Lok Sabha Election 2024: ದಳಪತಿಗಳಿಗೆ ಪ್ರತಿಷ್ಠೆಯಾದ ಮಂಡ್ಯ ಲೋಕಸಭಾ ಕ್ಷೇತ್ರ; ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್ ?
ಬೆಂಗಳೂರು, ಮಾರ್ಚ್ 25: ಲೋಕಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಕ್ಷೇತ್ರ ಹಂಚಿಕೆ ಅಂತಿಮವಾಗಿದೆ. ಬಿಜೆಪಿಗೆ 25 ಹಾಗೂ ಜೆಡಿಎಸ್ ಮೂರು ಕ್ಷೇತ್ರಗಳನ್ನ ಬಿಜೆಪಿ ಬಿಟ್ಟು ಕೊಟ್ಟಿದೆ. ಮಂಡ್ಯ , ಹಾಸನ ಹಾಗೂ ಕೋಲಾರ ದಳಪತಿಗಳ ಕೈ ಸೇರಿದೆ.
ಸದ್ಯ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಹಿಡಿತವನ್ನ ಸಾಧಿಸುವ ನಿಟ್ಟಿನಲ್ಲಿ ದಳಪತಿಗಳು ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಮಂಡ್ಯದಿಂದ ಕಣಕ್ಕಿಳಿಸುವುದರಿಂದ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಸಾಧ್ಯವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿ ಹಾಕಿಕೊಂಡಿದೆಟ.

ಜೆಡಿಎಸ್ ಅಭ್ಯರ್ಥಿಯಾಗಿ ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುವುದು ಖಚಿತವಾಗಿದ್ದು, ಸೋಮವಾರ ಅಧಿಕೃತ ನಿರ್ಧಾರ ಪ್ರಕಟಿಸಲಿದ್ದಾರೆ. ಹೃದಯ ಶಸ್ತ್ರ ಚಿಕಿತ್ಸೆ ಪೂರೈಸಿ ಬೆಂಗಳೂರಿಗೆ ವಾಪಸಾಗಿರುವ ಕುಮಾರಸ್ವಾಮಿ ಅವರಿಗೆ ಶುಭ ಹಾರೈಸಲು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅಭಿಮಾನಿಗಳು ಅವರ ಮನೆ ಮುಂದೆ ಭಾನುವಾರ ಜಮಾಯಿಸಿದ್ದರು.ಈ ವೇಳೆ ನಾನು ಈ ಬಾರಿ ನಿಮಗೆ ನಿರಾಸೆ ಮಾಡಲ್ಲ ಎಂದು ಕುಮಾರಸ್ವಾಮಿ ಹೇಳಿದ್ರು.
ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಬೇಕು ಎಂದು ಮಂಡ್ಯದ ಕಾರ್ಯಕರ್ತರು, ಅಭಿಮಾನಿಗಳು ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ತಂದರು. ಈ ಕುರಿತು ಪಕ್ಷದ ನಾಯಕರ ಜೊತೆಗೆ ಕುಮಾರಸ್ವಾಮಿ ಅವರು ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸದ್ಯ ತಾವು ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡರೊಂದಿಗೆ ಸಮಾಲೋಚಿಸಿ ನಿರ್ಧಾರ ತಿಳಿಸುವುದಾಗಿ ಭರವಸೆ ನೀಡಿದ್ರು. ಮಂಡ್ಯದೊಂದಿಗಿನ ಭಾವನಾತ್ಮಕ ಸಂಬಂಧ ಹಾಗೂ ಅಲ್ಲಿನ ಜನರ ಪ್ರೀತಿ, ವಿಶ್ವಾಸ ಸಿಕ್ಕರುವ ಬಗ್ಗೆಯೂ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅಲ್ಲಿಗೆ ಪ್ರತಿಷ್ಠಿತ ಮಂಡ್ಯದಿಂದ ಕುಮಾರಸ್ವಾಮಿ ಕಣಕ್ಕಿಳಿಯುವುದು ಫಿಕ್ಸ್ ಎನ್ನಲಾಗಿದೆ.

ಇನ್ನೂ ಆರಂಭದಲ್ಲಿ ಜೆಡಿಎಸ್ ನಾಯಕ ಸಿ ಎಸ್ ಪುಟ್ಟರಾಜು ಅವರು ಜೆಡಿಎಸ್ ಮಂಡ್ಯ ಅಭ್ಯರ್ಥಿಯನ್ನಾಗಿ ಮಾಡಲಿದೆ ಎನ್ನುವ ಚರ್ಚೆ ನಡೆಯುತ್ತಿತ್ತು. ಆದರೆ, ಮಂಡ್ಯದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಸಿ ಎಸ್ ಪುಟ್ಟರಾಜು ಅವರು ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಲಿ ಎಂದು ಹೇಳಿದ್ದರು. ಇನ್ನೂ ಕಾರ್ಯಕರ್ತರಿಂದಲೂ ಸ್ಪರ್ಧೆಗೆ ಒತ್ತಡ ಬಂದಿದ್ದು, ಬಿಜೆಪಿ ವರಿಷ್ಠರಾದ ಅಮಿತ್ ಶಾ ಅವರು ಸಹ ಮಂಡ್ಯದಿಂದ ಕುಮಾರಸ್ವಾಮಿ ಅವರಿಗೆ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹೈಕಮಾಂಡ್‌ನಿಂದಲೂ ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆಯಿಂದ ಹಳೆ ಮೈಸೂರು ಭಾಗದಲ್ಲಿಎನ್‌ಡಿಎಗೆ ಬಲ ತಂದುಕೊಡಲಿದೆ ಎಂದು ಕೇಳಿ ಬಂದಿದೆ. ಹೀಗಾಗಿ ಹಲವು ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಮಂಡ್ಯದ ಅಖಾಡಕ್ಕಿಳಿಯಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.ಇಂದು( ಸೋಮವಾರ) ಚನ್ನಪಟ್ಟಣದ ಮುಖಂಡರೊಂದಿಗೆ ನಡೆಯುವ ಮಾತುಕತೆ ನಡೆಸಿ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ಖಚಿತ ಪಡಿಸಿವೆ.












Click it and Unblock the Notifications