HD Kumaraswamy: "ಕುಮಾರಸ್ವಾಮಿ ಹೂಡಿಕೆದಾರರ ಸಮಾವೇಶಕ್ಕೆ ಆಬ್ಸೆಂಟ್: ಬಾಡೂಟಕ್ಕೆ ಹಾಜರ್!"
HD Kumaraswamy: ರಾಜ್ಯದಿಂದ ಆಯ್ಕೆಯದ ಬಿಜೆಪಿ - ಜೆಡಿಎಸ್ ಮೈತ್ರಿ ಸಂಸದರು ಹೊರ ರಾಜ್ಯಗಳಿಗೆ ಅಮೋಘ ಕೊಡುಗೆಯನ್ನು ಕೊಡುತ್ತಿದ್ದಾರೆ. ಆದರೆ, ನಮ್ಮದೇ ರಾಜ್ಯಕ್ಕೆ ಇದರ ಲಾಭ ಸಿಗುತ್ತಿಲ್ಲ ಎನ್ನುವ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಈ ರೀತಿ ಇರುವಾಗಲೇ ಕಾಂಗ್ರೆಸ್ ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಗಂಭೀರ ಆರೋಪ ಮಾಡಿದೆ. ಈಚೆಗೆ ನೆರೆಯ ಆಂಧ್ರಪ್ರದೇಶದಲ್ಲಿ ನನ್ನ ಫೋಟೋಗೆ ಹಾಲಿನ ಅಭಿಷೇಕ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದರು. ಈ ರೀತಿ ಹೇಳಿಕೆ ಕೊಟ್ಟ ಒಂದು ವಾರದ ಅವಧಿಯಲ್ಲೇ ಕಾಂಗ್ರೆಸ್ ಪಕ್ಷವು ಕುಮಾರಸ್ವಾಮಿ ಅವರ ಮೇಲೆ ಮುಗಿ ಬಿದ್ದಿದೆ.
ಸ್ವಯಂ ಪ್ರತಿಷ್ಠೆಗೆ ರಾಜ್ಯದ ಹಿತ ಮರೆತ ಯೂಟರ್ನ್ ಕುಮಾರಸ್ವಾಮಿ ಎಂದು ಟೀಕೆ ಮಾಡಿದೆ. ಅಲ್ಲದೆ ಕರ್ನಾಟಕ ಕಾಂಗ್ರೆಸ್, ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ರಾಜ್ಯದ ಹೂಡಿಕೆದಾರರ ಸಮಾವೇಶಕ್ಕೆ ಆಬ್ಸೆಂಟ್, ಬಾಡೂಟ ಕಾರ್ಯಕ್ರಮಗಳಲ್ಲಿ ಪ್ರೆಸೆಂಟ್. ರಾಜ್ಯಕ್ಕೆ ನಯಾಪೈಸೆ ಪ್ರಯೋಜನವಿಲ್ಲದ ಕೇಂದ್ರ ತುಕ್ಕು ಹಿಡಿದ ಸಚಿವ ಎಂದು ತೀಕ್ಷ್ಣವಾಗಿ ಟ್ವೀಟ್ ಮಾಡಿದೆ.

'ಪ್ರಗತಿಯ ಮರುಕಲ್ಪನೆ' ಪರಿಕಲ್ಪನೆಯಡಿ ನಡೆದ ಇನ್ವೆಸ್ಟ್ ಕರ್ನಾಟಕ - 2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ₹10 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ರಾಜ್ಯಕ್ಕೆ ಹರಿದುಬಂದಿದೆ. ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಪಕ್ಷಭೇದ ಮರೆತು ಸಾಕ್ಷಿಯಾಗಬೇಕಿದ್ದ ಸನ್ಮಾನ್ಯ ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಅವರು ಅಧಿಕೃತ ಆಹ್ವಾನವಿದ್ದರೂ ಭಾಗವಹಿಸದೆ ರಾಜ್ಯದ ಹಿತದ ಬಗ್ಗೆ ತಮಗಿರುವ ನಿರ್ಲಕ್ಷ್ಯ, ತಾತ್ಸಾರವನ್ನು ಸಾಬೀತುಪಡಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಒಂದು ದಿನದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಪೌರುಷ ಮೆರೆದಿದ್ದ. ಕೇಂದ್ರದ ಮೋದಿ ಸರ್ಕಾರ ನಿರಂತರವಾಗಿ ರಾಜ್ಯಕ್ಕೆ ಅನ್ಯಾಯ ಎಸಗುತ್ತಿದ್ದರೂ ತುಟಿಬಿಚ್ಚದ ಅವರ ಅಸಕ್ತಿ ಅಧಿಕಾರವಷ್ಟೇ, ರಾಜ್ಯದ ಹಿತವಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ ಎಂದು ಹೇಳಿದೆ.
ಇನ್ವೆಸ್ಟ್ ಕಾರ್ಯಕ್ರಮ ಕುಮಾರಸ್ವಾಮಿ ಏನಂದಿದ್ದರು ?
ಬೆಂಗಳೂರಿನಲ್ಲಿ ಈಚೆಗೆ ಬೃಹತ್ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಕೇಂದ್ರದ ಹಲವು ಸಚಿವರು ಹಾಜರಾಗಿದ್ದರು. ಆದರೆ, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಭಾಗವಹಿಸಿರಲಿಲ್ಲ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದ ಅವರು, ಸಂಸತ್ತಿನ ಅಧಿವೇಶನ ನಡೆಯುತ್ತಿರುವುದರಿಂದ ಬೆಂಗಳೂರಿನಲ್ಲಿ ಆರಂಭವಾಗಿರುವ ಕರ್ನಾಟಕ ಹೂಡಿಕೆದಾರರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ನಮ್ಮ ಸರಕಾರವು ಆತ್ಮನಿರ್ಭರ ಭಾರತ ಪರಿಕಲ್ಪನೆಯ ಮೂಲಕ ವಿಕಸಿತ ಭಾರತ 2047ರ ಗುರಿ ಮುಟ್ಟುವ ನಿಟ್ಟಿನಲ್ಲಿ ಹೂಡಿಕೆಗಳಿಗೆ ಉತ್ತೇಜನ ನೀಡುವುದಕ್ಕೆ ಬದ್ಧವಾಗಿದೆ ಎಂದಿದ್ದರು.












Click it and Unblock the Notifications