ಆಪರೇಷನ್ ಕಮಲ : ಸ್ಪೀಕರ್‌ಗೆ ಎಚ್.ಡಿ.ಕುಮಾರಸ್ವಾಮಿ ದೂರು
ಬೆಂಗಳೂರು, ಫೆಬ್ರವರಿ 08 : ಆಪರೇಷನ್ ಕಮಲದ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪೀಕರ್‌ಗೆ ದೂರು ನೀಡಿದ್ದಾರೆ. ಆಡಿಯೋ ಬಿಡುಗಡೆ ಮಾಡಿರುವ ಅವರು ಬಿಜೆಪಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ಫೆ.8ರಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ವಿಧಾನಸಭೆಯ ಸಭಾಧ್ಯಕ್ಷರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದು, ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ವಿಧಾನಸಭೆಯ ಎಲ್ಲಾ ಸದಸ್ಯರನ್ನು ತಾವು ಅತ್ಯಂತ ಅಭಿಮಾನದಿಂದ ಕಂಡು ಎಲ್ಲರಿಗೂ ಸದನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ಮಾಡಿಕೊಡುವ ಮೂಲಕ ನಮ್ಮೆರಿಗೂ ಆದರ್ಶನೀಯವಾಗಿದ್ದೀರಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೆ ? : ಫೆ.7ರಂದು ನಡೆದಿರುವ ಒಂದು ವಿದ್ಯಮಾನ ಅತ್ಯಂತ ವಿಷಾದನೀಯ. ನಮ್ಮ ಪಕ್ಷದ ಗುರುಮಿಠಕಲ್ ಕ್ಷೇತ್ರದ ಶಾಸಕರಾದ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡರನ್ನು ಮಾನ್ಯ ವಿಧಾಸಭೆ ಪ್ರತಿಪಕ್ಷ ನಾಯಕರ ಪರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ದೇವದುರ್ಗದಲ್ಲಿರುವ ಸರ್ಕಾರಿ ಅತಿಥಿ ಗೃಹಕ್ಕೆ ಆಹ್ವಾನಿಸಿರುತ್ತಾರೆ.
ಈ ಸಂದರ್ಭದಲ್ಲಿ ಮಾನ್ಯ ವಿಧಾನಸಭೆಯ ನಾಯಕರು ಖುದ್ದಾಗ ಹಾಜರಿದ್ದು, ನಾಗನಗೌಡ ಕಂದಕೂರು ಅವರಿಂದ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸುವಂತೆ ಪ್ರಚೋದನೆ ಮಾಡಿರುತ್ತಾರೆ. ರಾಜೀನಾಮೆಗೆ ಪೂರಕವಾದ ಆಮಿಷಗಳನ್ನು ಒಡ್ಡಿರುತ್ತಾರೆ.
ಈ ವೇಳೆ ಮಾನ್ಯ ಪ್ರತಿಪಕ್ಷ ನಾಯಕರು ಹಾಗೂ ಅವರ ಜೊತೆಯಲ್ಲಿದ್ದ ದೇವದುರ್ಗದ ಶಾಸಕ ಶಿವನಗೌಡ ನಾಯಕ್ ಅವರು ಅತ್ಯಂತ ಆಕ್ಷೇಪಾರ್ಹ ಮಾತುಗಳನ್ನು ಬಳಸಿದ್ದು ತಮ್ಮ ಸ್ಥಾನದ ಬಗ್ಗೆಯೂ ಹಗುರುವಾಗಿ ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ಹಾಸನದ ಶಾಸಕ ಪ್ರೀತಂ ಗೌಡ ಅವರು ಹಾಜರಿದ್ದರು. ಅವರ ಮಾತುಗಳು ವೈಯಕ್ತಿಕವಾಗಿ ನನಗೆ ಅತ್ಯಂತ ನೋವು ಉಂಟು ಮಾಡಿದೆ. ರಾಜ್ಯ ವಿಧಾನಸಭೆಯ ಸದಸ್ಯರೊಬ್ಬರು ಸಭಾಧ್ಯಕ್ಷರ ಬಗ್ಗೆ ಈ ರೀತಿ ಮಾತನಾಡಿದ್ದಾರೆ ಎಂಬುದು ಊಹೆಗೂ ನಿಲುಕದ್ದು.

ಅವರು ಮಾತನಾಡಿರು ಧ್ವನಿ ಸುರುಳಿಯನ್ನು ತಮ್ಮ ಆದ್ಯ ಗಮನಕ್ಕೆ ಈ ಮೂಲಕ ಕಳುಹಿಸಿದೆ. ತಾವು ಧ್ವನಿ ಸುರಳಿಯನ್ನು ಆಲಿಸಿ ವಿಧಾನಸಭೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಭಾ ನಾಯಕನಾಗಿ ಮನವಿ ಮಾಡುತ್ತೇನೆ ಎಂದು ಪತ್ರದಲ್ಲೊ ಹೇಳಿದ್ದಾರೆ.












Click it and Unblock the Notifications