ಬಿಎಸ್ಆರ್ ಕಾಂಗ್ರೆಸ್ - ಜೆಡಿಎಸ್ ವಿಲೀನ ಇಲ್ಲ

ಒಂದೆಡೆ ಸ್ವತಃ ಎಚ್ ಡಿ ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕನಾಗಿ ಮುಂದುವರಿಯುವ ಆಸೆಯೂ ಇಲ್ಲ/ ಜರೂರತ್ತೂ ಇಲ್ಲ. ಕೇವಲ ಒಬ್ಬ ಸಾಮಾನ್ಯ ಶಾಸಕನಾಗಿ ಅದಕ್ಕಿಂತ ಹೆಚ್ಚಿನದನ್ನು ಸಾಧಿಸಬಲ್ಲೆ. ಹಾಗಾಗಿ, ಬಿಜೆಪಿಗೆ JDS-BSR Congress ವಿಲೀನದ ಭಯ ಬೇಡ ಎಂದು ಅಭಯ ಹಸ್ತ ನೀಡಿದ್ದಾರೆ.
ಬಿಜೆಪಿಗೆ ಟಾಂಗ್ ನೀಡಲು ಜೆಡಿಎಸ್ ವರಿಷ್ಠ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಬಲವಾದ ರಾಜಕೀಯ ದಾಳ ಉರುಳಿಸಿದ್ದು, ಬಿಜೆಪಿಯ ಮಾಜಿ ಸಚಿವ ಬಿ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಪಕ್ಷದಲ್ಲಿ ವಿಲೀನಗೊಳಿಸುವ ಇರಾದೆ ಹೊಂದಿದ್ದರು ಎಂದು ತಿಳಿದುಬಂದಿತ್ತು.
ಅದರಂತೆ ರಾಮುಲು ಸೇರಿದಂತೆ ಬಿಎಸ್ಆರ್ ಕಾಂಗ್ರೆಸ್ಸಿನ 4 ಶಾಸಕರು ಜೆಡಿಎಸ್ ಶಾಸಕಾಂಗ ಪಕ್ಷದ ಸದಸ್ಯರಾಗುವುದು. ಆಗ, ಮತ್ತೂಮ್ಮೆ ಸ್ಥಾನಗಳ ಬಲಾಬಲ ತಲಾ 44ಕ್ಕೆ ಬಂದರೂ ಮತ ಗಳಿಕೆ ಪ್ರಮಾಣದಲ್ಲಿ ಜೆಡಿಎಸ್ ಮೊದಲ ಸ್ಥಾನದಲ್ಲಿ ನಿಲ್ಲುವುದರಿಂದ ವಿರೋಧ ಪಕ್ಷದ ಸ್ಥಾನಮಾನ ಅಬಾಧಿತವಾಗಲಿದೆ ಎನ್ನಲಾಗಿತ್ತು.
ಸದಾನಂದ ಧ್ವನಿ: ಈ ಮಧ್ಯೆ, ಪುತ್ತೂರಿನಲ್ಲಿ ಶನಿವಾರ ಮಾತನಾಡಿರುವ ಬಿಜೆಪಿ ಹಿರಿಯ ನಾಯಕ, ವಿಧಾನ ಪರಿಷತ್ ವಿಪಕ್ಷ ನಾಯಕ ಡಿವಿ ಸದಾನಂದ ಗೌಡ ಅವರು ಶ್ರೀರಾಮುಲು ಅವರು ಬಿಜೆಪಿಗೆ ಮರಳುವುದು ಬಹುತೇಕ ಖಚಿತವಾಗಿದೆ ಎಂದು ಹೇಳಿದ್ದಾರೆ.
'ಶ್ರೀರಾಮುಲು ಅವರ ಬಿಎಸ್‌ಆರ್ ಕಾಂಗ್ರೆಸ್ ಅನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಗೆ ಶ್ರೀರಾಮುಲು ಜತೆ ಮಾತುಕತೆಗಳು ನಡೆದಿದೆ. ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಬಿಜೆಪಿ ಕೇಂದ್ರ ನಾಯಕರ ಒಪ್ಪಿಗೆ ಬಳಿಕ ಮುಂದಿನ ಕ್ರಮಗಳು ನಡೆಯಲಿವೆ ಎಂದು ಸದಾನಂದ ಗೌಡ ಹೇಳಿದ್ದಾರೆ.
'ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ ಮಾದರಿಯಲ್ಲಿಯೇ ಗೌರವ ಪೂರ್ವಕವಾಗಿ ರಾಮುಲು ಅವರ ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ವಿಲೀನಗೊಳಿಸಲು ಪ್ರಯತ್ನಗಳು ಮುಂದುವರಿದಿವೆ. ಮೋದಿ ಪ್ರಧಾನಿಯಾಗಬೇಕೆಂಬ ಪ್ರಯತ್ನ ಸಮ್ಮುಖದಲ್ಲಿ ಸಮಾನ ಮನಸ್ಕರನ್ನು ಬಿಜೆಪಿಗೆ ತರುವ ಯತ್ನ ನಡೆಯುತ್ತಿವೆ' ಎಂದು ಅವರು ಹೇಳಿದರು.












Click it and Unblock the Notifications