ರೈತರ ಆಕ್ರೋಶ: 20 ಕ್ಕೂ ಅಧಿಕ ಕಬ್ಬಿನ ಟ್ರ್ಯಾಕ್ಟರ್‌ಗಳು ಬೆಂಕಿಗೆ ಆಹುತಿ; ಹೆಚ್ ಡಿ ಕುಮಾರಸ್ವಾಮಿ ಬೇಡಿಕೆ ಏನು?
ಬೆಂಗಳೂರು, ನವೆಂಬರ್ 14: ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದೆ. ತಮ್ಮ ಕಬ್ಬಿಗೆ ಸರಿಯಾದ ಬೆಲೆ ನೀಡಬೇಕೆಂದು ಒತ್ತಾಯಿಸಿ ರೈತರು ಬೀದಿಗಿಳಿದಿದ್ದಾರೆ. ಮಹಾಲಿಂಗಪುರ ಬಳಿ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ 20ಕ್ಕೂ ಹೆಚ್ಚು ಲಾರಿ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ ಎಂದು ರಾಜ್ಯ ಸರಕಾರಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಬೇಡಿಕೆ ಇಟ್ಟಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಧೋಳದಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರುಗಳು ಬೆಂಕಿಗೆ ಆಹುತಿಯಾಗಿರುವ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯ ಸರಕಾರ ತಕ್ಷಣವೇ ಮಧ್ಯಪ್ರವೇಶಿಸಿ ಬಿಕ್ಕಟ್ಟನ್ನು ತಿಳಿಗೊಳಿಸಬೇಕು. ಕಬ್ಬು ಬೆಳೆಗಾರರ ಸಂಕಷ್ಟ ಮತ್ತೆ ಸೃಷ್ಟಿಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಕಬ್ಬು ಬೆಳೆಗಾರರ ಸಂಕಷ್ಟ ಬಿಗಡಾಯಿಸಿದೆ. ಮುದೋಳದ ಸಕ್ಕರೆ ಕಾರ್ಖಾನೆಯ ಯಾರ್ಡ್ʼನಲ್ಲಿ ನಿಂತಿದ್ದ ಕಬ್ಬು ತುಂಬಿದ್ದ ಟ್ರಾಕ್ಟರುಗಳು ಬೆಂಕಿಗೆ ಆಹುತಿ ಆಗಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಕಾಂಗ್ರೆಸ್ ಸರಕಾರದ ವೈಫಲ್ಯಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ರಾಜ್ಯ ಸರ್ಕಾರವನ್ನ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಟೀಕಿಸಿದರು.
ಬೆಳಗಾವಿಯಲ್ಲಿ ರೈತರು ಹೋರಾಟಕ್ಕಿಳಿದಾಗ ಆ ಕ್ಷಣಕ್ಕೇನೋ ಅವರ ಮೂಗಿಗೆ ತುಪ್ಪ ಸವರಿದ ಸರಕಾರವು, ಇಡೀ ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಘೋರ ವೈಫಲ್ಯ ಕಂಡಿತು. ಅದರ ಪರಿಣಾಮವೇ ಮುಧೋಳದಲ್ಲಿ ರೈತರ ತಾಳ್ಮೆಯ ಕಟ್ಟೆಯೊಡೆಯುಂತೆ ಮಾಡಿದೆ ಎಂದು ಸಚಿವರು ದೂರಿದ್ದಾರೆ. ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಅನ್ನುವ ಲಾಭಕೋರ ಧೋರಣೆಯನ್ನು ಸರಕಾರ ಬಿಡಬೇಕು. ರೈತರ ಸಂಕಷ್ಟವನ್ನು ಅಧಿಕಾರದ ಅಮುಲುಗಣ್ಣಿನಿಂದ ನೋಡಬಾರದು. ಹೃದಯ ವೈಶಾಲ್ಯದಿಂದ ಕಾಣುವ ಔದಾರ್ಯ ತೋರಬೇಕು. ಮುಧೋಳದ ರೈತರ ಜತೆ ನಾನೂ ಇದ್ದೇನೆ ಎಂದು ಸಚಿವರು ಕಬ್ಬು ಬೆಳೆಗಾರರಿಗೆ ಧೈರ್ಯ ತುಂಬಿದ್ದಾರೆ.
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಅನ್ನದಾತರ ನೋವು ಮತ್ತು ಆಗ್ರಹದ ಕಿಚ್ಚು, ವಿಕೋಪಕ್ಕೆ ತಿರುಗಿ ನಿಷ್ಕ್ರಿಯ ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸುವ ಜ್ವಾಲೆಯಂತಾಗಿದೆ. ತಮ್ಮ ಬದುಕಿನ ಆಧಾರವಾಗಿದ್ದ, ಕಬ್ಬು ತುಂಬಿದ 50ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಿಗೇ ಬೆಂಕಿ ಹಚ್ಚುವ ಮಟ್ಟಿಗೆ ಆಕ್ರೋಶಕ್ಕೆ ಒಳಗಾಗಿರುವುದು ನಮ್ಮ ಕಬ್ಬು ಬೆಳೆಗಾರರ ಆಗ್ರಹದ ಜ್ವಾಲಾಗ್ನಿಗೆ ಸಾಕ್ಷಿಯಾಗಿದೆ. ರಾಜ್ಯದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನಿಗೆ ಈ ಬೆಳವಣಿಗೆ ದುಃಖ ಮತ್ತು ಆತಂಕ ಉಂಟು ಮಾಡಿದೆ.
ಜವಾಬ್ದಾರಿಯುತ ಸರ್ಕಾರ ವಿಷಯದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೇ ಅತ್ತಿತ್ತ ಬೊಟ್ಟು ಮಾಡುತ್ತಾ, ಸಬೂಬು ಹೇಳುತ್ತಾ, ಸುಮ್ಮನೆ ಕುಳಿತಿರುವುದು ರೈತರ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ಈ ಎಲ್ಲಾ ಬೆಳವಣಿಗೆಗೂ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೇರ ಹೊಣೆ. ಕಬ್ಬು ಬೆಳೆಗಾರರ ಬೇಡಿಕೆ ಸಂಪೂರ್ಣ ನ್ಯಾಯಸಮ್ಮತವಾಗಿದೆ, ಆದರೆ ರಾಜ್ಯ ಸರ್ಕಾರವೇ ಸಕ್ಕರೆ ಕಾರ್ಖಾನೆ ಮಾಲೀಕರ ಹಿಡಿತದಲ್ಲಿ ಸಿಲುಕಿದ್ದು, ನಮ್ಮ ರೈತರಿಗೆ ಸಿಗುತ್ತಿರುವುದು ಮಾತ್ರ ಕೇವಲ ಭರವಸೆಳಷ್ಟೇ ಎಂದು ಹೇಳಿದರು.
ರೈತರ ನ್ಯಾಯಸಮ್ಮತ ಬೇಡಿಕೆಗಳಿಗೆ ಕನಿಷ್ಠ ಪ್ರಾಮಾಣಿಕವಾಗಿ ಸ್ಪಂದಿಸಿ, ಸೂಕ್ತ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನವನ್ನೂ ಸಹ ರಾಜ್ಯ ಸರ್ಕಾರ ಮಾಡದೆ ಕಾಲಹರಣ ಮಾಡಿತು. ಸಂವೇದನಾ ರಹಿತ ರಾಜ್ಯ ಸರ್ಕಾರದ ನಿಷ್ಕ್ರಿಯತೆಯೇ ರೈತರ ಆಸ್ತಿ ಪಾಸ್ತಿಗಳು ನಷ್ಟವಾಗುವ ಈ ದುರಂತಕ್ಕೆ ಕಾರಣವಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ನಿದ್ರೆಯಿಂದ ಎದ್ದು ಎಚ್ಚೆತ್ತುಕೊಂಡು ರೈತರ ಆಕ್ರೋಶ ತಣಿಸಲು ಮುಂದಾಗಬೇಕು. ರೈತರ ಸಂಕಷ್ಟಕ್ಕೆ ಕೇಂದ್ರದ ಮೇಲೆ ಸುಮ್ಮನೆ ದೋಷಾರೋಪಣೆ ಮಾಡುವ ಕಾಂಗ್ರೆಸ್‌ನ ಕೀಳು ಚಾಳಿ ನಿಲ್ಲಿಸಿ, ಹೆಚ್ಚುವರಿ ಪ್ರೋತ್ಸಾಹ ಧನ ನೀಡುವ ನೈತಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ ಮೇಲಿದೆ. ನಮ್ಮ ರೈತರು ಇಂದು ಬೀದಿಗೆ ಇಳಿದಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ, ಅವರ ನ್ಯಾಯಯುತ ಬೇಡಿಕೆಗೆ ತಕ್ಷಣವೇ ಈಡೇರಿಸಬೇಕೆಂದು ಆಗ್ರಹಿಸುವೆ ಎಂದರು.












Click it and Unblock the Notifications