ಕೆಜೆ ಜಾರ್ಜ್ ಮನೆಯಲ್ಲಿನ 'ಸಿದ್ದ'ಲೀಲೆ ಬಹಿರಂಗಪಡಿಸಿ: HD ಕುಮಾರಸ್ವಾಮಿ
ಬೆಂಗಳೂರು, ಅಕ್ಟೋಬರ್ 24: ತಾಜ್ ವೆಸ್ಟೆಂಡ್ ನಲ್ಲಿ ಕುಳಿತು ಸರ್ಕಾರ ನಡೆಸಿದ್ದರು ಎಂಬ ವಿಚಾರ ಮೇಲಿಂದ ಮೇಲೆ ಚರ್ಚೆ ನಡೆಯುತ್ತಿದೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಎಚ್‌ಡಿ ಕುಮಾರಸ್ವಾಮಿ ಅವರು, ನೀವು ಬೇರೆಯವರಿಗೆ ಹಂಚಿಕೆ ಆಗಿದ್ದ ನಿವಾಸದಲ್ಲಿ ಇದ್ದದ್ದು ಯಾಕೆ? ಅನ್ಯರ ಹಂಗೇಕೆ ಬೇಕಿತ್ತು ನಿಮಗೆ? ಎಂದು ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಂಗಳವಾರ ಟ್ವೀಟ್ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಕುಣಿಯಲಾರದವನಿಗೆ ನೆಲ ಡೊಂಕು ಎನ್ನುವ ಮಾತೇನೋ ಸರಿ. ಆದರೆ, ಕುಣಿಯಲು ಬಿಟ್ಟು ನೆಲ ಅಗೆಯುವ ನಿಮ್ಮ 'ಮೈತ್ರಿದ್ರೋಹ'ಕ್ಕೆ ಏನು ಹೇಳುವುದು ಎಂದು ಕಿಡಿ ಕಾರಿದ್ದಾರೆ.

ತಾಜ್‌ವೆಸ್ಟ್ ಎಂಡ್ ನಲ್ಲಿ ಇದ್ದ ಕಾರಣವನ್ನು ನಾನು ಈಗಾಗಲೇ ನೂರಾರು ಸಲ ತಿಳಿಸಿದ್ದೇನೆ. ಆದರೆ ನನ್ನ ಸಂಪುಟದಲ್ಲಿ ಕೆಜೆ ಜಾಜ್ ಅವರಿಗೆ ಹಂಚಿಕೆ ಆಗಿದ್ದ ಮನೆಯಲ್ಲಿ ನಡೆಸಿದ ಸಿದ್ದಲೀಲೆಯನ್ನು ಬಹಿರಂಗ ಮಾಡುವಿರಾ? ನಿಮ್ಮ ಅಂತರಂಗವನ್ನು ಒಮ್ಮೆಯಾದರೂ ಬಹಿರಂಗ ಮಾಡಿ ಸಿದ್ದರಾಮಯ್ಯನವರೇ ಎಂದು ವಾಗ್ದಾಳಿ ನಡೆಸಿದ್ದಾರೆ.
'ಮೀರುಸಾದಿಕ'ನ ಆಧುನಿಕ ಅವತಾರಿ ಸಿದ್ದರಾಮಯ್ಯ
ದೋಖಾ ಮಾಡುವುದೇ ದುರುದ್ದೇಶವಾಗಿದ್ದಾಗ ನೆಲವನ್ನು ಡೊಂಕು ಮಾಡುವುದು ಕಷ್ಟವೇ? 'ಮೀರುಸಾದಿಕ'ನ ಆಧುನಿಕ ಅವತಾರಿ ಆಗಿರುವ ನಿಮಗೆ ಇಂಥ ಕ್ಷುದ್ರವಿದ್ಯೆಗಳೆಲ್ಲ ಕರತಲಾಮಲಕ. ಅದನ್ನೇ ನೀವು ಸುತ್ತಿಬಳಸಿ ಹೇಳುತ್ತಿದ್ದೀರಿ. ಧೈರ್ಯವಾಗಿ, ನೇರವಾಗಿ ಸತ್ಯ ಹೇಳಲು ಭಯವೇ? ಹೇಳಿ, ಕುಮಾರಸ್ವಾಮಿ ಸರ್ಕಾರವನ್ನು ತೆಗೆದಿದ್ದು ನಾನೇ ಎಂದು ಹೇಳಲು ನಿಮಗೆ ಗುಂಡಿಗೆ ಸಾಲದೇ? ಎಂದು ಪ್ರಶ್ನಿಸಿದರು.

ಸಿದ್ಧವನದಲ್ಲಿ ಹೆಣೆದ ಸಿದ್ದಸೂತ್ರ ನನಗೆ ಗೊತ್ತಿಲ್ಲದ ಚಿದಂಬರ ರಹಸ್ಯವೇ? ಬೆಕ್ಕು ಕಣ್ಮುಚ್ಚಿ, ಕದ್ದು ಹಾಲು ಕುಡಿದರೆ ಅನ್ಯರಿಗೆ ಕಾಣದು ಎನ್ನುವಷ್ಟು ಕಿಲಾಡಿತನವೇ? ಇದು ಕಿಲಾಡಿತನವೋ ಅಥವಾ ಕಿಡಿಗೇಡಿತನವೋ? ತಮ್ಮ ಇಂಥ ಸಿದ್ದಲೀಲೆಗಳು ನಮಗೇನೂ ಹೊಸತಲ್ಲ.
ಕುಣಿಯಲಾರದವನಿಗೆ ನೆಲ ಡೊಂಕು ಎನ್ನುವ ಮಾತೇನೋ ಸರಿ. ಆದರೆ, ಕುಣಿಯಲು ಬಿಟ್ಟು ನೆಲ ಅಗೆಯುವ ನಿಮ್ಮ 'ಮೈತ್ರಿದ್ರೋಹ'ಕ್ಕೆ ಏನು ಹೇಳುವುದು @siddaramaiah ನವರೇ? ದೋಖಾ ಮಾಡುವುದೇ ದುರುದ್ದೇಶವಾಗಿದ್ದಾಗ ನೆಲವನ್ನು ಡೊಂಕು ಮಾಡುವುದು ಕಷ್ಟವೇ? 'ಮೀರುಸಾದಿಕ'ನ ಆಧುನಿಕ ಅವತಾರಿ ಆಗಿರುವ ನಿಮಗೆ ಇಂಥ ಕ್ಷುದ್ರವಿದ್ಯೆಗಳೆಲ್ಲ ಕರತಲಾಮಲಕ. ಅದನ್ನೇ…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 24, 2023
ಅನ್ಯರ ಹಂಗೇಕೆ ಬೇಕಿತ್ತು ನಿಮಗೆ?
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಾವೇರಿಯನ್ನು ಖಾಲಿ ಮಾಡಲಿಲ್ಲ ಸರಿ. ಜಾರ್ಜ್ ಅವರಿಗೆ ಹಂಚಿಕೆ ಆಗಿದ್ದ ನಿವಾಸದಲ್ಲಿ ನೀವು ಯಾಕೆ ಇದ್ದಿರಿ? ಪಾಪ.. ಅನ್ಯರ ಹಂಗೇಕೆ ಬೇಕಿತ್ತು ನಿಮಗೆ?. ಮಾಜಿ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಭಂಗಲೆಯನ್ನೇ ಹಂಚಿಕೆ ಮಾಡುತ್ತಿದ್ದೆವು. ನೀವು ಕೇಳಬಹುದಿತ್ತು. ಕುತಂತ್ರ, ಕುಯುಕ್ತಿಯೇ ಸಿದ್ದಸೂತ್ರ ಆಗಿರುವಾಗ ಭಂಗಲೆ ಬಿಟ್ಟುಕೊಡುವಷ್ಟು ಉದಾರತೆ ನಿಮಗೆ ಎಲ್ಲಿಂದ ಬರಬೇಕು? ಎಂದು ವ್ಯಂಗ್ಯವಾಡಿದರು.
ಇಷ್ಟಕ್ಕೂ ಇನ್ನೊಬ್ಬರು ಇದ್ದ, ಅದರಲ್ಲೂ ನನ್ನ ಸಂಪುಟದಲ್ಲಿ ಸಚಿವರಾಗಿದ್ದವರಿಗೆ ಹಂಚಿಕೆ ಆಗಿದ್ದ ಭಂಗಲೆಯಲ್ಲಿ ಸೇರಿಕೊಳ್ಳುವುದು ಸಮಾಜವಾದಿಗೆ ಅದೆಂಥ ಸಭ್ಯತೆ? ಅದೆಂಥ ಶೋಭೆ? ಛೀ! ಛೀ ಎಂದು ಸಿಎಂ ಸಿದ್ದರಾಮಯ್ಯನವರ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಜಾಜ್ ಅವರಿದ್ದ ಮನೆಯಲ್ಲಿನ ಸಿದ್ದಲೀಲೆ ಬಹಿರಂಗಪಡಿಸುತ್ತುವಂತೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.












Click it and Unblock the Notifications