Breaking; ಮನೆ ಮೇಲೆ ಕನ್ನಡ ಬಾವುಟ ಅಭಿಯಾನ, ಎಚ್‌ಡಿಕೆ ಚಾಲನೆ
ಬೆಂಗಳೂರು, ಅಕ್ಟೋಬರ್ 30; ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷ 'ಮನೆ ಮನೆ ಮೇಲೂ ಕನ್ನಡ ಬಾವುಟ ಹಾರಿಸೋಣ ಅಭಿಯಾನ' ನಡೆಸಲಿದೆ. ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ನಡೆಯುವ ಮನೆ ಮನೆ ಮೇಲೂ ಕನ್ನಡ ಬಾವುಟ ಹಾರಿಸೋಣ ಅಭಿಯಾನಕ್ಕೆ ಚಾಲನೆ ನೀಡಿದರು.

ಕನ್ನಡ ಬಾವುಟಗಳನ್ನು ಹಸ್ತಾಂತರ ಮಾಡುವ ಮೂಲಕ ಎಚ್. ಡಿ. ಕುಮಾರಸ್ವಾಮಿ ಅಭಿಯಾನಕ್ಕೆ ಚಾಲನೆ ನೀಡಿದರು. ಜೆಡಿಎಸ್ ಕಾರ್ಯಕರ್ತರು ಮನೆ-ಮನೆಗೆ ಕನ್ನಡ ಧ್ವಜ ತಲುಪಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ನವೆಂಬರ್ 1ರಂದು ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಗೆ ಚಾಲನೆ ಸಿಗಲಿದೆ. ಮತ್ತೊಂದು ಕಡೆ ಮನೆ ಮನೆ ಮೇಲೂ ಕನ್ನಡ ಬಾವುಟ ಅಭಿಯಾನವನ್ನು ಪಕ್ಷ ನಡೆಸುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಸಹ ಕನ್ನಡ ಬಾವುಟ ವಿತರಣೆ ನಡೆಯಲಿದೆ.

ಈ ಅಭಿಯಾನದ ಬಗ್ಗೆ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, "ನವೆಂಬರ್ 1ರಂದು ನಮ್ಮ ಪಕ್ಷದ ವತಿಯಿಂದ ಮನೆ ಮನೆ ಮೇಲೆ ಕನ್ನಡ ಬಾವುಟ ಹಾರಿಸುವ ಸಂಕಲ್ಪ ಮಾಡಿದ್ದೇವೆ. ರಾಜ್ಯದ ಜನರು ಇದರಲ್ಲಿ ಭಾಗವಹಿಸಬೇಕು" ಎಂದು ಕರೆ ನೀಡಿದರು.
ಜೆಡಿಎಸ್ ಪಕ್ಷ ಟ್ವೀಟ್ ಮೂಲಕ, 'ಪಕ್ಷ ಕರೆ ನೀಡಿರುವಂತೆ, ನವೆಂಬರ್ 1ರಂದು ಕರ್ನಾಟಕ ರಾಜ್ಯದಾದ್ಯಂತ ಪ್ರತಿ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸುವ ಅಭಿಯಾನ ಬಾರಿಸು ಕನ್ನಡ ಡಿಂಡಿಮವ ಹಾರಿಸು ಕನ್ನಡ ಬಾವುಟವ ಆಯೋಜಿಸಲಾಗಿದೆ, ಕರ್ನಾಟಕದ ಕನ್ನಡದ ಅಸ್ಮಿತೆಯನ್ನು ಉಳಿಸುವುದು ಪ್ರತಿ ಕನ್ನಡಿಗರ ಕರ್ತವ್ಯವಾಗಿದೆ ಎಂದು ಹೇಳಿದೆ.
ನವೆಂಬರ್ 1ರಂದು 67ನೇ ಕನ್ನಡ ರಾಜ್ಯೋತ್ಸವ ನಡೆಯಲಿದೆ. ಜೆಡಿಎಸ್ ಪಕ್ಷ ಈಗಾಗಲೇ ಹಲವು ಕನ್ನಡ ಪರ ಅಭಿಯಾನದ ಮೂಲಕ ಜನರನ್ನು ತಲುಪುತ್ತಿದೆ. ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರದಲ್ಲಿ ಧ್ವನಿ ಎತ್ತುತ್ತಿದೆ.











Click it and Unblock the Notifications