ಲೋಕಾಯುಕ್ತಕ್ಕೆ ರಿಜಿಸ್ಟ್ರಾರ್ ನೇಮಕಕ್ಕೆ ಹೈಕೋರ್ಟ್ ತಡೆ
ಬೆಂಗಳೂರು, ಆ.27 : ಕರ್ನಾಟಕ ಲೋಕಾಯುಕ್ತ ರಿಜಿಸ್ಟ್ರಾರ್ ನೇಮಕಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರ ಕೆಲವು ದಿನಗಳ ಹಿಂದೆ ಐಎಎಸ್ ಅಧಿಕಾರಿ ಪಿ.ಸಿ.ಜಾಫರ್ ಅವರನ್ನು ಲೋಕಾಯುಕ್ತ ರಿಜಿಸ್ಟ್ರಾರ್ ಆಗಿ ನೇಮಕ ಮಾಡಿತ್ತು.
ವಕೀಲ ಆರ್.ಆನಂದಮೂರ್ತಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ, ಸರ್ಕಾರ ಮುಖ್ಯ ಕಾರ್ಯದರ್ಶಿ, ಲೋಕಾಯುಕ್ತದ ಹಂಗಾಮಿ ರಿಜಿಸ್ಟ್ರಾರ್ ಹಾಗೂ ಪಿ.ಸಿ.ಜಾಫರ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. [ಲೋಕಾದಲ್ಲಿ ಭ್ರಷ್ಟಾಚಾರ, ಸಂತೋಷ್ ಹೆಗಡೆ ಸಂದರ್ಶನ]

ವಿವಾದವೇನು? : ಪ್ರಸ್ತುತ ಲೋಕಾಯುಕ್ತದ ಹಂಗಾಮಿ ರಿಜಿಸ್ಟ್ರಾರ್ ಆಗಿ ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ನ್ಯಾಯಾಂಗ ಸೇವೆ ಅಧಿಕಾರಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿದೆ. [ಲೋಕಾಯುಕ್ತ ಪದಚ್ಯುತಿಗೆ ವಿಶೇಷ ಅಧಿವೇಶನ]
ನ್ಯಾಯಾಂಗ ಸೇವೆ ಅಧಿಕಾರಿ ಐಎಎಸ್ ಅಧಿಕಾರಿ ಕೈ ಕೆಳಗೆ ಕೆಲಸ ಮಾಡಲು ಸಾಧ್ಯವಿಲ್ಲ. ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿರುವ ಸರ್ಕಾರ ನ್ಯಾಯಾಂಗ ಅಧಿಕಾರಿಗಳನ್ನು ಮತ್ತೆ ಇಲಾಖೆಗೆ ಕಳುಹಿಸುವ ಹುನ್ನಾರ ನಡೆಸುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ. ಎಎಜಿ ಪೊನ್ನಣ್ಣ ಅವರು, 'ಕಾನೂನಿನಲ್ಲಿ ಐಎಎಸ್ ಅಧಿಕಾರಿಯನ್ನು ರಿಜಿಸ್ಟ್ರಾರ್ ಆಗಿ ನೇಮಿಸಲು ಅವಕಾಶವಿದೆ. ಅದರಂತೆ ಜಾಫರ್ ಅವರನ್ನು ನೇಮಕ ಮಾಡಲಾಗಿದೆ' ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು.
ಸಮಾಲೋಚನೆ ನಡೆಸಿಲ್ಲ : ಲೋಕಾಯುಕ್ತಕ್ಕೆ ರಿಜಿಸ್ಟ್ರಾರ್ ನೇಮಕ ಮಾಡುವ ಮೊದಲು ಲೋಕಾಯುಕ್ತರ ಜೊತೆ ಸಮಾಲೋಚನೆ ನಡೆಸಬೇಕು. ಆದರೆ, ಸರ್ಕಾರ ಜಾಫರ್ ಅವರನ್ನು ನೇಮಕ ಮಾಡುವ ಮೊದಲು ಸಮಾಲೋಚನೆ ನಡೆಸಿಲ್ಲ. ಜಾಫರ್ ಅವರ ನೇಮಕವನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರದ ಹಗರಣ ಬಯಲಾಗಿರುವುದರಿಂದ ಅಲ್ಲಿಗೆ ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ಅಧಿಕಾರಿಯನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡುವ ಬದಲು ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.












Click it and Unblock the Notifications