ಉಪ ಚುನಾವಣೆಗೆ ಹೊಸ ದಿನ: ಚುನಾವಣಾ ಆಯೋಗದ ವಿರುದ್ಧ ಎಚ್‌ಡಿಕೆ, ಸಿದ್ದರಾಮಯ್ಯ ಕಿಡಿ
Recommended Video
ಬೆಂಗಳೂರು, ಸೆಪ್ಟೆಂಬರ್ 27: ಚುನಾವಣಾ ಆಯೋಗವು ಉಪ ಚುನಾವಣೆಗೆ ಹೊಸ ದಿನಾಂಕ ನಿಗದಿ ಮಾಡಿ ಶುಕ್ರವಾರ ಮತ್ತೆ ಪ್ರಕಟಣೆ ನೀಡಿದೆ. ಉಪ ಚುನಾವಣೆ ಮುಂದೂಡುವಂತೆ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದ ಮರುದಿನವೇ ದಿನಾಂಕ ಘೋಷಣೆ ಮಾಡಿದೆ.
ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯುವುದರಿಂದ ಅದು ಇತ್ಯರ್ಥ ಆಗುವವರೆಗೂ ಚುನಾವಣಾ ಆಯೋಗ ಉಪ ಚುನಾವಣೆಯನ್ನು ಘೋಷಿಸುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಆಯೋಗದ ದಿಢೀರ್ ನಿರ್ಧಾರ ರಾಜ್ಯದ ರಾಜಕೀಯ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕರು ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಕೇಂದ್ರ ಚುನಾವಣಾ ಆಯೋಗದ ಉದ್ದೇಶವೇ ಅರ್ಥವಾಗುತ್ತಿಲ್ಲ. ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ಮೊದಲು ತರಾತುರಿಯಲ್ಲಿ ಚುನಾವಣೆ ಮುಂದೂಡಿ, ಮತ್ತೆ ದಿನಾಂಕ ಘೋಷಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ, ಆದರೆ ಆಯೋಗದ ನಡೆ ಮಾತ್ರ ಸಹಜವಾಗಿಯೇ ಅನುಮಾನ ಮೂಡುವಂತಿದೆ' ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.

'ರಾಜ್ಯದ 15 ಕ್ಷೇತ್ರಗಳಿಗೆ ಮತ್ತೆ ಚುನಾವಣೆ ಘೋಷಣೆಯಾಗಿದೆ. ಆದರೆ ಚುನಾವಣಾ ಪ್ರಕ್ರಿಯೆ ಬಗ್ಗೆ ಆಯೋಗಕ್ಕೇ ಸ್ಪಷ್ಟತೆ ಇಲ್ಲ. ನೀತಿ ಸಂಹಿತೆ, ಫಲಿತಾಂಶಗಳ ಬಗ್ಗೆ ಗೊಂದಲಗಳಿವೆ. ನೀತಿ ಸಂಹಿತೆ ಇಲ್ಲದೇ ನ್ಯಾಯಬದ್ಧ ಚುನಾವಣೆ ನಡೆಯುವುದು ಹೇಗೆ? ಫಲಿತಾಂಶದ ಉಲ್ಲೇಖವೇ ಇಲ್ಲದ ಮೇಲೆ ಚುನಾವಣೆ ಏಕೆ?' ಎಂದು ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
'ಸಾಂವಿಧಾನಿಕ ಸಂಸ್ಥೆಯೊಂದು ಈ ಮಟ್ಟದ ಗೊಂದಲದಲ್ಲಿ ಕಾರ್ಯನಿರ್ವಹಿಸುವುದರ ಹಿಂದಿನ ಅರ್ಥವೇನು? ಇಂಥ ಗೊಂದಲದ ಚುನಾವಣೆ ಎಂದೂ ಘೋಷಣೆಯಾಗಿರಲಿಲ್ಲ. ಒಂದು ಆಪರೇಷನ್ ಕಮಲ, ಜನಮನ್ನಣೆಯನ್ನು ಮಾರಿಕೊಳ್ಳುವ ಜನಪ್ರತಿನಿಧಿಗಳ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟೆಲ್ಲ ಅನರ್ಥಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ' ಎಂದು ಆಯೋಗದ ನಡೆಯನ್ನು ಕುಮಾರಸ್ವಾಮಿ ಟೀಕಿಸಿದ್ದಾರೆ.
ಚುನಾವಣಾ ಆಯೋಗದ ನಡೆ ಬಹಳ ಗೊಂದಲಮಯ. ಆಯೋಗದ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಬಗ್ಗೆ ಪ್ರಶ್ನೆ ಮೂಡಿವೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಪಕ್ಷದ ಅಣತಿಯಂತೆ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತಿದೆ. ಘೋಷಣೆಯಾಗಿದ್ದ ಚುನಾವಣೆಯನ್ನು ರದ್ದು ಮಾಡಿ; ಈಗ ಮತ್ತೆ ಘೋಷಣೆ ಮಾಡಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ ಎಂದು ಕಾಂಗ್ರೆಸ್ ಹೇಳಿದೆ.












Click it and Unblock the Notifications