ಗಾಲ್ಫ್ ಕ್ಲಬ್ ಸಾರ್ವಜನಿಕ ಪ್ರಾಧಿಕಾರ: ಕರ್ನಾಟಕ ಹೈಕೋರ್ಟ್
ಬೆಂಗಳೂರು, ಮೇ 5; ಬೆಂಗಳೂರಿನಲ್ಲಿರುವ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ (ಕೆಜಿಎ) ಕ್ಲಬ್ ಸಾರ್ವಜನಿಕ ಪ್ರಾಧಿಕಾರವೆಂದು ಕರ್ನಾಟಕ ಮಾಹಿತಿ ಆಯೋಗ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ-2005ರ ಅಡಿ ಸಾರ್ವಜನಿಕ ಪ್ರಾಧಿಕಾರವೆಂದು ಘೋಷಿಸಿದ್ದ ಆಯೋಗದ ಆದೇಶ ಪ್ರಶ್ನಿಸಿ ಕೆಜಿಎ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎನ್. ಎಸ್. ಸಂಜಯ ಗೌಡ ಅವರಿದ್ದ ಏಕಸದಸ್ಯಪೀಠ ಈ ಆದೇಶ ಹೊರಡಿಸಿದೆ.
ಸರ್ಕಾರದ ಭೂಮಿ ರಿಯಾಯಿತಿ ದರದಲ್ಲಿ ಪಡೆದಿರುವುದಲ್ಲದೇ, ಸರ್ಕಾರದ ಅನೇಕ ಸವಲತ್ತುಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ಕ್ಲಬ್ ಸಾರ್ವಜನಿಕ ಪ್ರಾಧಿಕಾರವಾಗಲಿದೆ. ಹಾಗಾಗಿ ಅದು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿಯನ್ನು ನೀಡಲೇಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್, ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಮತ್ತು ಲೇಡಿಸ್ ಕ್ಲಬ್‌ಗಳು ಸಹ ಸರ್ಕಾರಿ ಭೂಮಿಯನ್ನು ರಿಯಾಯಿತಿ ದರದಲ್ಲಿ ಗುತ್ತಿಗೆ ಪಡೆದಿವೆ. ಇದರಿಂದ ಈ ನಾಲ್ಕು ಸಂಸ್ಥೆಗಳು ಸಾರ್ವಜನಿಕ ಪ್ರಾಧಿಕಾರಗಳಾಗಿದ್ದು, ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡಲಿದೆ ಎಂದು 2021ರ ಜ.13ರಂದು ಆದೇಶಿಸಲಾಗಿತ್ತು. ಈ ಪ್ರಕರಣದಲ್ಲಿರುವ ಅರ್ಜಿದಾರ ಸಂಘ ಸಹ, ತನ್ನನ್ನು ಆರ್‌ಟಿಐ ಕಾಯ್ದೆ ವ್ಯಾಪ್ತಿಗೆ ಸೇರಿಸಿ ಮಾಹಿತಿ ಆಯೋಗವು 2014ರ ಅ.14ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿದೆ ಎಂದು ಆದೇಶದಲ್ಲಿ ಪೀಠ ಹೇಳಿದೆ.
ಅಲ್ಲದೇ, ಮೈಸೂರು ಟಫ್ ಕ್ಲಬ್ ಹಾಗೂ ಇತರೆ ಕ್ಲಬ್‌ಗಳ ಪ್ರಕರಣದಲ್ಲಿ ಹೇಳಿರುವಂತೆ ಕೆಜಿಎ ಸಹ 124 ಎಕರೆ ಸರ್ಕಾರಿ ಜಮೀನನ್ನು 2010 ರಿಂದ 30 ವರ್ಷ ಕಾಲ ಗುತ್ತಿಗೆ ಪಡೆದಿದೆ. ಹಾಗೆಯೇ, ತನ್ನ ವಾರ್ಷಿಕ ನಿವ್ವಳ ಆದಾಯದಲ್ಲಿ ಅತ್ಯಂತ ಕಡಿಮೆ ಪ್ರಮಾಣ ಅಂದರೆ ಕೇವಲ ಶೇ.2 ಪ್ರಮಾಣವನ್ನು (ಸಬ್ಸಿಡಿ ದರ) ಬಾಡಿಗೆ ಪಾವತಿಸುತ್ತಿದೆ.

ಸರ್ಕಾರಿ ಜಮೀನು ಗುತ್ತಿಗೆ ಪಡೆದ ಮತ್ತು ಸಬ್ಸಿಡಿ ದರದಲ್ಲಿ ಬಾಡಿಗೆ ಪಾವತಿ ಮಾಡುತ್ತಿರುವ ಕಾರಣ ಕೆಜಿಎ ಸಾರ್ವಜನಿಕ ಪ್ರಾಧಿಕಾರವಾಗಲಿದೆ. ಆದ್ದರಿಂದ ಕೆಜಿಎ ಸಹ ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ಬರಲಿದ್ದು, ಈ ಕುರಿತು ಕರ್ನಾಟಕ ಮಾಹಿತಿ ಆಯೋಗದ ಆದೇಶ ಸೂಕ್ತವಾಗಿದೆ ಎಂದು ಆದೇಶದಲ್ಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣವೇನು?; ವಕೀಲ ಎಸ್. ಉಮಾಪತಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೆಲವೊಂದು ಮಾಹಿತಿ ಕೋರಿ ಕೆಜಿಎಗೆ 2012ರ ಆ.30ರಂದು ಅರ್ಜಿ ಸಲ್ಲಿಸಿದ್ದರು. ಆದರೆ, ತಾನು ಮಾಹಿತಿ ಹಕ್ಕು ಕಾಯ್ದೆಗೆ ಒಳಪಡುವುದಿಲ್ಲ ಎಂದಿದ್ದ ಕೆಜಿಎ, ಮಾಹಿತಿ ನೀಡಲು ನಿರಾಕರಿಸಿತ್ತು. ಇದರಿಂದ ಉಮಾಪತಿ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಆಯೋಗ, ಕೆಜಿಎ ಸಾರ್ವಜನಿಕ ಪ್ರಾಧಿಕಾರವೆಂದು ಘೋಷಿಸಿ 2014ರ ಅ.14ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಕೆಜಿಎ, ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.












Click it and Unblock the Notifications