ಕುದುರೆ ಕಾಲು ಕಟ್ ಮಾಡಿ ಓಡಿಸು ಅಂದ್ರೆ ಹೇಗೆ ಓಡ್ಸೋದು: ಸಿದ್ದರಾಮಯ್ಯ ವಿರುದ್ದ ಹೆಚ್ಡಿಕೆ ಕೆಂಡಾಮಂಡಲ
ಪದೇ ಪದೇ ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಬೇಡಿ ಎಂದು ಸಿದ್ದರಾಮಯ್ಯ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರು,ಮಾರ್ಚ್1: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿದ್ದು, ಪದೇ ಪದೇ ಜೆಡಿಎಸ್ ಪಕ್ಷದ ಬಗ್ಗೆ ಚರ್ಚೆ ಬೇಡ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.
ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೊಟ್ಟ ಕುದುರೆ, ಕುದುರೆ ಅಂತಿರಾ ಅಲ್ವಾ ಯಾವ ಕೊಟ್ಟ ಕುದುರೆ, ಕಾಲು ಕಟ್ ಮಾಡಿ ಓಡಿಸು ಅಂದ್ರೆ ಹೇಗೆ ಓಡಿಸುವುದು ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಜನ ಯಾರ ಆಡಳಿತ ಹೇಗೆ ಅಂತ ನೋಡಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ನನ್ನಷ್ಟು ಜನರನ್ನ ಯಾರೂ ನೋಡಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿರಿ ಎಲ್ಲಿಗೆ ತಂದಿದ್ದೀರಾ? ಬಿಜೆಪಿಯದ್ದು ಮಾತ್ರವಲ್ಲ, ನಿಮ್ಮದೂ ಪಾಲಿದೆ ಎಂದು ಕಿಡಿಕಾರಿದ ಅವರು, ಚುನಾವಣೆಗೆ ಹೋಗುವ ಮುನ್ನ ಯೋಜನೆ ಜಾರಿ ಮಾಡಿದ್ರಿ, ಆದರೆ ದುಡ್ಡು ಇಟ್ಟಿರಲಿಲ್ಲ. ನಿಮ್ಮ ತಪ್ಪನ್ನ ಸರಿಪಡಿಸಲು ಆಗದಂತಹಾ ವಾತಾವರಣ ನಿರ್ಮಿಸಿದ್ದೀರಾ ಎಂದು ಕುಟುಕಿದರು.
ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕಾಲ ಕಳೆಯುತ್ತಿದ್ದರು ಎಂದಿದ್ದೀರಾ. ಇಡೀ ದಿನ ಜನರ ಸಂಪರ್ಕದಲ್ಲಿ ಇರುತ್ತಿದ್ದೆ, ದಿನಕ್ಕೆ10-15 ಸಭೆ ಮಾಡುತ್ತಿದೆ. ನೀವು ಸಿಎಂ ಆದಾಗ ಮಧ್ಯಾಹ್ನ 1ಕ್ಕೆ ವಿದಾನಸೌಧ ಖಾಲಿ ಮಾಡುತ್ತಿದ್ರಿ, ಎಲ್ಲಿಗೆ ಹೋಗುತ್ತಿದ್ರಿ? ನನಗೆ ಒಂದು ಮನೆ ಕೊಡಲಿಲ್ಲ, ಜನ ತಿರಸ್ಕಾರ ಮಾಡಿದ್ರು ಸರ್ಕಾರಿ ಮನೆಯನ್ನ ಬಳಸಿಕೊಂಡ್ರಿ, ಕುಮಾರಕೃಪವನ್ನ ಹೇಗೆ ಬಳಸಿಕೊಂಡ್ರಿ ನನಗೆ ಗೊತ್ತಿದೆ, ನಾನು ಎಲ್ಲಿ ಇರಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
ನನ್ನ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಶಾಸಕರಿಗೂ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ನೀಡಿದ್ದೇನೆ. ಅದರ ದಾಖಲೆ ಬಿಡುಗಡೆಗೂ ನಾನು ಸಿದ್ದನಿದ್ದೇನೆ. ನಾನು ನಿಮ್ಮಿಂದ ಆಡಳಿತ ಕಲಿಯಬೇಕಾಗಿಲ್ಲ. ಪದೇ ಪದೇ ಜೆಡಿಎಸ್ ಬಗ್ಗೆ ಚರ್ಚೆ ಮಾಡಬೇಡಿ, ರಾಜ್ಯದ ಅಭಿವೃದ್ಧಿ ಕುಂಠಿತಕ್ಕೆ ನಿಮ್ಮ ಪಾಲು ಇದೆ. ಮೈತ್ರಿ ಸರ್ಕಾರದಲ್ಲಿ ನಾನು ಬೆಳಗ್ಗೆ 9 ಗಂಟೆಯಿಂದ ಕೆಲಸ ಮಾಡುತ್ತಿದ್ದೆ. ನನಗೆ ಸರ್ಕಾರಿ ಮನೆ ಕೊಡಲಿಲ್ಲ. ನೀವು ಮಧ್ಯಾಹ್ನ ವಿಧಾನಸೌಧ ದಿಂದ ಹೋದರೆ ನಿದ್ದೆ ಮಾಡಲು ಹೋಗುತ್ತಿದ್ದೀರಾ ನಾನು ಎಲ್ಲಿಗೆ ಹೋಗಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

ನಾನು ಮೈಮರೆತು ಕುಳಿತುಕೊಂಡಿಲ್ಲ. ಮೇ ನಲ್ಲಿ ಮೊದಲ ಅಥವಾ ಎರಡನೇ ವಾರದಲ್ಲಿ ಚುನಾವಣೆ ಆಗಬಹುದು, ಒಂದೊಂದು ನಿಮಿಷವು ವ್ಯರ್ಥ ಮಾಡದೇ ಜನರ ಬಳಿ ನಾನು ತೆರಳುತ್ತಿದ್ದೇನೆ. ಬಿಜೆಪಿ ನಾಯಕರ ಬಗ್ಗೆ ಅಯ್ಯೋ ಅನ್ನಿಸುತ್ತಿದೆ, ಮೋದಿಯವರು ನಿಜಲಿಂಗಪ್ಪ, ಮಲ್ಲಿಕಾರ್ಜುನ್ ಖರ್ಗೆ ನೆನೆಪಿಸಿಕೊಂಡಿದ್ದಾರೆ. ಇವರ ಬಗ್ಗೆ ಚರ್ಚೆ ಮಾಡುವ ಪ್ರಧಾನಿ ಅಡ್ವಾಣಿ ಅವರ ಮೂಲೆ ಗುಂಪು ಮಾಡಿದ್ದಾರೆ. ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ವಾಜಪೇಯಿ ಅವರನ್ನ ಮೂಲೆ ಗುಂಪು ಮಾಡಿ, ಕೈ ಕಾಲು ಕಟ್ಟಿಹಾಕಿದ್ದಾರೆ, ಈಗ ಯಡಿಯೂರಪ್ಪ ರನ್ನ ಹೊಗಳುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರಿ ನೌಕರರಿಗೆ 17% ವೇತನ ಹೆಚ್ಚಳ ಕುರಿತು ಮಾತನಾಡಿ, ಸರ್ಕಾರ ಹೇಳಿದೆ. ಆದರೆ, ನೌಕರರಿಗೆ ನಂಬಿಕೆ ಬಂದಿಲ್ಲ. ದುಡ್ಡು ಎಲ್ಲಿದೆ, ನೋಡೋಣ ಏನ್ ಮಾಡ್ತಾರೆ, ಬಜೆಟ್ ದಿನ ಘೋಷಣೆ ಮಾಡಬೇಕಿತ್ತು ಆಗ ಇಷ್ಟೆಲ್ಲಾ ಸಮಸ್ಯೆ ಎದುರಾಗ್ತಿರಲಿಲ್ಲ ಎಂದು ಹೇಳಿದರು.












Click it and Unblock the Notifications