ಏಕಲವ್ಯ ಪ್ರಶಸ್ತಿ ಮಾರ್ಗಸೂಚಿಗಳನ್ನು ಎತ್ತಿ ಹಿಡಿದ ಹೈಕೋರ್ಟ್
ಬೆಂಗಳೂರು, ಜೂನ್ 26: ಏಕಲವ್ಯ ಪ್ರಶಸ್ತಿಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಮಾರ್ಗ ಸೂಚಿಗಳನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಅಲ್ಲದೆ, ಈ ಸಂಬಂಧ ಮಾರ್ಗಸೂಚಿಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ಸರ್ಕಾರದ ನೀತಿಗಳು ಸಂವಿಧಾನ ಬಾಹಿರ ಹಾಗೂ ದೋಷ ಪೂರಿತವಾಗಿದ್ದಲ್ಲಿ ಮಾತ್ರ ನ್ಯಾಯಾಲಯಗಳು ಪರಿಶೀಲನೆಗೊಳಪಡಿಸಲಿವೆ. ನ್ಯಾಯಾಲಯಗಳು ಕ್ರೀಡೆಗಳಲ್ಲಿ ತೀರ್ಪುಗಾರರಂತಿರಬೇಕೆ ವಿನಾ: ರೆಫರಿಗಳಂತದಲ್ಲ ಎಂದು ತಿಳಿಸಿದೆ. ರೋಲರ್ ಸ್ಕೇಟಿಂಗ್ ಅಥ್ಲೇಟ್ ಆಗಿರುವ ವಿ. ವರ್ಷಿತ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಮಧ್ಯಪ್ರವೇಶಕ್ಕೆ ನಕಾರ: ಅಲ್ಲದೆ, ಸರ್ಕಾರದ ನೀತಿಗಳು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿನ ಸಮಾನತೆ ಉಲ್ಲಂಘನೆ, ಅಸಮಂಜಸ ಹಾಗೂ ದೋಷದಿಂದ ಕೂಡಿದ್ದರೆ ಹೊರತು ಇತರೆ ಸಂದರ್ಭಗಳಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಲೇಕರ್ ಏರ್ವೇಸ್ ವಿರುದ್ಧದ ಡಿಪಾರ್ಟ್‌ಮೆಂಟ್ ಆಪ್ ಟ್ರೇಡ್ಸ್ ಪ್ರಕರಣದಲ್ಲಿ ಲಾರ್ಡ್ ಜಸ್ಟೀಸ್ ಡೆನ್ನಿಂಗ್ ಮತ್ತು ಲಾರ್ಡ್ ಜಸ್ಟೀಸ್ ಲಾಟನ್ ಅವರ ಅಭಿಪ್ರಾಯವನ್ನು ಉಲ್ಲೇಖಿಸಿರುವ ನ್ಯಾಯಪೀಠ, ಕ್ರೀಡೆಗಳಲ್ಲಿ ನ್ಯಾಯಾಧೀಶರ ತೀರ್ಪಿಗಾರರಂತಿದ್ದು, ಚೆಂಡು ಆಟದಿಂದ ಹೊರಬಂದಾಗ ಮಾತ್ರ ಶಿಳ್ಳೆ ಊದಬಹುದಾಗಿದೆ (ತಮ್ಮ ಅಧಿಕಾರ ಬಳಕೆ) ಆದರೆ, ಆಟ ಪುನರಾರಂಭವಾದಾಗ ಹೇಗೆ ಆಡಬೇಕು ಎಂಬುದರ ಬಗ್ಗೆ ಆಟಗಾರರಿಗೆ ತಿಳಿಸಲು ಮುಂದಾಗಬಾರದು ಎಂದು ತಿಳಿಸಿದೆ.
ಪ್ರಸ್ತುತ ಪ್ರಕರಣದಲ್ಲಿ ಪ್ರಶಸ್ತಿ ಪ್ರದಾನ ಪ್ರಕ್ರಿಯೆಯಲ್ಲಿ ಚೆಂಡು ಆಟದಿಂದ ಹೊರ ಬಂದಿಲ್ಲ. ಹೀಗಾಗಿ ನ್ಯಾಯಾಲಯ ರೆಫರಿಯಂತೆ ಮಧ್ಯಪ್ರವೇಶಿಸಿ ಪ್ರಶಸ್ತಿಗಳನ್ನು ಹೇಗೆ ನೀಡಬೇಕು ಎಂಬುದನ್ನು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗದು ಎಂದು ತಿಳಿಸಿದೆ.
ಸರ್ಕಾರ ಹಾಗೂ ಶಾಸನಬದ್ಧ ಪ್ರಾಧಿಕಾರಗಳು ಎಚ್ಚರಿಕೆಯಿಂದ ರಚಿಸುವ ನೀತಿಗಳ ಕುರಿತಂತೆ ನ್ಯಾಯಾಲಯಗಳು ಸದಾಸಂಯಮ ಪ್ರದರ್ಶನ ಮಾಡಬೇಕಾಗಿದೆ. ಸರ್ಕಾರದ ನೀತಿಗಳು ಒಂದು ವಿಷಯದ ಕುರಿತ ವ್ಯವಹರಿಸುವ ವ್ಯವಸ್ಥೆಯಾಗಿದೆ ಎಂಬುದನ್ನು ಮರೆಯುವಂತಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ : ಅರ್ಜಿದಾರರು ರೋಲರ್ ಸ್ಕೇಟಿಂಗ್ ಪಟುವಾಗಿದ್ದು, ರಾಷ್ಟ್ರೀಯ ಜೂನಿಯರ್ ಮತ್ತು ಸೀನಿಯರ್ ಹಾಗೂ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿದ್ದರು. ಅಲ್ಲದೆ, ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಗಕಗಳನ್ನು ಪಡೆದುಕೊಂಡಿದ್ದರು.
ಏಕಲವ್ಯವ ಪ್ರಶಸ್ತಿ ಪ್ರಧಾನಕ್ಕಾಗಿ ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಕಾಲ ಕಾಲಕ್ಕೆ ಮಾರ್ಗಸೂಚಿಗಳನ್ನು ನಿಗದಿ ಪಡಿಸುತ್ತದೆ. ಅದರಂತೆ 2015ರ ಆಗಸ್ಟ್ 24ರಂದು ಏಕಲವ್ಯ ಪ್ರಶ್ತಿಗೆ ಅರ್ಹತೆ ಪಡೆಯಲು ಹಿರಿಯರ ರಾಷ್ಟ್ರ ಮಟ್ಟದ ಚಾಂಪಿಯನ್‌ಶಿಪ್ ಮತ್ತು ಕಿರಿಯರ ರಾಷ್ಟ್ರ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವವರಿಗೆ ಅಂಕಗಳನ್ನು ನಿಗದಿಪಡಿಸಿ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಈ ಮಾರ್ಗಸೂಚಿಗಳನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications