Breaking; ಪಂಚರತ್ನ ರಥಯಾತ್ರೆಗೆ ಚಾಲನೆ ಕೊಟ್ಟ ಎಚ್‌ಡಿಕೆ
ಬೆಂಗಳೂರು, ಅಕ್ಟೋಬರ್ 27; ಕರ್ನಾಟಕ ಜೆಡಿಎಸ್‌ನ 'ಪಂಚರತ್ನ ರಥ ಯಾತ್ರೆ'ಗೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ನವೆಂಬರ್ 1ರಂದು ಯಾತ್ರೆ ಕೋಲಾರದ ಮುಳಬಾಗಿಲಿನಿಂದ ಆರಂಭವಾಗಲಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೆಂಗಳೂರಿನ ಬಸವನಗುಡಿಯ ಶ್ರೀ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿದರು.

ತಾಯಿ ಶ್ರೀ ಭುವನೇಶ್ವರಿ ವಿರಾಜಮಾನವಾಗಿರುವ ಎಲ್‌ಇಡಿ ವಾಹನ ಮತ್ತು ಕುಮಾರಸ್ವಾಮಿ ನಿಂತು ಭಾಷಣ ಮಾಡುವ ಜೆಪಿ ರಥಕ್ಕೆ ಪೂಜೆ ಸಲ್ಲಿಸಿ, ಎರಡೂ ರಥಗಳಿಗೆ ಚಾಲನೆ ಕೊಟ್ಟರು. ನವೆಂಬರ್ 1ರಂದು ಮುಳಬಾಗಿಲಿನ ಕುರುಡುಮಲೆಯ ಶ್ರೀ ಮಹಾಗಣಪತಿ ದೇವಾಲಯದಿಂದ ಪೂರ್ಣ ಪ್ರಮಾಣದಲ್ಲಿ ರಥಯಾತ್ರೆ ಹೊರಡಲಿದೆ.
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ, ಶಿಕ್ಷಣ, ನೀರಾವರಿ, ಕೃಷಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡುವ ಬದಲಾವಣೆಗಳನ್ನು ಪಂಚರತ್ನ ರಥಯಾತ್ರೆಯ ಮೂಲಕ ಕುಮಾರಸ್ವಾಮಿ ರಾಜ್ಯದ ಜನರಿಗೆ ತಿಳಿಸಲಿದ್ದಾರೆ.

ಬಿಜೆಪಿಯ ಜನಸಂಕಲ್ಪ ಯಾತ್ರೆ, ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಬಳಿಕ ರಾಜ್ಯದಲ್ಲಿ ಮತ್ತೊಂದು ಪಕ್ಷ 2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಥಯಾತ್ರೆಯನ್ನು ಕೈಗೊಂಡಿದೆ.
ಸುಮಾರು 35 ದಿನಗಳ ಕಾಲ ಮೊದಲ ಹಂತದ 'ಪಂಚರತ್ನ ರಥ ಯಾತ್ರೆ' ನಡೆಯಲಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ರಾಮನಗರ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಯಾತ್ರೆ ಸಾಗಲಿದೆ.
ನವೆಂಬರ್ 1ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ರಥಯಾತ್ರೆ ಆರಂಭವಾಗಲಿದೆ. ನವೆಂಬರ್ 6 ರಿಂದ 10ರ ತನಕ ಚಿಕ್ಕಬಳ್ಳಾಪುರ, ನವೆಂಬರ್ 11 ರಿಂದ 13ರ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್ 14 ರಿಂದ 23ರ ತನಕ ತುಮಕೂರು ಜಿಲ್ಲೆ ಮತ್ತು ನವೆಂಬರ್ 24 ರಿಂದ 30ರ ತನಕ ಹಾಸನ ಜಿಲ್ಲೆಯಲ್ಲಿ ರಥಯಾತ್ರೆ ಸಂಚಾರ ನಡೆಸಲಿದೆ ಎಂದು ಪಕ್ಷ ಹೇಳಿದೆ.
ಪಂಚರತ್ನ ಯಾತ್ರೆಯ ವಿವರ
1. ಶಿಕ್ಷಣವೇ ಆಧುನಿಕ ಶಕ್ತಿ; ಉತ್ತಮ ಗುಣಮಟ್ಟದ ಹಾಗೂ ವ್ಯವಸ್ಥಿತ ಶಿಕ್ಷಣವನ್ನು ಉಚಿತವಾಗಿ ನೀಡುವ ಯೋಜನೆ.
2. ಆರೋಗ್ಯ ಸಂಪತ್ತು; ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 24*7 ಕಾರ್ಯ ನಿರ್ವಹಣೆ ಮಾಡುವ ಸುಸಜ್ಜಿತ ಹೈ-ಟೆಕ್ ಆಸ್ಪತ್ರೆ ನಿರ್ಮಾಣ.
3. ರೈತ ಚೈತನ್ಯ; ಆಧುನಿಕ ತಂತ್ರಜ್ಞಾನದ ಕೃಷಿ ಪದ್ಧತಿ ಅಳವಡಿಕೆ, ಸರಿಯಾದ ಬೆಳೆ ಶೇಖರಣಾ ವ್ಯವಸ್ಥೆ ಹಾಗೂ ಲಾಭದಾಯಕವಾದ ಮಾರುಕಟ್ಟೆ ವ್ಯವಸ್ಥೆ.
4. ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ; ಯುವಜನತೆ ಹಾಗೂ ಮಹಿಳೆಯರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ.
5. ವಸತಿಯ ಆಸರೆ; ವಸತಿ ಇಲ್ಲದವರಿಗೆ ಸರ್ಕಾರದಿಂದಲೇ ವಸತಿ ಕಟ್ಟಿಕೊಡುವ ಯೋಜನೆ












Click it and Unblock the Notifications