ಜೆಡಿಎಸ್ ಕಾಂಗ್ರೆಸ್‌ನ ಬಿ ಟೀಮ್ ಎಂದ ಅಮಿತ್ ಶಾ: 'ಹಣಬಲ vs ಜನಬಲ'ದ ವಾರ್ನಿಂಗ್ ನೀಡಿದ ದೇವೇಗೌಡರು- ಏನದು ತಿಳಿಯಿರಿ
ಬೆಂಗಳೂರು, ಏಪ್ರಿಲ್ 25: ಪ್ರಾದೇಶಿಕ ಪಕ್ಷ ಜೆಡಿಎಸ್ ಕಾಂಗ್ರೆಸ್‌ನ ಬಿ ಟೀಮ್ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಆಕ್ರೋಶಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಹೊಸದೊಂದು ನಿರೂಪಣೆಯನ್ನು ಹುಟ್ಟುಹಾಕಿದೆ.
ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ರೋಡ್‌ಶೋನಲ್ಲಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಜೆಡಿಎಸ್‌ಗೆ ಮತ ಹಾಕುವುದು ಕಾಂಗ್ರೆಸ್‌ಗೆ ಮತ ಹಾಕಿದಂತೆ. ಜೆಡಿಎಸ್ ಕುಟುಂಬ ರಾಜಕಾರಣದಲ್ಲಿ ತೊಡಗಿದೆ ಎಂದು ಶಾ ಹೇಳಿದ್ದಾರೆ. ಮಂಗಳವಾರವೂ ಅದೇ ಹೇಳಿಕೆಯನ್ನು ಪುನರುಚ್ಚರಿಸಿದ ಅಮಿತ್ ಶಾ, ಜೆಡಿಎಸ್‌ಗೆ ಮತ ಹಾಕಬೇಡಿ ಎಂದು ಜನರನ್ನು ಕೇಳಿಕೊಂಡಿದ್ದಾರೆ.

ಈ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ದೇವೇಗೌಡರು, ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಜೆಡಿಎಸ್ ಕುರಿತು ಹಗುರವಾಗಿ ಮಾತನಾಡುವವರ ಬಗ್ಗೆ ನಾನು ಚಿಂತಿಸುವುದಿಲ್ಲ. ಕುಮಾರಸ್ವಾಮಿ ಮತ್ತು ನಾನು ಪಕ್ಷದ ಪರ ರಾಜ್ಯದಾದ್ಯಂತ ಪ್ರಚಾರ ಮಾಡುತ್ತೇವೆ. ಪ್ರತಿದಿನ 3 ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇವೆ. ನಮ್ಮಲ್ಲಿ ಹಣಬಲವಿಲ್ಲ ಆದರೆ ಜನಬಲವಿದೆ. ಜನರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ದೇವೇಗೌಡರು ಬೆಂಗಳೂರಿನಲ್ಲಿ ಹೇಳಿದರು.
ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ 207 ಸ್ಥಾನಗಳಲ್ಲಿ ಸ್ವಂತವಾಗಿ ಸ್ಪರ್ಧಿಸುತ್ತಿದೆ. ಪಕ್ಷವು 3 ಸಿಪಿಐ(ಎಂ), 3 ಆರ್‌ಪಿಐ ಮತ್ತು ಒಬ್ಬ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ.

2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದರೊಂದಿಗೆ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರವಾಗಿ ಸರ್ಕಾರ ರಚಿಸಿತ್ತು. ಎರಡೂ ಪಕ್ಷಗಳ ಹಲವಾರು ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡ ನಂತರ 2019 ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಯಿತು.
ಕರ್ನಾಟಕದಲ್ಲಿ ಮೇ 10 ರಂದು ಚುನಾವಣೆ ನಿಗದಿಯಾಗಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.
ಆಸ್ಪತ್ರೆಗೆ ದಾಖಲಾಗಿರುವ ತಮ್ಮ ಪುತ್ರ ಎಚ್‌ಡಿ ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಎಚ್‌ಡಿ ದೇವೇಗೌಡರು ಜೆಡಿಎಸ್ ಪರ ಪ್ರಚಾರ ನಡೆಸುತ್ತಿದ್ದಾರೆ. ವೈದ್ಯರ ಸಲಹೆಗೆ ವಿರುದ್ಧವಾಗಿ ಕರ್ನಾಟಕದಲ್ಲಿ 89 ವರ್ಷ ವಯಸ್ಸಿನಲ್ಲೂ ಪೂರ್ಣ ಪ್ರಮಾಣದ ಚುನಾವಣಾ ಪ್ರಚಾರವನ್ನು ಕೈಗೊಂಡಿದ್ದಾರೆ.
ತೀವ್ರ ಪ್ರಚಾರದ ನಂತರ ಕುಮಾರಸ್ವಾಮಿ ಅವರು ನಿಶ್ಯಕ್ತಿ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಮಿಂಚಿನ ಪ್ರಚಾರದ ವಿರುದ್ಧ ಅವರು ಏಕಾಂಗಿಯಾಗಿ ಸವಾಲನ್ನು ಸ್ವೀಕರಿಸಿದ್ದಾರೆ. ಆಸ್ಪತ್ರೆಯಿಂದಲೇ ಪಕ್ಷಕ್ಕೆ ರಣತಂತ್ರ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಿರ್ಣಾಯಕ ಘಟ್ಟದಲ್ಲಿ ಪುತ್ರನ ಅನುಪಸ್ಥಿತಿಯನ್ನು ಸರಿದೂಗಿಸಲು, ಚುನಾವಣಾ ಪ್ರಚಾರ ಕೈಗೊಳ್ಳಲು ದೈಹಿಕವಾಗಿ ಸದೃಢರಾಗಿಲ್ಲದ ದೇವೇಗೌಡರು ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಬೆಂಗಳೂರಿನ ಕುಂಬಳಗೋಡಿನಿಂದ ಮೈಸೂರಿಗೆ ರೋಡ್‌ಶೋನಲ್ಲಿ ಭಾಗವಹಿಸದಂತೆ ದೇವೇಗೌಡರಿಗೆ ವೈದ್ಯರು ಸಲಹೆ ನೀಡಿದ್ದಾರೆ. ಆದರೆ, ಗೌಡರು ಈಗ ಹಾಸನ, ಮಂಡ್ಯ, ತುಮಕೂರು, ಮೈಸೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳು ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಸಂಚರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications