HD Kumaraswamy: "ಛತ್ರಿಬುದ್ಧಿ ನನಗಿಲ್ಲ" ಎಂದ ಎಚ್.ಡಿ ಕುಮಾರಸ್ವಾಮಿ!
ನನಗೆ ಛತ್ರಿ ಬುದ್ಧಿ ಇಲ್ಲ ಅಂತ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಈಚೆಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಂಡ್ಯದವರ ಛತ್ರಿ ಬುದ್ಧಿಯ ಬಗ್ಗೆ ನನಗೆ ಗೊತ್ತಿದೆ. ಇದೆಲ್ಲ ನಿಲ್ಲಿಸಬೇಕು ಎಂದು ಗುಡುಗಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಎಚ್.ಡಿ ಕುಮಾರಸ್ವಾಮಿ ಅವರು ನನಗೆ ಛತ್ರಿಬುದ್ಧಿ ಇಲ್ಲ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇಷ್ಟಕ್ಕೂ ಎಚ್.ಡಿ ಕುಮಾರಸ್ವಾಮಿ ಅವರು ಈ ರೀತಿ ಹೇಳಿದ್ಯಾಕೆ ಎನ್ನುವ ವಿವರ ಇಲ್ಲಿದೆ.
ಕೇಂದ್ರ ಸಚಿವರ ಎಚ್.ಡಿ ಕುಮಾರಸ್ವಾಮಿ ಅವರು ನಾನು ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ನನಗೆ ಈ ರೀತಿಯ ಛತ್ರಿ ಬುದ್ಧಿಯೂ ಇಲ್ಲ ಎಂದಿದ್ದಾರೆ. ಮಂಡ್ಯ ರಾಜಕೀಯದಲ್ಲಿ ಈಚೆಗೆ ಛತ್ರಿ ಬುದ್ಧಿ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಎಚ್.ಡಿ ಕುಮಾರಸ್ವಾಮಿ ಅವರೇ ನನಗೆ ಛತ್ರಿ ಬುದ್ಧಿ ಇಲ್ಲ ಕಣ್ರೀ ಅಂತ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಎಚ್.ಡಿ ಕುಮಾರಸ್ವಾಮಿ ಅವರು ಗರಂ ಆಗಿದ್ದಾರೆ. ಮಂಡ್ಯ ಕೃಷಿ ವಿಶ್ವವಿದ್ಯಾಲಯ ಕುರಿತು ನನ್ನ ಬಗ್ಗೆ ಹುಟ್ಟಿಕೊಂಡಿರುವ ಸಂದೇಹಾತ್ಮಕ, ರಾಜಕೀಯ ದುರುದ್ದೇಶದ ಅಪಪ್ರಚಾರದ ನಡವಳಿಕೆ ದುಃಖಕರ. ಜಿಲ್ಲೆಯಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆ ಬಗ್ಗೆ ನನ್ನ ಹೃದಯಪೂರ್ವಕ ಸ್ವಾಗತವಿದೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ನಾನೆಂದೂ ಬೆರೆಸಿಲ್ಲ, ಇದು ನನ್ನ ವ್ಯಕ್ತಿತ್ವಕ್ಕೆ ಸಲ್ಲದ ನಡವಳಿಕೆ. ವಿಶ್ವ ವಿದ್ಯಾಲಯದ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಛತ್ರಿಬುದ್ಧಿ ನನಗಿಲ್ಲ ಅಂತ ಅವರು ಕಿಡಿಕಾರಿದ್ದಾರೆ.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವನು ನಾನು. ಮಂಡ್ಯ ಜಿಲ್ಲೆ ಹಿತಕ್ಕೆ ಸಂಬಂಧಿಸಿ ಅಲ್ಲಿನ ಜನಪ್ರತಿನಿಧಿಯಾಗಿ ನನ್ನದೂ ಹೊಣೆಗಾರಿಕೆ ಇದೆ. ಈ ಬಗ್ಗೆ ನನ್ನಲ್ಲಿ ಗೊಂದಲ ಇಲ್ಲ, ಇದು ಸ್ಪಷ್ಟ. ಮುಖ್ಯಮಂತ್ರಿಯಾಗಿ ಮಂಡ್ಯ ಜಿಲ್ಲೆಗೆ ನೀಡಿರುವ ಬಜೆಟ್ ಕೊಡುಗೆ ಬಗ್ಗೆ ನಾನು ಹೊಸದಾಗಿ ಹೇಳಬೇಕಿಲ್ಲ. ನನಗೆ ರಾಜಕೀಯವಾಗಿ ಶಕ್ತಿ ತುಂಬಿದ, ರಕ್ತಸಂಬಂಧಕ್ಕೂ ಮೀರಿ ಅವಿನಾಭಾವ ಬಾಂಧವ್ಯದ ದ್ಯೋತಕವಾಗಿರುವ ಮಂಡ್ಯ ಜನರ- ನನ್ನ ನಡುವೆ ಹುಳಿ ಹಿಂಡುವ ವ್ಯರ್ಥ ಪ್ರಯತ್ನ ಬೇಡ ಎಂದು ಹೇಳಿದ್ದಾರೆ.
ನನ್ನನ್ನು ಸಂಸದನನ್ನಾಗಿ ಆಯ್ಕೆ ಮಾಡಿರುವ ಮಂಡ್ಯ ಜನತೆಗೆ ನಾನೆಂದಿಗೂ ಆಭಾರಿ. ಅದಕ್ಕೆ ತಕ್ಕಂತೆ ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳಬೇಕಿರುವ ಕಾರ್ಯಕ್ರಮ, ಯೋಜನೆಗಳ ಬಗ್ಗೆ ಅವಿರತವಾಗಿ ಕೆಲಸ ಮಾಡುತ್ತಿದ್ದೇನೆ. ಕೇಂದ್ರ ಸಚಿವನಾಗಿ ಇಡೀ ರಾಜ್ಯದ ಮತ್ತು ಸಂಸದನಾಗಿ ಮಂಡ್ಯದ ಆಶೋತ್ತರಗಳ ಈಡೇರಿಕೆಗೆ ನಾನು ಬದ್ಧ, ಅದರಲ್ಲಿ ರಾಜಿ ಪ್ರಶ್ನೆ ಇಲ್ಲ.
ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ ತಿಳಿಗೇಡಿಗಳು, ಅದಕ್ಕೆ ತುಪ್ಪ ಸುರಿಯುವ ಸೋಗಲಾಡಿಗಳು ಸತ್ಯ ಅರಿತುಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ಪೋಸ್ಟ್ ಮಾಡಲಾಗಿದ್ದು. ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದೆ.












Click it and Unblock the Notifications