ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅನುದಾನ ನೀಡದ್ದಕ್ಕೆ ಹೈಕೋರ್ಟ್ ಕೆಂಡ
ಬೆಂಗಳೂರು, ಜೂನ್ 11: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಾದ ವರ್ಗದಲ್ಲಿ ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದ ಇಬ್ಬರು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ತಕ್ಷಣವೇ ನೆರವು ನೀಡಲು ಜಾರಿ ಮಾಡಿದ್ದ ಮಧ್ಯಂತರ ಆದೇಶ ಪಾಲನೆ ಮಾಡದ ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿ ಕಾರಿದೆ.
ಅಲ್ಲದೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ಮಕ್ಕಳ ಕಲ್ಯಾಣಕ್ಕಾಗಿ 6,700 ಕೋಟಿ ರೂ. ಹೇಗೆ ಬಳಕೆಯಾಗಿದೆ? ಎಂಬ ಬಗ್ಗೆ ವಿವರ ಸಲ್ಲಿಸುವಂತೆ ಆದೇಶ ನೀಡಿದೆ.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಹಾಗೂ ಇತರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಉದಾಸೀನ ನಿಲುವು ಕುರಿತು ನ್ಯಾಯಮೂರ್ತಿ ನಾಗಪ್ರಸನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬಿಸಿಲು, ಮಳೆ ಎನ್ನದೇ ಶ್ರಮಪಡುವ ಕಟ್ಟಡ ಕಾರ್ಮಿಕರ ದುಡಿಮೆಯಿಂದಾಗಿ ಸಾವಿರಾರು ಕೋಟಿ ರೂಪಾಯಿ ಸೆಸ್ ಸಂಗ್ರಹವಾಗುತ್ತಿದ್ದರೂ ಅದನ್ನು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡದೆ, ಅಧಿಕಾರಿಗಳು ಐಷಾರಾಮಿ ಜೀವನ ಸಾಗಿಸುತ್ತಿರುವುದು ದುಃಖಕರ ಎಂದು ಬೇಸರ ವ್ಯಕ್ತ ಪಡಿಸಿದೆ.
ಪ್ರಕರಣದ ಹಿನ್ನೆಲೆ: 2024ರ ಏಪ್ರಿಲ್ 23ರಂದು ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ನಾಲ್ಕು ವಾರದೊಳಗೆ ಎಲ್‌ಎಲ್‌ಬಿ ಹಾಗೂ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರಿಗೆ ದಂಡಸಹಿತ ಶೈಕ್ಷಣಿಕ ಧನಸಹಾಯ ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಆದೇಶ ನೀಡಿದ್ದರು.
ಆದರೆ ಈ ಆದೇಶದ ನಂತರ ಅರ್ಜಿಯು ಪುನಃ ಇದೇ 7ರಂದು ವಿಚಾರಣೆಗೆ ನಿಗದಿಯಾಗಿತ್ತು. ಈ ವೇಳೆ ಅರ್ಜಿದಾರರ ಪರ ವಕೀಲ ಆದಿತ್ಯ ಚಟರ್ಜಿ, ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶ ಪಾಲನೆಯಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅದಕ್ಕೆ ಸಿಟ್ಟಾದ ನ್ಯಾಯಮೂರ್ತಿ ಮಧ್ಯಂತರ ಆದೇಶ ಜಾರಿ ಮಾಡಲು ವಿಫಲವಾದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ವಿರುದ್ದ ಕಿಡಿ ಕಾರಿದರು. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ 6,700 ಕೋಟಿ ಸೆಸ್, ಅದು ಹೊಂದಿರುವ ಬ್ಯಾಂಕ್ ಖಾತೆಯ ವಿವರಗಳು ಹಾಗೂ ಯಾವ ಸೌಲಭ್ಯಗಳಿಗೆ ಎಷ್ಟು ಖರ್ಚು ಮಾಡಲಾಗುತ್ತಿದೆ? ಎನ್ನುವ ವಿವರಗಳನ್ನು ಒಳಗೊಂಡ ಪ್ರಮಾಣ ಪತ್ರವನ್ನು ಸಲ್ಲಿಸಿ ಎಂದು ಆದೇಶಿಸಿದರು.












Click it and Unblock the Notifications