ಕಟ್ಟಡ ಕಾರ್ಮಿಕ ಮಂಡಳಿ ಅಧಿಕಾರಿಗಳಿಗೆ ಹೈಕೋರ್ಟ್ ತರಾಟೆ
ಬೆಂಗಳೂರು, ಜೂನ್ 27: ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಲ್ಲಿ ಸಂಗ್ರಹವಾಗುವ ಸೆಸ್ ಹಣ ಕಾರ್ಮಿಕರ ಕಲ್ಯಾಣ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಬೇಕೇ ಹೊರತು ಮಂಡಳಿಯ ಅಧಿಕಾರಿಗಳ ಐಷಾರಾಮಿ ಜೀವನಕ್ಕಲ್ಲಾ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಾದ ವರ್ಗದಲ್ಲಿ ಶೈಕ್ಷಣಿಕ ಧನಸಹಾಯ ಮಾಡಲು ನಿರ್ದೇಶಿಸಬೇಕು ಎಂದು ಕೋರಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಹಾಗೂ ಇತರ ಮೂವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಆಗ ಅರ್ಜಿದಾರ ವಕೀಲರು ನೀಡಿದ ಮಾಹಿತಿ ಪಡೆದು ಸಿಟ್ಟಾದ ನ್ಯಾಯಮೂರ್ತಿಗಳು ಮಂಡಳಿ ಅಧಿಕಾರಿಗಳನ್ನು ಟೀಕಿಸಿದರು. ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, "ಕಲ್ಯಾಣ ಮಂಡಳಿಯು ಈಗಾಗಲೇ 6 ಲಕ್ಷ ವಿದ್ಯಾರ್ಥಿಗಳಿಗೆ 500 ಕೋಟಿ ಶೈಕ್ಷಣಿಕ ಸಹಾಯಧನ ವಿತರಿಸಿದೆ. ಕಟ್ಟಡ ಕಾರ್ಮಿಕರಿಗಾಗಿ ಮಂಡಳಿಯ ಮುಖಾಂತರ ಇನ್ನೂ 19 ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ" ಎಂದರು.
ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಕೀಲ ಆದಿತ್ಯ ಚಟರ್ಜಿ, "2019ರ ಸಿಎಜಿ ವರದಿಯ ಅನುಸಾರ ಕರ್ನಾಟಕ ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿಯು ತನ್ನ ಆಡಳಿತಾತ್ಮಕ ವೆಚ್ಚವನ್ನು ಕಾನೂನಾತ್ಮಕವಾಗಿ ನಿಗದಿಪಡಿಸಿದ ಶೇ 5ರಷ್ಟನ್ನು ಮೀರಿ ಶೇ 9 ರಿಂದ ಶೇ 72ರಷ್ಟು ಹೆಚ್ಚಾಗಿ ಖರ್ಚು ಮಾಡಲಾಗಿದೆ" ಎಂದು ಆರೋಪಿಸಿದರು.
"ಘಟನೋತ್ತರ ಅನುಮೋದನೆ ಮೂಲಕ ಮಂಡಳಿಯು ಇನ್ನೋವಾ ಕಾರುಗಳನ್ನು ಖರೀದಿಸಿದ್ದು, ಮಂಡಳಿಯ ನಿಧಿಯನ್ನು ಅನಗತ್ಯವಾಗಿ ಖರ್ಚು ಮಾಡಿದೆ. ಹೈಕೋರ್ಟ್‌ನ ಇದೇ ಪೀಠವು ನೀಡಿದ್ದ ಮಧ್ಯಂತರ ಆದೇಶದಂತೆ ಇಬ್ಬರು ವಿದ್ಯಾರ್ಥಿನಿಯರಿಗೆ ಇನ್ನು ಹಣ ಪಾವತಿ ಮಾಡಿಲ್ಲ" ಎಂದರು.
ಅದಕ್ಕೆ ಉತ್ತರ ನೀಡಿದ ನೀಡಿದ ಕಲ್ಯಾಣ ಮಂಡಳಿ ಪರ ವಕೀಲರು, "ಇಬ್ಬರು ವಿದ್ಯಾರ್ಥಿನಿಯರಿಗೆ ಕೋರ್ಟ್ ಆದೇಶದ ಅನುಸಾರ 60,000 ರೂ. ಹಾಗೂ 55,000 ರೂ. ಪಾವತಿಸಲಾಗಿದೆ" ಎಂದು ಪಾವತಿಯ ನಕಲನ್ನು ನೀಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 26ಕ್ಕೆ ಮುಂದೂಡಿದೆ.
ವೇತನ ಪಾವತಿ: ಈ ಹಿಂದಿನ ಅಂದರೆ 2024ರ ಏಪ್ರಿಲ್ 23ರಂದು ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, "ನಾಲ್ಕು ವಾರದೊಳಗೆ ಎಲ್‌ಎಲ್‌ಬಿ ಹಾಗೂ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ಅರ್ಜಿದಾರ ವಿದ್ಯಾರ್ಥಿನಿಯರಿಗೆ ದಂಡ ಸಹಿತ ಶೈಕ್ಷಣಿಕ ಧನಸಹಾಯ ಪಾವತಿಸಬೇಕು" ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಆದೇಶಿಸಿದ್ದರು.












Click it and Unblock the Notifications