ಮುಂದಿನ ಜನ್ಮದಲ್ಲಿ ದೇವೇಗೌಡರಿಗೆ ಮುಸ್ಲಿಂ ಧರ್ಮದಲ್ಲಿ ಹುಟ್ಟುವ ಆಸೆ ಇದೆ: ಪ್ರಜ್ವಲ್ ರೇವಣ್ಣ
ಕೋಲಾರ,ಜನವರಿ 20: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಧರ್ಮದಲ್ಲಿ ಹುಟ್ಟುವ ಆಸೆಯಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಈ ಕುರಿತು ಕೋಲಾರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಸಲ್ಮಾನರಿಗೆ ನೆಮ್ಮದಿಯ ಆಡಳಿತ ನೀಡುತ್ತೇವೆ ಎಂದು ಪ್ರಜ್ವಲ್ ರೇವಣ್ಣ ಭರವಸೆ ನೀಡಿದ್ದಾರೆ.
ಇನ್ನೂ ಜೆಡಿಎಸ್ ಪಕ್ಷಕ್ಕೆ ಸಿಎಂ ಇಬ್ರಾಹಿಂ ಅಧ್ಯಕ್ಷರಾದ ಮೇಲೆ ರಾಜ್ಯದ ನಾನಾ ಭಾಗಗಳ ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಕೋಲಾರ ಜೆಡಿಎಸ್ ಭದ್ರಕೋಟೆಯಾಗಿದೆ, ಅವಿಭಜಿತ ಕೋಲಾರ ಜಿಲ್ಲೆಗೆ ಮತ್ತು ನಮ್ಮ ಕುಟುಂಬಕ್ಕೆ ನೆಂಟಸ್ತನವಿದೆ. ಒಂದು ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಕೂಡ ಇಲ್ಲಿಂದಲೇ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ್ದಾರೆ.

ಇನ್ನು ಸಿದ್ದರಾಮಯ್ಯ ಸ್ಪರ್ಧ ಖಚಿತವಾಗುತ್ತಿದ್ದಂತೆ ಹೈವೋಲ್ಟೇಜ್ ಕ್ಷೇತ್ರವಾಗಿರುವ ಕೋಲಾರದಲ್ಲಿ, ಜೆಡಿಎಸ್ ಪಕ್ಷಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ. ಜೊತೆಗೆ ಸಿದ್ದರಾಮಯ್ಯ ಕೂಡಾ ಇದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಒಂದೇ ಕಲ್ಲಿಗೆ ಎರಡು ಹಕ್ಕಿ ಎನ್ನುವ ಅವಕಾಶ ಸಿಕ್ಕಿದೆ, ಅದಕ್ಕಾಗಿ ಕೋಲಾರದತ್ತ ಈವರೆಗೂ ಮುಖ ಮಾಡದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೂಡಾ ಕೋಲಾರದಲ್ಲಿ ನಡೆದ ಅಲ್ಪಸಂಖ್ಯಾತರ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತಂದು ಹರಕೆಯ ಕುರಿ ಮಾಡುತ್ತಿದ್ದಾರೆ ಎಂದರು, ವೇದಿಕೆಯಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ ಮುಸ್ಲಿಂ ಸಮುದಾಯ ಎಂದೆಂದಗೂ ಕೂಡಾ ನಮ್ಮ ಪಕ್ಷದ ಜೊತೆಗಿದ್ದಾರೆ ಅಷ್ಟೇ ಅಲ್ಲದೆ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ ಅವರು ಹೇಳಿದ್ದ ನಾನು ಮುಂದಿನ ಜನ್ಮದಲ್ಲಿ ಹುಟ್ಟಿದ್ರೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂಬ ಮಾತನ್ನು ಮತ್ತೆ ಪ್ರಸ್ತಾಪಿಸು ಮೂಲಕ ಮುಸ್ಲಿಂ ಜನರನ್ನು ಗಮನಸೆಳೆಯುವ ಪ್ರಯತ್ನ ಮಾಡಿದರು. ಜೊತೆಗೆ ಮುಂದಿನ ದಿನಗಳಲ್ಲಿ ಇಲ್ಲಿ ನಡೆಯುವ ಸಾಮೂಹಿಕ ವಿವಾಹಗಳಿಗೆ ತಾನು ಜೆಡಿಎಸ್ ಅಭ್ಯರ್ಥಿ ಸಿ ಎಂ ಆರ್ ಶ್ರೀನಾಥ್ ಅವರ ಜೊತೆಗೂಡಿ ಬೇಕಾದ ಹಣಕಾಸಿನ ನೆರವನ್ನು ನೀಡುವ ಭರವಸೆ ನೀಡಿದ್ದಾರೆ.

ಅಲ್ಲದೇ ಕೋಲಾರ ಜಿಲ್ಲೆಗೂ ನಮ್ಮ ಕುಟುಂಬದವರಿಗೂ ಅವಿನಾಭಾವ ಸಂಬಂಧವಿದೆ. ಇದು ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಬೆಸುಗೆಯಾಗಿದೆ. ಮುಸ್ಲಿಂ ಸಮುದಾಯ ಕೂಡ ಎಂದೆಂದಿಗೂ ನಮ್ಮ ಪಕ್ಷದ ಜೊತೆಗಿದೆ. ಮುಂದೆಯೂ ನಾವು ಮುಸಲ್ಮಾನರ ಜೊತೆಗೆ ಇರುತ್ತೇವೆ. ಅದೇ ಭರವಸೆ ಮೇಲೆ ಸಿಎಂ ಇಬ್ರಾಹಿಂ ಅವರು ನಮ್ಮೊಂದಿಗೆ ಬಂದಿದ್ದಾರೆ ಎಂದು ಪ್ರಜ್ವಲ್ ಹೇಳಿದ್ದಾರೆ












Click it and Unblock the Notifications