ ಚರ್ಚೆಗೆ ಬಂದಿವೆ.
ಪಕ್ಷದೊಳಗೆ ಬಣಗಳ ಸೃಷ್ಟಿ, ಪರಸ್ಪರ ಕಾಲೆಳೆಯುವ ತಂತ್ರಗಾರಿಕೆ, ವರಿಷ್ಠರಿಗೆ ಮತ್ತೊಂದು ಬಣದಿಂದ ದೂರು ಸಲ್ಲಿಕೆಗೆ ಕುಮ್ಮಕ್ಕು, ಚುನಾವಣಾಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಗುಂಪುಗಾರಿಕೆ, ಬಿಎಸ್‌ವೈ ಮುಂದಿಟ್ಟ ಪಟ್ಟಿಗೆ ವಿರುದ್ಧವಾಗಿ ಮತ್ತೊಂದು ಪಟ್ಟಿ, ಹೀಗೆ ನಾನಾ ತಪ್ಪುಗಳೇ ಬಿಜೆಪಿ ಸೋಲಿಗೆ ಕಾರಣ ಎನ್ನುವ ಮಾತುಗಳು ಕೇಳಿ ಬಂದಿವೆ. ಅದೇನೇ ಇದ್ದರು ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಆತ್ಮ ವಿಮರ್ಶೆಗಳು ನಡೆಯುತ್ತಿವೆ. ಇದರಲ್ಲಿ ಬಿಎಸ್ ಸಂತೋಷ್ ಪಾತ್ರ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಈ ಸೋಲಿನ ಹೊಣೆಯನ್ನು ಬಸವರಾಜ ಬೊಮ್ಮಾಯಿ ಹೋರೋದಾಗಿ ಹೇಳಿದ್ರು, ಅಸಲಿ ಸೋಲಿನ ಕಾರಣಗಳೇನು ಎನ್ನುವ ಚರ್ಚೆಗಳು ಮುನ್ನೆಗೆ ಬಂದಿವೆ.












Click it and Unblock the Notifications