HDK VS DKS : ಕುಮಾರಸ್ವಾಮಿ ಒತ್ತಡದಲ್ಲಿದ್ದಾರೆ, ಅವರ ಆರೋಗ್ಯ ಸರಿ ಇಲ್ಲ: ಸಲಹೆ ಕೊಟ್ಟ ಡಿ ಕೆ ಬ್ರದರ್ಸ್
ಬೆಂಗಳೂರು, ಜೂನ್ 07: ಆರ್ ಸಿಬಿ ತಂಡ ಗೆದ್ದ ನಂತರ ಕುಮಾರಸ್ವಾಮಿ ಅವರು ಹಾಗೂ ಅವರ ಪಕ್ಷ ಏನೇನು ಎಕ್ಸ್ (ಟ್ವೀಟ್) ಮಾಡಿತ್ತು ಎಂಬುದನ್ನು ತಾವು (ಮಾಧ್ಯಮ) ರಾಜ್ಯದ ಜನತೆಗೆ ತೋರಿಸಬೇಕು. ಏಕೆಂದರೆ ಅವರು ಸುಳ್ಳು ಹೇಳುವುದರಲ್ಲಿ, ಮಾತುಗಳನ್ನು ತಿರುಗಿಸುವುದರಲ್ಲಿ ನಿಸ್ಸೀಮರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಹೇಳಿದರು. ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ನಾನು ಗಮನಿಸುತ್ತಿದ್ದೆ. ಅವರು ಒತ್ತಡದಲ್ಲಿ ಇದ್ದಾರೆ, ಆರೋಗ್ಯ ಸರಿಯಿಲ್ಲ ಎನಿಸುತ್ತದೆ. ಆರೋಗ್ಯದ ಕಡೆ ಗಮನ ಹರಿಸಿ ಈ ರಾಷ್ಟ್ರದ ಸೇವೆ ಮಾಡಲಿ ಎಂದರು.
ರಾಜಕುಮಾರ್ ಅವರ ನಿಧನದ ವೇಳೆಯ ಘಟನೆಗಳನ್ನು ಶಿವಕುಮಾರ್ ಬಿಚ್ಚಿಡುವುದು ಏನಿಲ್ಲ. ನಾನೇ ಒಪ್ಪಿಕೊಳ್ಳುವೆ ಎನ್ನುವ ಕುಮಾರಸ್ವಾಮಿ ಅವರ ಉತ್ತರದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಬೆಳಗ್ಗೆಯೊಂದು, ರಾತ್ರಿಯೊಂದು ಮಾತನಾಡುತ್ತಾರೆ" ಎಂದು ತಿಳಿಸಿದರು. ಕಾಲ್ತುಳಿತ ದುರಂತದಿಂದ ಸರ್ಕಾರ ಪಲಾಯನ ಮಾಡುತ್ತಿಲ್ಲ. ಇತ್ತೀಚೆಗೆ ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತದಿಂದ 3 ಸಾವಿರ ಜನ ಸತ್ತು ಹೋದರು.ಇದನ್ನು ಅಲ್ಲಿನ ಸರ್ಕಾರ ಮುಚ್ಚಿ ಹಾಕಲು ಪ್ರಯತ್ನ ಮಾಡಿತು. ಅದು ಯಾರ ಪ್ರಾಯೋಜಿತ ಕಾರ್ಯಕ್ರಮ? ಬಿಜೆಪಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳ? ಎಂದು ತಿರುಗೇಟು ನೀಡಿದರು

ಇದು ಸಾಂತ್ವನ ಹೇಳುವ ಸಮಯ. ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವವರಿಗೆ ನಾವು ಸಾಂತ್ವನ ಹೇಳಬೇಕೆ ಹೊರತು ರಾಜಕೀಯ ಮಾಡಬಾರದು. ದಿನಕ್ಕೊಂದು ಹೇಳಿಕೆ ನೀಡುವುದು ಎಷ್ಟು ಸರಿಯೆಂದು ಮಾಧ್ಯಮಗಳು ಹೇಳಬೇಕು ಎಂದರು. ಈ ಚರ್ಚೆಗೆ ಎಲ್ಲರೂ ವಿರಾಮ ಹಾಕಬೇಕು. ಏಕೆಂದರೆ ರಾಜ್ಯದ ಪ್ರಗತಿಯ ಬಗ್ಗೆ, ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಚಿಂತನೆ, ಸಲಹೆ ಸೂಚನೆಗಳನ್ನು ನೀಡಬೇಕಾಗುತ್ತದೆ. ರಾಜಕೀಯ ಚಿಂತನೆಯ ಅವಶ್ಯಕತೆಯಿದೆ. ಅದನ್ನು ಬಿಟ್ಟು ಅವರು ರಾಜಿನಾಮೆ ನೀಡಲಿ. ಇವರು ನೀಡಲಿ ಎಂದರೆ? ನಾವು ಸಹ ಪ್ರಧಾನಿ, ಕುಮಾರಸ್ವಾಮಿ ಸೇರಿದಂತೆ ಅವರಿವರ ರಾಜಿನಾಮೆ ನೀಡಲಿ ಎಂದು ಕೇಳಬಹುದು. ನೈತಿಕತೆಯ ಪ್ರಶ್ನೆ ಬಂದಾಗ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಬಹುದು" ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರ ಆಯ್ಕೆ ವಿಚಾರವಾಗಿ ಕಾರ್ಯಕರ್ತರ ಅಸಮಾಧಾನದ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ನನಗೆ ಇದರ ಬಗ್ಗೆ ಮಾಹಿಯಿಲ್ಲ. ಇದನ್ನು ಪಕ್ಷದ ವರಿಷ್ಠರ ತೀರ್ಮಾನ. ಮುಖ್ಯಮಂತ್ರಿಗಳ ಆಯ್ಕೆ. ಅವರ ತೀರ್ಮಾನವನ್ನ ಪಕ್ಷ ಸ್ವಾಗತ ಮಾಡುತ್ತದೆ ಎಂದು ಮಾಜಿ ಸಂಸದರಾದ ಡಿ ಕೆ ಸುರೇಶ್ ಅವರು ತಿಳಿಸಿದರು.
ಬಿಜೆಪಿ ನಾಯಕರ ಮಂಗಳೂರು ಚಲೋ ಕಾರ್ಯಕ್ರಮದ ಕುರಿತು ಮಾತನಾಡಿ, ಆ ಊರಿಗೆ ತನ್ನದೇ ಆದ ಇತಿಹಾಸವಿದೆ. ಕರಾವಳಿ ಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ಮಾಡುವ ಪ್ರಯತ್ನ. ಯಾವುದೇ ಜನನಾಯಕರು ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಸಬೇಕು. ಜೊತೆಗೆ ಅಲ್ಲಿನ ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಬೇಕು. ರಾಜಕೀಯಕ್ಕಾಗಿ ಭಾವನಾತ್ಮಕವಾಗಿ ಜನರನ್ನು ಎತ್ತಿಕಟ್ಟುವುದು ಸರಿಯಲ್ಲ. ಬಿಜೆಪಿಯ ನಿಲುವುಗಳು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರು.
ಈ ಬಗ್ಗೆ ಬಿಜೆಪಿಯವರು ಕೇಂದ್ರ ಸರ್ಕಾರದ ಬಳಿ ಮಾತನಾಡಲಿ. ಬೇರೆ, ಬೇರೆ ರಾಜ್ಯಗಳಲ್ಲಿ ಅವರು ತೆಗೆದುಕೊಳ್ಳುತ್ತಿರುವ ತೀರ್ಮಾನಗಳು, ಅಲ್ಲೊಂದು, ಇಲ್ಲೊಂದು ಮಾತುಗಳು ಜೊತೆಗೆ ಅವರ ನಾಯಕರ ತೀರ್ಮಾನಗಳನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿಯವರು ಮುಂದಿನದ್ದನ್ನು ತೀರ್ಮಾನ ಮಾಡಲಿ ಎಂದು ಹೇಳಿದರು.












Click it and Unblock the Notifications