ಬಿಟಿಸಿ ಕುದುರೆ ರೇಸ್ ಆಯೋಜನೆಗೆ ಹೈಕೋರ್ಟ್ ನಿರ್ಬಂಧ
ಬೆಂಗಳೂರು, ಜೂನ್ 23: ಕುದುರೆ ರೇಸ್ ಪ್ರಿಯರಿಗೆ ನಿರಾಶೆಯ ಸುದ್ದಿ ಇಲ್ಲಿದೆ. ಸದ್ಯಕ್ಕೆ ರೇಸ್ ಗಳು ಆರಂಭವಾಗುವ ಸಾಧ್ಯತೆ ಇಲ್ಲ. ಕಳೆದ ಮೂರು ತಿಂಗಳಿಂದ ರೇಸ್ ಇಲ್ಲದೆ ಪರಿತಪಿಸುತ್ತಿದ್ದ ಬಹುತೇಕ ಮಂದಿ ಇನ್ನೂ ಕೆಲ ತಿಂಗಳು ಹಾಗೆಯೇ ಕಾಲ ಕಳೆಯಬೇಕಾಗುತ್ತದೆ. ಏಕೆಂದರೆ ನಗರದ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ವಾರಾಂತ್ಯದಲ್ಲಿ ಆನ್‌ಕೋರ್ಸ್ ಹಾಗೂ ಆಫ್‌ಕೋರ್ಸ್ ರೇಸ್‌ಗಳ ಆಯೋಜನೆಗೆ ಹೈಕೋರ್ಟ್ ವಿಭಾಗೀಯಪೀಠ ನಿರ್ಬಂಧ ವಿಧಿಸಿದೆ.
ರೇಸ್‌ಕೋರ್ಸ್‌ನಲ್ಲಿ ಷರತ್ತುಗಳ ಅನ್ವಯ ರೇಸ್‌ಗಳನ್ನು ಆಯೋಜನೆ ಮಾಡುವುದಕ್ಕೆ ಅನುಮತಿ ನೀಡಿದ್ದ ಏಕಸದಸ್ಯಪೀಠದ ಮಧ್ಯಂತರ ಆದೇಶ ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರಿದ್ದ ವಿಭಾಗೀಯಪೀಠ ಶನಿವಾರ ಈ ಆದೇಶ ನೀಡಿದೆ.

ಅಲ್ಲದೆ, ಅರ್ಜಿ ವಿಚಾರಣೆ ಪೂರ್ಣಗೊಳಿಸುವವರೆಗೂ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಆನ್‌ಕೋರ್ಸ್ ಮತ್ತು ಆಫ್‌ಕೋರ್ಸ್ ರೇಸ್‌ಗಳ ಆಯೋಜನೆಗೆ ನಿರ್ಬಂಧ ವಿಧಿಸಲಾಗಿದ್ದು, ಆಗಸ್ಟ್ 13ಕ್ಕೆ ವಿಚಾರಣೆ ಮುಂದೂಡಲಾಗಿದೆ.
ನ್ಯಾಯಪೀಠ, "ಸರಕಾರ ಮೇಲ್ಮನವಿಯಲ್ಲಿ ಕೋರಿರುವ ಅಂಶಗಳಲ್ಲಿ ರೇಸ್‌ಗಳನ್ನು ಆಯೋಜಿಸದಂತೆ ಕೋರಿರುವುದಕ್ಕೆ ಬಲವಾದ ಕಾರಣಗಳನ್ನು ನೀಡಿದೆ. ಹಾಗಾಗಿ ರೇಸ್‌ಗಳನ್ನು ನಡೆಸಲು ಅನುಮತಿ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಅಮಾನತ್ತಿನಲ್ಲಿಡಲಾಗುವುದು" ಎಂದು ತಿಳಿಸಿದೆ.
ಅಡ್ವೊಕೇಟ್ ಜನರಲ್, "ಬಿಟಿಸಿ ಆವರಣದಲ್ಲಿ ಬುಕ್ಕಿಗಳು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಾರೆ. 2024ರ ಜ.12ರಂದು ನಡೆಸಿದ ದಾಳಿಯಲ್ಲಿಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕ್ಲಬ್‌ನ ಅಧ್ಯಕ್ಷ ರು, ಸಿಇಒ ಮತ್ತು ಕಾರ್ಯದರ್ಶಿ ಸೇರಿ ಒಟ್ಟು 27 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ" ಎಂದು ವಾದಿಸಿದ್ದರು.
"ಪುನಃ ಪರವಾನಗಿ ನೀಡಿದರೆ ಆವರಣದಲ್ಲಿಅಕ್ರಮ ಚಟುವಟಿಕೆಗಳು ಶುರುವಾಗುತ್ತವೆ. ಈ ಹಿಂದೆ ಕುದುರೆಗೆ ಡ್ರಗ್ಸ್ ನೀಡಿದ್ದ ಆರೋಪವೂ ಇದೆ. ಇಲ್ಲಿ ಜೂಜಾಡುವವರು ಆಟೋ, ಟ್ಯಾಕ್ಸಿ ಚಾಲಕರಂತಹ ಬಡ ಕುಟುಂಬದವರು. ಅಂಥವರೆಲ್ಲಾ ಮೋಸಕ್ಕೆ ಬಲಿಯಾಗುತ್ತಾರೆ. ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕಾದದ್ದು ಸರಕಾರದ ಆದ್ಯ ಕರ್ತವ್ಯವಾಗಿದೆ" ಎಂದೂ ಸಹ ಪ್ರತಿಪಾದಿಸಿದರು.
ಬಿಟಿಸಿ ಪರ ವಾದ ಮಂಡಿಸಿದ ಹಿರಿಯ ವಕೀಲರು, "ಕ್ಲಬ್ ಕಳೆದ 150 ವರ್ಷಗಳಿಂದ ರೇಸ್ ನಡೆಸುತ್ತಾ ಬಂದಿದೆ. ಆದರೆ, ಕಳೆದ ಮೂರು ತಿಂಗಳಿಂದ ರೇಸ್‌ಗಳು ಸ್ಥಗಿತಗೊಂಡಿವೆ. ಇದು ಅಧಿಕೃತವಾದ ರೇಸ್. ಸರಕಾರ 2010ರಲ್ಲಿ ಕ್ಲಬ್‌ನ ವಿಶಾಲವಾದ ಜಾಗ ಬಿಟ್ಟುಕೊಡುವಂತೆ ಕೇಳಿತ್ತು. ಈ ಕುರಿತಾದ ವ್ಯಾಜ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಮಧ್ಯಂತರ ಆದೇಶವಿದೆ" ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಪ್ರಕರಣದ ಹಿನ್ನೆಲೆ: 2024ರ ಮಾರ್ಚ್‌ನಲ್ಲಿ ಸರಕಾರ ಷರತ್ತುಗಳನ್ವಯ ಕುದುರೆ ಪಂದ್ಯಗಳನ್ನು ಆಯೋಜಿಸಲು ಬಿಟಿಸಿಗೆ ಅನುಮತಿ ನೀಡಿತ್ತು. ಆನಂತರ ಜೂ. 6ರಂದು ರೇಸ್ ಆಯೋಜನೆಗೆ ಅನುಮತಿ ನಿರಾಕರಿಸಿ ಸರಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಬಿಟಿಸಿ ಮತ್ತು ಇತರರು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಏಕಸದಸ್ಯ ಪೀಠವು ಕಳೆದ ಜೂ.18ರಂದು ನಗರದ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಷರತ್ತುಗಳ ಅನ್ವಯ ಕುದುರೆ ರೇಸ್‌ಗಳನ್ನು ಆಯೋಜನೆ ಮಾಡಲು ಅನುಮತಿ ನೀಡಿತ್ತು. ಅಲ್ಲದೆ, ಆನ್‌ಕೋರ್ಸ್ (ಬೆಂಗಳೂರಿನಲ್ಲಿ ನಡೆಯುವ ರೇಸ್) ಮತ್ತು ಆಫ್‌ಕೋರ್ಸ್ ರೇಸ್‌ಗಳನ್ನು (ಮೈಸೂರು, ಬಾಂಬೆಯಲ್ಲಿ ನಡೆಯುವ ರೇಸ್‌ಗಳು) ಬಿಟಿಸಿ ಆಯೋಜಿಸಬಹುದಾಗಿದೆ. ರಾಜ್ಯ ಸರಕಾರವು ರೇಸ್‌ಗಳ ಆಯೋಜನೆ ವೇಳೆ ಅದರ ಮೇಲ್ವಿಚಾರಣೆ ಮತ್ತು ನಿಯಂತ್ರಿಸಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿತ್ತು.












Click it and Unblock the Notifications