ಭಿಕ್ಷಾಟನೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ; ಹೈಕೋರ್ಟ್
ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಭಿಕ್ಷಾಟನೆಯನ್ನು ನಿಯಂತ್ರಿಸಲು ಕೂಡಲೇ ಪೊಲೀಸರ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಆದೇಶ ನೀಡಿದೆ.
ಬೆಂಗಳೂರು, ಫೆಬ್ರವರಿ 16; ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಭಿಕ್ಷಾಟನೆಯನ್ನು ನಿಯಂತ್ರಿಸಲು ಕೂಡಲೇ ಪೊಲೀಸರ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಅಲ್ಲದೇ, ಕರ್ನಾಟಕ ಭಿಕ್ಷಾಟನೆ ನಿಯಂತ್ರಣಾ ಕಾಯಿದೆ 1975ರ ಸೆಕ್ಷನ್ 11ರನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ದೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ.
ಹಾಗಾಗಿ ಮುಂದಿನ ದಿನಗಳಲ್ಲಿ ಸಿಗ್ನಲ್‌ಗಳು, ದೇವಾಲಯ ಹಾಗೂ ಬೀದಿ ಬದಿ ಎಲ್ಲೆಂದರಲ್ಲಿ ಭಿಕ್ಷಾಟನೆ ತೊಡಗಿರುವವರ ಸಂಖ್ಯೆ ಕಡಿಮೆಯಾಗಲಿದೆ.

ರಸ್ತೆ ಬದಿಗಳಲ್ಲಿ ಮಕ್ಕಳು ಆಟಿಕೆಗಳು ಮಾರುವುದು ಮತ್ತು ಭಿಕ್ಷಾಟನೆ ನಡೆಸುವುದನ್ನು ನಿಯಂತ್ರಣ ಮಾಡುವಂತೆ ಕೋರಿ ಬೆಂಗಳೂರು ನಗರದ ಲೆಟ್ಜ್ ಕಿಡ್ಜ್ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯಪೀಠ ಈ ಸೂಚನೆ ನೀಡಿತು.
ಸೆಸ್ ಪಾವತಿಗೆ ಆದೇಶ: ರಾಜ್ಯದ ಎಲ್ಲಾ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಂದ ಈವರೆಗೂ 19.27 ಕೋಟಿ ರೂ.ಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಲಾಗಿದೆ. ಇನ್ನುಳಿದ 29.51 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದು, ಪಾವತಿ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಪ್ರಮಾಣ ಪತ್ರದಲ್ಲಿ ತಿಳಿಸಿದೆ.
ಬಿಬಿಎಂಪಿ ಪರ ವಕೀಲರು, ಸುಮಾರು 139 ಕೋಟಿ ರೂ.ಗಳ ಭಿಕ್ಷುಕರ ಸೆಸ್ ಬಾಕಿ ಉಳಿಸಿಕೊಂಡಿದ್ದು, 10 ಕೋಟಿ ರೂ. ಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿ ಮಾಡಿದೆ ಎಂದು ತಿಳಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ಮೂರು ವಾರಗಳಲ್ಲಿ ಬಾಕಿ ಉಳಿಸಿಕೊಂಡಿರುವ ಭಿಕ್ಷುಕರ ಸೆಸ್‌ನ್ನು ಪಾವತಿ ಮಾಡಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ದುರದೃಷ್ಟಕರ ಸಂಗತಿ : ಭಿಕ್ಷಾಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾಯಿದೆಯಲ್ಲಿರುವ ಅಂಶಗಳ ಕುರಿತಂತೆ ಹಲವು ಪೊಲೀಸ್ ಠಾಣಾಧಿಕಾರಿಗಳಿಗೆ ಮಾಹಿತಿಯೇ ಇಲ್ಲದಿರುವುದು ನಿಜಕ್ಕೂ ದುರಾದೃಷ್ಠಕರ ಸಂಗತಿ ಆಗಿದೆ ಎಂದು ನ್ಯಾಯಪೀಠ ಹೇಳಿದೆ.
ಆದ್ದರಿಂದ ಕರ್ನಾಟಕ ಭಿಕ್ಷಾಟನೆ ನಿಯಂತ್ರಣಾ ಕಾಯಿದೆ 1975ರ ಸೆಕ್ಷನ್ 11ರನ್ನು ಪರಿಣಾಮಕಾರಿ ಜಾರಿ ಮಾಡುವ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಎಲ್ಲ ಮಹಾನಗರಗಳ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು, ನಗರದ ಎಲ್ಲ ವಿಭಾಗಗಳ ಸಹಾಯಕ ಪೊಲೀಸ್ ಆಯುಕ್ತರು, ಎಲ್ಲ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚನೆ ನೀಡಬೇಕು.
ಈ ಅಧಿಕಾರಿಗಳು ರಾಜ್ಯದ ಎಲ್ಲ ಪೊಲೀಸ್ ಠಾಣಾ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ ಭಿಕ್ಷಾಟನೆ ನಿಯಂತ್ರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.











Click it and Unblock the Notifications