ಬಂಡೀಪುರ: ರಾತ್ರಿ ಸಂಚಾರ ನಿರ್ಬಂಧ ಮುಂದುವರಿಕೆ
ಬೆಂಗಳೂರು, ಡಿ.9: ಬಂಡೀಪುರ ರಾಷ್ಟ್ರೀಯ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುಮತಿ ನೀಡಿ ಎಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕರ್ನಾಟಕದಿಂದ ಕೇರಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಸಂಚರಿಸಬೇಕಾದರೆ ಬಂಡೀಪುರ ಹುಲಿ ಅಭಯಾರಣ್ಯ ಪ್ರದೇಶದ ಮೂಲಕ ಸಾಗಬೇಕು. ರಾತ್ರಿ ವೇಳೆ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಚಾರ ನಿರ್ಬಂಧ ತೆರವುಗೊಳಿಸಿ ಎಂದು ಕೋರಿ ಕರ್ನಾಟಕ ಸಾರಿಗೆ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಅದರೆ, ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ಈ ಹಿಂದಿನ ಆದೇಶವನ್ನು ಎತ್ತಿ ಹಿಡಿದಿದೆ.

2009ರಲ್ಲಿ ಕೇರಳ-ಕರ್ನಾಟಕ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 212ರಲ್ಲಿ ರಾತ್ರಿ 9 ರಿಂದ ಬೆಳಗಿನ ಜಾವ 6 ರವರೆಗೆ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು. ಅದರೆ, ಸದರಿ ಆದೇಶ ಕೆಲವೇ ದಿನಗಳಲ್ಲಿ ಹಿಂಪಡೆಯಲಾಗಿತ್ತು. ನಂತರ ಪರಿಸರವಾದಿಗಳ ಮಧ್ಯಪ್ರವೇಶದಿಂದ ಪ್ರಕರಣ ಕೋರ್ಟ್ ಮೆಟ್ಟಿಲೇರಿ ರಾತ್ರಿ 9 ರಿಂದ 6 ಗಂಟೆವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಜಾರಿಗೊಳಿಸಲಾಗಿತ್ತು.
ಬಂಡೀಪುರ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶವಿದ್ದಾಗ ಅರಣ್ಯ ಸಂಪತ್ತು ನಾಶವಾಗುವ ಭೀತಿ ಉಂಟಾಗಿತ್ತು. ಅಲ್ಲದೆ ವೇಗವಾಗಿ ವಾಹನಗಳು ಸಂಚರಿಸುವುದರಿಂದ ವನ್ಯಜೀವಿಗಳ ಜೀವಕ್ಕೂ ಅಪಾಯ ಉಂಟಾಗುತ್ತಿತ್ತು. ಇದನ್ನು ತಡೆಯಲು ಚಾಮರಾಜನಗರ ಜಿಲ್ಲಾಧಿಕಾರಿಗಳು ರಾತ್ರಿ ವೇಳೆ ಸಂಚಾರವನ್ನು ನಿಷೇಧಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ಎಸ್.ಪಾಟೀಲ್ ಅವರಿದ್ದ ಏಕಸದಸ್ಯ ಪೀಠ, ಸಂಚಾರ ನಿಷೇಧವನ್ನು ಎತ್ತಿ ಹಿಡಿದಿದೆ. ಈ ನಡುವೆ 12 ಗಂಟೆಗಳ ನಿಷೇಧಕ್ಕೆ ಆಗ್ರಹಿಸಿದ ಪರಿಸರವಾದಿಗಳ ಕೂಗು ಅರಣ್ಯರೋದನವಾಗಿಬಿಟ್ಟಿದೆ.












Click it and Unblock the Notifications