ಶ್ವಾನ ತಳಿಗಳ ನಿಷೇಧ; ಕೇಂದ್ರದ ಆದೇಶಕ್ಕೆ ಹೈಕೋರ್ಟ್ ತಡೆ
ಬೆಂಗಳೂರು, ಮಾರ್ಚ್ 21: ಶ್ವಾನಗಳಲ್ಲಿಯೇ ಅತ್ಯಂತ ಅಪಾಯಕಾರಿ ಹಾಗೂ ಕ್ರೂರವಾಗಿರುವ ತಳಿಗಳ ಸಂತೋನೋತ್ಪತ್ತಿಗೆ ನಿಷೇಧ ಹೇರಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಕೇಂದ್ರದ ಆದೇಶ ಜಾರಿಗೆ ಸಂಬಂಧಿಸಿದಂತೆ ಹೈಕೋರ್ಟ್ ಕರ್ನಾಟಕಕ್ಕೆ ಸೀಮಿತವಾಗಿ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಹಾಗಾಗಿ ಆ ಆದೇಶವನ್ನು ಸದ್ಯಕ್ಕೆ ಜಾರಿಗೊಳಿಸಲಾಗದು. ಈ ಕುರಿತು ದೆಹಲಿ ಹೈಕೋರ್ಟ್ ನೀಡಿರುವ ಸೂಚನೆ ಆಧರಿಸಿ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದ್ದು ಮುಂದಿನ ದಿನಗಳಲ್ಲಿ ಬದಲಾವಣೆ ಆಗಬಹುದು.

ಬೆಂಗಳೂರು ನಗರದಲ್ಲಿ ವಾಸವಿರುವ ಕಿಂಗ್ ಸೋಲ್ಮನ್ ಡೇವಿಡ್ ಮತ್ತು ಮರ್ಡೋನಾ ಜಾನ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಮಧ್ಯಂತರ ತಡೆಯಾಜ್ಞೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮನುಷ್ಯನ ಜೀವಕ್ಕೆ ಅಪಾಯಕಾರಿ ಮತ್ತು ಉಗ್ರವಾಗಿ ವರ್ತಿಸುವ ತಳಿಯ ಶ್ವಾನಗಳನ್ನು ಗುರುತಿಸುವುದಕ್ಕೆ ಆಳವಾದ ಅಧ್ಯಯನ ಅಗತ್ಯವಿದೆ. ಆದರೆ, ಸುತ್ತೋಲೆಯಲ್ಲಿ ಉಲ್ಲೇಖಿಸದ ಹಲವು ತಳಿಗಳು ಕ್ರೂರ ವರ್ಗಕ್ಕೆ ಸೇರಲಿವೆ ಎಂದ ಪೀಠಕ್ಕೆ ವಿವರಿಸಿದ್ದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್, ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ದೆಹಲಿ ನ್ಯಾಯಾಲಯ ಈ ಸಂಬಂಧ ನಿರ್ದೇಶನ ನೀಡಿದೆ. ಅಲ್ಲದೆ, ಕೇಂದ್ರ ಸರ್ಕಾರವು ಸಂಬಂಧ ಪಟ್ಟವರೊಂದಿಗೆ ಚರ್ಚೆ ನಡೆಸಬೇಕು. ಜತೆಗೆ, ಅರ್ಜಿದಾರರ ಮನವಿಯನ್ನು ಪರಿಗಣಿಸಿ ಆದೇಶದ ಪ್ರತಿ ಲಭ್ಯವಾದ ಮೂರು ತಿಂಗಳೊಳಗೆ ಈ ಕುರಿತಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಪಾಲುದಾರರ ಜತೆ ಚರ್ಚೆ: ಕೇಂದ್ರ ಸರ್ಕಾರದ ವಾದವನ್ನು ಆಲಿಸಿ ಪೀಠ, ದೆಹಲಿ ಹೈಕೋರ್ಟ್ ಆದೇಶದಲ್ಲಿ ಅಪಾಯಕಾರಿ ಶ್ವಾನಗಳ ತಳಿ ನಿಷೇಧ ಮಾಡುವ ಕುರಿತಂತೆ ಸಂಬಂಧ ಪಟ್ಟ ಎಲ್ಲ ಪಾಲುದಾರರೊಂದಿಗೆ ಚರ್ಚೆ ನಡೆಸಬೇಕು ಎಂದು ತಿಳಿಸಿದೆ.
ಅದರಂತೆ ಅವುಗಳಲ್ಲಿ ಕೆನ್ನೆಲ್ ಕ್ಲಬ್ ಆಪ್ ಇಂಡಿಯಾ ಸಹಾ ಒಂದಾಗಿದ್ದು, ಅದರ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿಲ್ಲ. ಹೀಗಾಗಿ ಕೇಂದ್ರದ ಪರ ವಕೀಲರು ಈ ಸಂಬಂಧ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸುವ ಸಂಬಂಧ ನಿರ್ಧಾರಕ್ಕೆ ತೆಗೆದುಕೊಳ್ಳುವುದಕ್ಕೆ ಪರಿಗಣಿಸಿರುವ ಎಲ್ಲ ಅಂಶಗಳುಳ್ಳ ದಾಖಲೆಗಳನ್ನು ಸಲ್ಲಿಸಬೇಕು. ಅಲ್ಲಿಯವರೆಗೂ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗುವಂತೆ ಸುತ್ತೋಲೆಗೆ ತಡೆ ನೀಡುತ್ತಿರುವುದಾಗಿ ಆದೇಶಿಸಿದ್ದು, ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಕ್ರೂರ ಹಾಗೂ ಅಪಾಯಕಾರಿ ಶ್ವಾನಗಳ ತಳಿಗಳ (ಅಮೆರಿಕನ್ ಸ್ಟಾಫರ್ಡ್ ಶೈರ್, ಟೆರಿಯರ್, ಡೋಗೋ ಅರ್ಜೆಂಟೇನೋ, ಬುಲ್ ಡಾಗ್, ಕಂಗಲ್, ಸೆಂಟ್ರಲ್ ಏಷ್ಯನ್ ಷಫರ್ಡ್ ಡಾಗ್ ಸೇರಿದಂತೆ ಮಿಶ್ರ ತಳೀಯ ಶ್ವಾನಗಳ) ಸಂತಾನೋತ್ಪತ್ತಿ ನಿಷೇಧಿಸುವ ಸಲುವಾಗಿ ಅವುಗಳ ಮಾಲೀಕರು ಸಂತಾನ ಹರಣಕ್ಕಾಗಿ ಅಗತ್ಯವಿರುವ ಕ್ರಿಮಿನಾಶಕಗಳನ್ನು ಬಳಕೆ ಮಾಡಬೇಕು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ 2024ರ ಮಾರ್ಚ್ 12ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.












Click it and Unblock the Notifications