ಸಲಹೆಗಾರರನ್ನು ನೇಮಕ ಮಾಡಿಕೊಂಡ ಮುಖ್ಯಮಂತ್ರಿಗೆ ಹ್ಯಾಟ್ಸಾಫ್ ಎಂದ ಹೆಚ್.ಡಿ.ಕುಮಾರಸ್ವಾಮಿ: ಕಾರಣವೇನು?
ಬೆಂಗಳೂರು, ಡಿಸೆಂಬರ್ 30: ರಾಜ್ಯ ಕಾಂಗ್ರೆಸ್ ಸರಕಾರ ರೈತರಿಗೆ ಬರ ಪರಿಹಾರ ನೀಡುವಲ್ಲಿ ಮೀನಾಮೇಷ ಎಣಿಸುತ್ತಿದೆ. ಬರದ ನಡುವೆಯೂ ಮೂವರು ಹಿರಿಯ ಶಾಸಕರಿಗೆ ಸಂಪುಟ ದರ್ಜೆ ಭಾಗ್ಯ ಕರುಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜಕೀಯ ಗಂಜಿ ಕೇಂದ್ರʼಗಳನ್ನು ಯಥೇಚ್ಚವಾಗಿ ಸೃಷ್ಟಿ ಮಾಡುತ್ತಿದೆ ಎಂದು ಮಾಜಿ ಮುಖ್ಯಮತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಸರಕಾರ ರೈತರನ್ನು ಬಹಳ ಕೇವಲವಾಗಿ ನಡೆಸಿಕೊಳ್ಳುತ್ತಿದೆ. ಆದರೆ, ಅಧಿಕಾರನ್ನು ಭರ್ಜರಿಯಾಗಿ ಅನುಭವಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸಲಹೆಗಾರರನ್ನು ನೇಮಕ ಮಾಡಿಕೊಂಡಿರುವ ಸಿಎಂಗೆ ಹ್ಯಾಟ್ಸಾಫ್ ಎಂದ ಹೆಚ್ ಡಿ ಕುಮಾರಸ್ವಾಮಿ ಅವರು, ಸಿಎಂ ಅವರು ಬಿ.ಆರ್.ಪಾಟೀಲ್ ಅವರನ್ನು ಸಲಹೆಗಾರರನ್ನಾಗಿ ನೆಮಕ ಮಾಡಿಕೊಂಡಿದ್ದಾರೆ. ಬಸವರಾಜ ರಾಯರೆಡ್ಡಿ ಅವರಿಗೆ ಆರ್ಥಿಕ ಸಲಹೆಗಾರರು ಎಂದು ಮಾಡಿ ಸಂಪುಟ ದರ್ಜೆ ನೀಡಿದ್ದಾರೆ. ಹಾಗೆಯೇ, ರಾಜ್ಯದ 3ನೇ ಆಡಳಿತ ಸುಧಾರಣಾ ಆಯೋಗಕ್ಕೆ ಆರ್.ವಿ.ದೇಶಪಾಂಡೆ ಅವರಿಗೆ ಅವಕಾಶ ನೀಡಿ ಅವರಿಗೂ ಸಂಪುಟ ದರ್ಜೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಆತನ್ಯಾರೋ ಚುನಾವಣೆ ಮತ್ತು ಗ್ಯಾರಂಟಿ ತಂತ್ರಗಾರಿಕೆ ಮಾಡಿದ ಎಂದು ಆತನಿಗೂ ಸಲಹೆಗಾರ ಹುದ್ದೆ ಕೊಟ್ಟು ಸಂಪುಟ ದರ್ಜೆ ಕರುಣಿಸಿದ್ದಾರೆ. ಇನ್ನೊಬ್ಬರನ್ನು ಮಾಧ್ಯಮ ಸಲಹೆಗಾರ ಅಂತ ಮಾಡಿಕೊಂಡು ಅವರಿಗೂ ಸಂಪುಟ ದರ್ಜೆ ನೀಡಿದ್ದಾರೆ. ಹೀಗೆ ಸುತ್ತಲೂ ಸಲಹೆಗಾರರು, ಕಾರ್ಯದರ್ಶಿಗಳನ್ನು ಇಟ್ಟುಕೊಟಂಡು ಜನರ ತೆರಿಗೆ ದುಡ್ಡಿನಲ್ಲಿ ಗೂಟದ ಕಾರು, ಸರಕಾರಿ ಕಚೇರಿ, ಸಿಬ್ಬಂದಿ ನೀಡಿದ್ದಾರೆ ಎಂದು ಕಿಡಿಕಾರಿದರು.
ದಾಖಲೆ 14 ಬಜೆಟ್ ಮಂಡಿಸಿದವರಿಗೆ ಸಲಹೆಗಾರರಾ!?
ನಾಡು ಕೊಳ್ಳೆ ಹೋಗುತ್ತಿದ್ದರೂ ಈ ಸರಕಾರದಲ್ಲಿ ಅಧಿಕಾರ ಲಾಲಸೆಗೇನೂ ಕೊರತೆ ಇಲ್ಲ. 14 ಬಜೆಟ್ʼಗಳನ್ನು ಮಂಡಿಸಿ ದಾಖಲೆ ಮಾಡಿದವರು ತಮಗೆ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಸಿಎಂ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿರುವ ಕ್ರಮವನ್ನು ಕಠಿಣ ಶಬ್ದಗಳಲ್ಲಿ ಟೀಕಿಸಿದರು
ಅವರೇ ವಿಶ್ವ ವಿಖ್ಯಾತ ಆರ್ಥಿಕ ತಜ್ಞರು. ಹಣಕಾಸು ಸಚಿವರಾಗಿ ಅನೇಕ ಸಿಎಂಗಳ ಜತೆ ಕೆಲಸ ಮಾಡಿದವರು. ಡಿಸಿಎಂ, ಸಿಎಂ ಹಾಗೂ ಪ್ರತಿಪಕ್ಷ ನಾಯಕರಾಗಿದ್ದವರು. ಅವರು ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದರೆ ಅಚ್ಚರಿ ಆಗುತ್ತಿದೆ ಎಂದು ಟಾಂಗ್ ನೀಡಿದರು.
ಇನ್ನು, ಆರ್.ವಿ.ದೇಶಪಾಂಡೆ ಅವರು 25 ವರ್ಷಗಳ ಕಾಲ ಮಂತ್ರಿ ಆಗಿದ್ದವರು. ವಿವಿಧ ಸಿಎಂಗಳ ಜತೆ ಹತ್ತಾರು ಇಲಾಖೆಗಳಲ್ಲಿ ಕೆಲಸ ಮಾಡಿದ್ದವರು. ಬಹಳ ಹಿರಿಯರು. ಈಗ ಅವರನ್ನು ಮೂರನೇ ಆಡಳತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಹಿಂದೆ ಹಾರನಹಳ್ಳಿ ರಾಮಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ವಿಜಯಭಾಸ್ಕರ್ ಅವರುಗಳು ಇದೇ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿ ಆಡಳಿತ ಸುಧಾರಣೆಗೆ ತಲಾ ಒಂದೊಂದು ವರದಿ ನೀಡಿದ್ದಾರೆ. ಆ ವರದಿಗಳು ಏನಾಗಿವೆ? ಆ ವರದಿಗಳ ಸಲಹೆಗಳನ್ನ ಸ್ವೀಕಾರ ಮಾಡಿ ಎಷ್ಟು ಆಡಳಿತ ಸುಧಾರಣೆ ಮಾಡಿದ್ದೀರಾ? ಎಂಬುದನ್ನು ಜನರಿಗೆ ತಿಳಿಸಲಿ ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.












Click it and Unblock the Notifications