ಕೆಆರ್‌ಎಸ್ ಪಕ್ಷದ ಪ್ರಚಾರಕ್ಕೆ ವಾಹನ, ಧ್ವನಿವರ್ಧಕ ಬಳಕೆಗೆ ಕೋರ್ಟ್ ಅಸ್ತು
ಬೆಂಗಳೂರು, ಏಪ್ರಿಲ್ 18; ಇನ್ನೂ ಕೇಂದ್ರ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳೂ ಸಹ ತಮ್ಮ ಚುನಾವಣಾ ಪ್ರಚಾರಕ್ಕಾಗಿ ಖಾಸಗಿ ವಾಹನಗಳು ಮತ್ತು ಧ್ವನಿ ವರ್ಧಕಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ. ಎನ್. ದೀಪಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ನ್ಯಾಯಪೀಠ, ಚುನಾವಣಾ ಅಧಿಕಾರಿಗಳು ಹೊರಡಿಸಿರುವ ಆದೇಶ ಮೇಲ್ನೋಟಕ್ಕೆ ಸಮರ್ಥನಿಯಲ್ಲ. ಹಾಗಾಗಿ ಅರ್ಜಿದಾರರ ಕಚೇರಿ ಸಿಬ್ಬಂದಿಗಳಿಗೆ ವಾಹನ ಮತ್ತು ಧ್ವನಿವರ್ಧಕಗಳನ್ನು ಬಳಕೆ ಮಾಡಲು ಪರವಾನಿಗೆ ನೀಡುವಂತೆ ಚುನಾವಣಾಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೆ, ಕೇಂದ್ರ ಚುನಾವಣಾ ಆಯೋಗ ಸೇರಿದಂತೆ ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ನೋಟಿಸ್ ಜಾರಿ ಮಾಡಿದೆ.

ಪ್ರಕರಣದ ಹಿನ್ನೆಲೆ: ಚುನಾವಣಾ ಪ್ರಚಾರಕ್ಕಾಗಿ ಖಾಸಗಿ ವಾಹನ ಮತ್ತು ಧ್ವನಿವರ್ಧಕಗಳನ್ನು ಬಳಕೆ ಮಾಡಿಕೊಳ್ಳುವುದಕ್ಕಾಗಿ ಅನುಮತಿ ನೀಡುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಗಳು ಗದಗ ಮತ್ತು ವಿಜಯನಗರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿದ್ದರು. ಮನವಿಯನ್ನು ಪರಿಶೀಲಿಸಿದ್ದ ಅಧಿಕಾರಿಗಳು, ರಾಷ್ಟ್ರೀಯ ಸಮಿತಿ ಪಕ್ಷ ಈವರೆಗೂ ಮಾನ್ಯತೆ ಪಡೆದಿಲ್ಲ ಎಂಬ ಕಾರಣ ನೀಡಿ ಅನುಮತಿ ನೀಡುವುದಕ್ಕೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಪ್ರತಿ ಬಾರಿಯ ಚುನಾವಣೆಯಲ್ಲಿಯೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಗಳು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ಕಣಕ್ಕೆ ಇಳಿಯುತ್ತಾರೆ. 2008ರಲ್ಲಿ ರವಿ ಕೃಷ್ಣಾರೆಡ್ಡಿ ಸಮಾನ ಮನಸ್ಕರೊಡಗೂಡಿ ಕರ್ನಾಟಕ ರಾಷ್ಟ್ರ ಸಮಿತಿ (ಕೆ. ಆರ್. ಎಸ್.) ಎಂಬ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಿದರು. ರಾಜ್ಯದ ಮತ್ತು ದೇಶದ ರಾಜಕೀಯದಲ್ಲಿ ಮೌಲ್ಯಗಳನ್ನು ಆಗ್ರಹಿಸಿ, ರಾಜಕಾರಣವನ್ನು ಸ್ವಚ್ಚ, ಪ್ರಾಮಾಣಿಕ ರೀತಿಯಲ್ಲಿ ನಡೆಸಬೇಂಬ ಉದ್ದೇಶದಿಂದ ಈ ಪಕ್ಷವನ್ನು ಸ್ಥಾಪನೆ ಮಾಡಲಾಗಿದೆ.
ರವಿ ಕೃಷ್ಣಾರೆಡ್ದಿ 2016ರಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮೂಲಕ ರಾಜ್ಯದ ನೂರಾರು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ 'ಲಂಚಮುಕ್ತ ಅಭಿಯಾನ' ಎನ್ನುವ ಸೋಷಿಯಲ್ ಆಡಿಟ್ ಅನ್ನು ನಡೆಸುತ್ತಾ ಬಂದಿದೆ. ಈ ಮೂಲಕ ಹಲವಾರು ಸರ್ಕಾರಿ ಅಧಿಕಾರಿ ಹಾಗೂ ಪೊಲೀಸರ ಭ್ರಷ್ಟಾಚಾರವನ್ನು ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆ ಎಳೆದು ಅವರು ಅಮಾನತು ಆಗುವ ಹಾಗೆ ಮಾಡುತ್ತಾ, ಸಾವಿರಾರು ಅಮಾಯಕ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆದು ನ್ಯಾಯ ಕೊಡಿಸುತ್ತಾ ಬಂದಿದೆ. ಈ ವೇದಿಕೆಯ ಹಲವಾರು ಪದಾಧಿಕಾರಿಗಳು ಸೇರಿ ಕಟ್ಟಿರುವ ಪಕ್ಷವೇ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ 2023ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ. ಎನ್. ಈ ಕುರಿತು ಮಾಹಿತಿ ನೀಡಿದ್ದಾರೆ. ಪಕ್ಷ ಮೊದಲ ಪಟ್ಟಿಯಲ್ಲಿ 47 ಮತ್ತು 2ನೇ ಪಟ್ಟಿಯಲ್ಲಿ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಏಪ್ರಿಲ್ 12ರಂದು 3ನೇ ಪಟ್ಟಿಯಲ್ಲಿ 32 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಪಕ್ಷ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡುತ್ತಿತ್ತು. ಇಲ್ಲಿಯವರೆಗೆ ಪಕ್ಷವು 300ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿದ್ದು, ಒಟ್ಟು 151 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಉಳಿದ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಹೇಳಿದೆ. ಈ ಬಾರಿಯ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನವಾಗಿದೆ.












Click it and Unblock the Notifications