ಎಸಿಬಿಗೆ ಕಳಂಕಿತರ ಅಧಿಕಾರಿಗಳನ್ನು ನೇಮಿಸಬೇಡಿ- ಸರ್ಕಾರಕ್ಕೆ ಹೈಕೋರ್ಟ್ ಹುಕುಂ
ಬೆಂಗಳೂರು,ಜು.11: ಭ್ರಷ್ಟಾಚಾರ ನಿರ್ಮೂಲನೆಗಾಗಿ ರಚಿಸಲಾಗಿರುವ ಭ್ರಷ್ಟಾಚಾರ ನಿಗ್ರಹ ದಳದಂತಹ (ಎಸಿಬಿ) ಸಂಸ್ಥೆಗಳಿಗೆ ಕಳಂಕಿತ ಅಧಿಕಾರಿಗಳನ್ನು ನೇಮಕ ಮಾಡಬಾರದು ಎಂದು ಹೈಕೋರ್ಟ್, ಸರ್ಕಾರಕ್ಕೆ ಖಡಕ್ ಆದೇಶ ನೀಡಿದೆ.
ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ನ್ಯಾ. ಎಸ್. ಸಂದೇಶ್ ಅವರು ಎಸಿಬಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಜಿಲ್ಲಾಧಿಕಾರಿ ಲಂಚ ಪ್ರಕರಣದಲ್ಲಿ ಎಸಿಬಿ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿರುವ ನ್ಯಾಯಮೂರ್ತಿಗಳು ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಎಸಿಬಿಗೆ ಕಳಂಕಿತರನ್ನು ನೇಮಿಸಬೇಡಿ ಎಂದು ಸರ್ಕಾರಕ್ಕೆ ಆದೇಶ ಹೊರಡಿಸಿದೆ.
ಎಸಿಬಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಅವರ ಸೇವಾ ದಾಖಲೆ (ಸವೀರ್ಸ್ ರೆಕಾರ್ಡ್) ಹಾಗೂ ಅಧಿಕಾರಿಗಳ ದಕ್ಷತೆಯನ್ನು ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಉಪ ತಹಸೀಲ್ದಾರ್ ಪಿ.ಎಸ್. ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ ಈ ಕುರಿತು ಆದೇಶ ಹೊರಡಿಸಿ, ಅದನ್ನು ಸರ್ಕಾರಕ್ಕೆ ತಲುಪಿಸಲು ರಿಜಿಸ್ಟ್ರಾರ್ ಜನರಲ್‌ಗೆ ಆದೇಶ ನೀಡಿದೆ.
ನ್ಯಾಯಪೀಠದ ಆದೇಶವೇನು?: ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಕಾರ್ಯದರ್ಶಿಗಳಿಗೆ ನ್ಯಾಯಪೀಠ ಮೂರು ನಿರ್ದೇಶನ ನೀಡಿತು.
ಎಸಿಬಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಭ್ರಷ್ಟಾಚಾರ ತಡೆಯಲೆಂದೇ ರಚಿಸಲಾಗಿರುವ ಎಸಿಬಿಗೆ ಅಧಿಕಾರಿಯಾಗುವವರಿಗೆ ವಿಶ್ವಾಸಾರ್ಹತೆ ಇರಬೇಕು. ಸಂಸ್ಥೆಯ ಘನತೆಯನ್ನು ಉನ್ನತ ಹಂತಕ್ಕೆ ಒಯ್ಯುವ ಕ್ಷಮತೆ ಇರಬೇಕು. ಆದ್ದರಿಂದ, ಎಸಿಬಿಯಂತಹ ಸಂಸ್ಥೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಅವರ ಸರ್ವೀಸ್ ರೆಕಾರ್ಡ್ ಹಾಗೂ ಸಮಗ್ರತೆಯನ್ನು ಪರಿಗಣಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತು.

ಅಧಿಕಾರಿಗಳ ನೇಮಕಾತಿಯನ್ನು ಯಾವುದೇ ಒತ್ತಡಗಳಿಗೆ ಒಳಗಾಗದೆ ನಡೆಸಬೇಕು. ನೇಮಕದ ಹಿಂದೆ ಆಂತರಿಕ ಅಥವಾ ಬಾಹ್ಯ ಪ್ರಭಾವ ಇರಬಾರದು. ನೇಮಕ ಮಾಡಲಾಗುವ ಅಧಿಕಾರಿಯ ವಿರುದ್ಧ ಎಸಿಬಿ ಅಥವಾ ಲೋಕಾಯುಕ್ತ ತನಿಖೆ ನಡೆಯುತ್ತಿರಬಾರದು. ಅವರ ಕುಟುಂಬ ಸದಸ್ಯರ ವಿರುದ್ಧವೂ ಯಾವುದೇ ತನಿಖೆ ನಡೆಯುತ್ತಿರಬಾರದು.
ಈ ಎಲ್ಲ ಅಂಶಗಳನ್ನು ಪರಿಶೀಲಿಸಿದ ನಂತರವೇ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಡಿಪಿಎಆರ್ ಕಾರ್ಯದರ್ಶಿಗೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಜು.13ಕ್ಕೆ ಮುಂದೂಡಿತು.
ಜಾಮೀನು ಅರ್ಜಿ ವಜಾ: ಈ ಮಧ್ಯೆ, ಲಂಚ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಡಿಸಿಯಾಗಿದ್ದ ಜೆ.ಮಂಜುನಾಥ್ ಜಾಮೀನು ಅರ್ಜಿಯನ್ನು ವಿಶೇಷ ಕೋರ್ಟ್ ವಜಾಗೊಳಿಸಿದೆ.
ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ ಈ ಹಂತದಲ್ಲಿ ಜಾಮೀನು ನೀಡಲಾಗದು ಎಂದು ಆದೇಶಿಸಿದೆ.
ಹೈಕೋರ್ಟ್ ಚಾಟಿ ಬೀಸಿದ ನಂತರ ಜು.4ರಂದು ಎಸಿಬಿ ಮಾಜಿ ಡಿಸಿಯನ್ನು ಬಂಧಿಸಿದ್ದರು. ಸದ್ಯ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.












Click it and Unblock the Notifications