ಎಲ್ಲ ಭಾಗ್ಯಗಳನ್ನು ಮುಂದುವರೆಸಲು ಷರತ್ತು ಹಾಕಿದ್ದ ಸಿದ್ದರಾಮಯ್ಯ!
ಬೆಂಗಳೂರು, ಅ. 08: ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಬೆಂಗಳೂರಿನಲ್ಲಿ ಮಹತ್ವದ ಮಾಧ್ಯಮಗೋಷ್ಠಿ ಮಾಡಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಕುರಿತು ಮಾಧ್ಯಮಗೋಷ್ಠಿಯಲ್ಲಿ ಹಲವು ರಹಸ್ಯ ಸಂಗತಿಗಳನ್ನು ದೇವೇಗೌಡರು ಬಹಿರಂಗ ಪಡಿಸಿದ್ದಾರೆ. ಜೊತೆಗೆ ಮುಂದಿನ ಚುನಾವಣೆಗೆ ಜೆಡಿಎಸ್ ಹೇಗೆ ಸಿದ್ಧತೆ ಮಾಡಿಕೊಂಡಿದೆ ಎಂಬುದನ್ನೂ ವಿವರಿಸಿದ್ದಾರೆ.
ಅದಕ್ಕಿಂತ ಪ್ರಮುಖವಾಗಿ ಆರ್‌ಎಸ್‌ಎಸ್ ಕುರಿತು ತಮ್ಮ ಮಾತನ್ನು ಮತ್ತೆ ಪುನರ್ ಉಚ್ಛರಿಸಿದ್ದಾರೆ. ಜೊತೆಗೆ ಆ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಇನ್ನು ಉಪ ಚುನಾವಣೆಯ ಬಗ್ಗೆ ಮಾತನಾಡಿರುವ ಮಾಜಿ ಪ್ರಧಾನಿಗಳು, ನಮ್ಮ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷದವರು ಹೊತ್ತುಕೊಂಡು ಹೋದರೆ ನಾವು ಸುಮ್ಮನಿರಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.
ಜೊತೆಗೆ "ನನ್ನನ್ನು ಕೆಣಕಲು ಹೋಗಬೇಡಿ, ಕೆಣಕಿದರೆ ಸರಿ ಇರಲ್ಲ' ಎಂದು ಮಾಜಿ ಪ್ರಧಾನಿ ದೇವೆಗೌಡ ಅವರು ಗುಡುಗಿದ್ದಾರೆ. ಅಷ್ಟಕ್ಕೂ ಮಾಜಿ ಪ್ರಧಾನಿಗಳು ಗರಂ ಆಗಲು ಕಾರಣವೇನು? ಮುಂದಿದೆ ಮಾಹಿತಿ.
ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ನೆಮ್ಮದಿಯಿಂದ ಕೆಲಸ ಮಾಡಲು ಕುಮಾರಸ್ವಾಮಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಡಲಿಲ್ಲ ಎಂದು ಪರೋಕ್ಷವಾಗಿ ದೇವೇಗೌಡರು ಆಕ್ರೋಶ ಹೊರಹಾಕಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 25 ಸಾವಿರ ರೂ.ವರೆಗೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಆಗ ನಂಗೆ ಈ ಮನುಷ್ಯ ಹೇಗೆ ಸಾಲಮನ್ನಾ ಮಾಡುತ್ತಾನೆ? ಎಂದು ಅನ್ನಿಸಿತ್ತು. ಆದರೆ ವಿಧಿಯಾಟ ಬೇರೆ ಇತ್ತು. ಬಿಜೆಪಿ 106, ಕಾಂಗ್ರೆಸ್ 78 ಹಾಗೂ ನಮ್ಮ ಪಕ್ಷ ಜೆಡಿಎಸ್‌ಗೆ 37 ಸ್ಥಾನಗಳು ಸಿಕ್ಕಿತು. ನಿಚ್ಚಳ ಬಹುಮತ ಕಳೆದ ಬಾರಿ ಯಾರಿಗೂ ಬರಲಿಲ್ಲ. ಆಗ ನಾನು ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೆ ಎಂದು ದೇವೇಗೌಡರು ಹೇಳಿದ್ದಾರೆ.

ಸಿದ್ದರಾಮಯ್ಯ ಹಾಕಿದ್ದ 'ಭಾಗ್ಯಗಳ ಷರತ್ತು'!
ಕಾಂಗ್ರೆಸ್‌ಗೆ ಹೆಚ್ಚು ಸೀಟುಗಳು ಬಂದಿವೆ, ಹೀಗಾಗಿ ನಾವು ಮುಖ್ಯಮಂತ್ರಿ ಸ್ಥಾನ ಪಡೆದರೆ ಅದು ಅಭಾಸ ಆಗುತ್ತದೆ. ಅದಕ್ಕಾಗಿ ಖರ್ಗೆ ಅವರನ್ನೇ ಸಿಎಂ ಮಾಡಿ ಎಂದಿದ್ದೆ. ಖರ್ಗೆಯವರು ಕೂಡ ಅದಕ್ಕೆ ಒಪ್ಪಿದ್ದರು. ಸೋನಿಯಾ ಗಾಂಧಿಗೆ ಅವರನ್ನು ಒಪ್ಪಿಸುತ್ತೇನೆ ಎಂದು ಗುಲಾಂ ನಬಿ ಆಜಾದ್ ಕೂಡ ಹೇಳಿದ್ದರು. ಆದರೆ ಮತ್ತೆ ಅವರೇ ಬಂದು, ಕುಮಾರಸ್ವಾಮಿ ಸಿಎಂ ಆಗಬೇಕೆಂದು ನಮ್ಮನ್ನು ಒಪ್ಪಿಸಿದರು. ನೂರಾರು ಸೀಟು ಇಟ್ಟುಕೊಂಡಿದ್ದ ಯಡಿಯೂರಪ್ಪ ವಿಪಕ್ಷ ನಾಯಕ ಆದರು, ಸಾಲಮನ್ನಾ ಮಾಡುತ್ತಿರಾ? ಇಲ್ಲವಾ? ಎಂದು ಏಕ ವಚನದಲ್ಲೇ ಮಾತನಾಡಿದ್ದರು. ಯಡಿಯೂರಪ್ಪ ಅವರು ಏಕವಚನದಲ್ಲಿ ಮಾತನಾಡಿದ್ದನ್ನು ಟಿವಿಯಲ್ಲಿ ನಾನು ನೋಡಿದ್ದೆ. ಬಜೆಟ್ ವಿಷಯದಲ್ಲಿ ಕೂಡ ಆಗ ಸಿದ್ದರಾಮಯ್ಯ ಷರತ್ತು ಹಾಕಿದ್ದರು. ಸಿದ್ದರಾಮಯ್ಯ ಅವರ ಎಲ್ಲ ಭಾಗ್ಯಗಳನ್ನು ಮುಂದುವರಿಸಲು ಷರತ್ತು ಹಾಕಿದ್ದರು.

ಕೊಟ್ಟಿದ್ದ ಮಾತು ಉಳಿಸಿಕೊಂಡು ಕುಮಾರಸ್ವಾಮಿ!
ಕುಮಾರಸ್ವಾಮಿ ಆರ್ಥಿಕ ತಜ್ಞ ಏನಲ್ಲ. ಸಿದ್ದರಾಮಯ್ಯ ಹಾಗೆ ಸಾಕಷ್ಟು ಬಾರಿ ಬಜೆಟ್ ಮಂಡಿಸಿಲ್ಲ. ಆದರೆ ಸಂಪನ್ಮೂಲ ಕ್ರೋಢೀಕರಿಸಿ ಸಾಲಮನ್ನಾ ಯೋಜನೆ ಜಾರಿಗೆ ತಂದರು. ಜೊತೆಗೆ ಹಿಂದಿನ ಸರ್ಕಾರದ ಎಲ್ಲ ಯೋಜನೆಗಳಿಗೆ ಹಣ ಹೊಂದಿಸಿದರು. ಕೊಟ್ಟ ಮಾತನ್ನು ಕುಮಾರಸ್ವಾಮಿ ಉಳಿಸಿಕೊಳ್ಳುತ್ತಾರೆ ಎಂಬುದನ್ನು ಸಾಬೀತು ಪಡಿಸಿದರು. ಸಿದ್ದರಾಮಯ್ಯ ಅವರ ಎಲ್ಲಾ ಷರತ್ತಿನ ಜೊತೆಗೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದರು ಎಂದು ದೇವೇಗೌಡರು ಮೈತ್ರಿ ಸರ್ಕಾರದ ಅಸ್ತಿತ್ವ ಹಾಗೂ ಪತನವನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ಉಪ ಚುನಾವಣೆ ಕುರಿತು ಖಡಕ್ ಮಾತುಗಳನ್ನು ಆಡಿದ್ದಾರೆ. ಅದು ಕಾಂಗ್ರೆಸ್ ನಾಯಕರಿಗೆ ಆತಂಕ ತಂದಿದೆ ಎಂದರೂ ತಪ್ಪಾಗಲಿಕ್ಕಿಲ್ಲ!

ಸಿಂದಗಿಯಲ್ಲಿ ಅಭ್ಯರ್ಥಿಯನ್ನು ಹಾಕದೆ ನಾನು ಸುಮ್ಮನಿರಬೇಕಾ?
ಉಪ ಚುನಾವಣೆಯಲ್ಲಿ ಹಾನಗಲ್ ಹಾಗೂ ಸಿಂದಗಿಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಹಾಕಿದ್ದೇವೆ. ಹಿಂದೆ ಬಸವಕಲ್ಯಾಣದಲ್ಲೂ ಮುಸ್ಲಿಂ ಅಭ್ಯರ್ಥಿಯನ್ನು ಹಾಕಿದ್ದೆ. ನಾರಾಯಣರಾವ್ ಕೂಡ ನನ್ನ ಶಿಷ್ಯ. ನಾನು ಜಾತಿ ನೋಡಿ ಬೆಳೆಸಲಿಲ್ಲ. ಯಾರನ್ನೆಲ್ಲ ಬೆಳೆಸಿದ್ದೇನೆ ಎಂದು ಹೇಳಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ನಡೆಸಿದರು. ಸಿಂದಗಿಯಲ್ಲಿ 50 ಸಾವಿರ ಮುಸ್ಲಿಂ ಮತಗಳಿವೆ, ಹೀಗಾಗಿ ಮುಸ್ಲಿಂ ಅಭ್ಯರ್ಥಿಯನ್ನು ಹಾಕಿದ್ದೇವೆ. ಮನಗೂಳಿ ಮನೆ ಮಗನಂತಿದ್ದರು. ಆದರೆ ಮನಗೂಳಿ ಕಾಲವಾದ ನಂತರ ಅವರ ಮಗನನ್ನು ಕಾಂಗ್ರೆಸ್‌ನವರು ಕರೆದುಕೊಂಡು ಹೋದರು. ನಿಮಗೆ ನಮ್ಮ ಅಭ್ಯರ್ಥಿಯೇ ಬೇಕಾ? ನಮ್ಮ ಅಭ್ಯರ್ಥಿಯನ್ನು ಹೊತ್ತುಕೊಂಡು ಹೋದರೆ ನಾವು ಸುಮ್ಮನಿರಬೇಕಾ? ಹೀಗಾಗಿ ನಾವು ನಮ್ಮ ಅಭ್ಯರ್ಥಿ ಹಾಕಿದ್ದೇವೆ ಬಿಜೆಪಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿಯನ್ನು ಹಾಕಿಲ್ಲ. ಮುಸ್ಲಿಂರನ್ನು ನೀವು ಗುತ್ತಿಗೆ ಪಡೆದಿಲ್ಲ. ನಾನು ಬೆಳಸಿದ್ದ ಮುಸ್ಲಿಂ ಮುಖಂಡ ಈಗ ಅವರ ಬಲಗೈ ಶಕ್ತಿ ಕೊಟ್ಟವರು ಎಂದು ಹೆಸರು ಪ್ರಸ್ತಾಪಿಸದೇ ಶಾಸಕ ಜಮೀರ್ ಅಹ್ಮದ್ ಅವರ ಹೆಸರನ್ನು ದೇವೇಗೌಡರು ಪ್ರಸ್ತಾಪಿಸಿದ್ದಾರೆ.

ಆರ್‌ಎಸ್‌ಎಸ್ ಹೊಗಳಿದ್ದೇನೆ ಎಂಬುದು ಅಪ್ಪಟ ಸುಳ್ಳು!
ಇನ್ನು ಆರ್‌ಎಸ್‌ಎಸ್ ವಿಚಾರವಾಗಿ ಸ್ಪಷ್ಟನೆ ಕೊಟ್ಟಿರುವ ಮಾಜಿ ಪ್ರಧಾನಿ ದೇವೇಗೌಡರು, "ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ನಾನು ಆರ್‌ಎಸ್‌ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಅಪ್ಪಟ ಸುಳ್ಳು. ಆಡ್ವಾಣಿ ಬಂದಾಗ ನಾವು ಸಮಾಲೋಚನೆ ಮಾಡಿದ್ದೆವು. ಎಮರ್ಜೆನ್ಸಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಮಾತನಾಡಿದ್ದೆವು. ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಒಂದು ಕಾರ್ಯಕ್ರಮ ನಡೆದಿತ್ತು. ನಾನೇ ಬಾಂಕ್ವೆಟ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಕೊಟ್ಟಿದ್ದೆ. ನನ್ನ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ನಡೆದಿತ್ತು. ನಾನು ಆ ಸಭೆಯಲ್ಲಿ ಮಾತನಾಡಿದ್ದೆ ಅಷ್ಟೇ. ಆ ಸಭೆಯನ್ನು ದುರುಪಯೋಗ ಮಾಡುವುದು ಸರಿಯಲ್ಲ.
ನನಗೂ ಆರ್ಎಸ್ಎಸ್‌ಗೂ ಏನು ಸಂಬಂಧ ಇದೆ? ಆರ್ಎಸ್ಎಸ್ ಬಗ್ಗೆ ನನಗೆ ಗಂಧ ಗಾಳಿ ಗೊತ್ತಿಲ್ಲ. ಸುಮ್ಮನೆ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ದೇವೇಗೌಡರು ಸ್ಪಷ್ಟನೆ ಕೊಟ್ಟಿದ್ದಾರೆ.
ಜೊತೆಗೆ ಕಾಂಗ್ರೆಸ್ ಸ್ಥಿತಿ ಎಲ್ಲಿಂದ ಎಲ್ಲಿಗೆ ಬರುತ್ತಿದೆ ಎಂಬುದು ಗೊತ್ತಿದೆ. ನೆಹರು ಅವರ ನಂತರ ಕಾಲದಿಂದ ಕಾಲಕ್ಕೆ ಯಾವ ಯಾವ ರಾಜ್ಯದಲ್ಲಿ ಎಲ್ಲಿಗೆ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ. ನನ್ನನ್ನು ಕೆಣಕಲು ಹೋಗಬೇಡಿ ಕೆಣಕಿದರೆ ಸರಿ ಇರಲ್ಲ ಎಂದು ಮಾಜಿ ಪ್ರಧಾನಿ ದೇವೆಗೌಡ ಎಚ್ಚರಿಸಿದ್ದಾರೆ.












Click it and Unblock the Notifications