ಅಕ್ರಮವಾಗಿ ಸಂಗ್ರಹಿಸಿದ್ದ 27.51 ಕೋಟಿ ಜಿಎಸ್‌ಟಿ ಹಣ ಸ್ವಿಗ್ಗಿಗೆ ವಾಪಸ್ ನೀಡಲು ಹೈಕೋರ್ಟ್ ಆದೇಶ
ಬೆಂಗಳೂರು, ಮಾ.12. ಆಹಾರ ಪದಾರ್ಥಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಸಂಸ್ಥೆಯಿಂದ ತನಿಖೆ ಬಾಕಿ ಇದ್ದರೂ ಕಾನೂನುಬಾಹಿರವಾಗಿ ಸಂಗ್ರಹಿಸಿರುವ 27.51 ಕೋಟಿ ರೂ. ಹಣವನ್ನು ಮರುಪಾವತಿಸುವಂತೆ ಹೈಕೋರ್ಟ್, ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ನಿರ್ದೇಶನಾಲಯಕ್ಕೆ ಆದೇಶ ನೀಡಿದೆ.
ಗ್ರಾಹಕರ ಮನೆ ಬಾಗಿಲಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಸ್ವಿಗ್ಗಿ ಅಪ್ಲಿಕೇಷನ್ ಬ್ರ್ಯಾಂಡ್‌ನ ಮೂಲ ಸಂಸ್ಥೆ ಬಂಡ್ಲ್ ಟೆಕ್ನಾಲಜೀಸ್ ಪ್ರೈ. ಲಿ ವಿರುದ್ಧ ಜಿಎಸ್ ಟಿ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾ.ಅಲೋಕ್ ಅರಾಧೆ ಮತ್ತು ನ್ಯಾ. ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
"2021ರ ಸೆ.16ರಂದು ಏಕಸದಸ್ಯಪೀಠ ಸ್ವಿಗ್ಗಿ ಸಲ್ಲಿಸಿದ್ದ ಮರುಪಾವತಿ ಮನವಿಯನ್ನು ಆಲಿಸಿ ಸಿಜಿಎಸ್ ಟಿ ಕಾಯ್ದೆ ಸೆಕ್ಷನ್ 74(5) ಅಡಿ 27.51 ಕೋಟಿಯನ್ನು ಪಾವತಿಸುವಂತೆ ನೀಡಿದ್ದ ಆದೇಶವನ್ನು ಪಾಲಿಸಬೇಕು''ಎಂದು ನ್ಯಾಯಪೀಠ ಜಿಎಸ್ ಟಿ ಮಂಡಳಿಯ ಮೇಲ್ಮನವಿಯನ್ನು ವಜಾಗೊಳಿಸಿದೆ.

ಕೋರ್ಟ್ ಆದೇಶವೇನು? :
"ಕಾನೂನುಬಾಹಿರವಾಗಿ ತೆರಿಗೆ ಸಂಗ್ರಹಿಸಿದರೆ ಯಾವುದೇ ಅಧಿಕಾರವಿಲ್ಲದೆ ವ್ಯಕ್ತಿಯ ಆಸ್ತಿಯನ್ನು ಕಸಿದುಕೊಂಡಂತಾಗುತ್ತದೆ. ಇದು ಸಂವಿಧಾನದ 300ಎ ವಿಧಿಯ ಅಡಿಯಲ್ಲಿ ವ್ಯಕ್ತಿಯ ಹಕ್ಕು ಉಲ್ಲಂಘಿಸಿದಂತಾಗುತ್ತದೆ. ಈಗ ಠೇವಣಿ ಇಟ್ಟಿರುವ ಹಣವನ್ನು ತನಿಖೆಯ ಅಂತಿಮ ಫಲಿತಾಂಶಕ್ಕೆ ಒಳಪಡಿಸಬೇಕೆಂಬ ಕೇಂದ್ರ ಸರ್ಕಾರದ ಕೋರಿಕೆ ಒಪ್ಪಲಾಗದು. ಹಾಗಾಗಿ, ಇಲಾಖೆಯು ಸ್ವಿಗ್ಗಿಗೆ ಹಣ ಮರುಪಾವತಿ ಮಾಡಲೇಬೇಕು" ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆ ಗ್ರೀನ್ ಫಿಂಚ್ ಹೆಸರಿನಲ್ಲಿ ಸ್ವಿಗ್ಗಿಯು ಗ್ರೀನ್ ಫಿಂಚ್‌ಗೆ ಪಾವತಿಸಿರುವ ಜಿಎಸ್‌ಟಿಯನ್ನು ತೋರಿಸಿ ಇನ್‌ಪುಟ್ ತೆರಿಗೆ ಲಾಭ ಪಡೆದು ಅಕ್ರಮ ಎಸಗಿದೆ ಎಂದು ಆರೋಪಿಸಿ ಹೈದರಾಬಾದ್ ವಲಯದ ಸರಕು ಮತ್ತು ಸೇವಾ ತೆರಿಗೆ ಘಟಕದ ಮಹಾ ನಿರ್ದೇಶಕರು 2019ರ ನವೆಂಬರ್ 28ರಂದು ಏಕಾಏಕಿ ಸ್ವಿಗ್ಗಿ ಕಚೇರಿ ಮೇಲೆ ದಾಳಿ ನಡೆಸಿ ತನಿಖೆ ನಡೆಸಿದ್ದರು. ಸ್ವಿಗ್ಗಿ ನಿರ್ದೇಶಕರು ಮತ್ತು ಸಿಬ್ಬಂದಿಗೆ ಸ್ಥಳದಲ್ಲೇ ಸಮನ್ಸ್ ಜಾರಿಗೊಳಿಸಿ ಅವರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದರು. ಈ ವೇಳೆ ಸ್ವಿಗ್ಗಿಯು ಜಿಎಸ್‌ಟಿ ನಗದು ಪುಸಕ್ತದಲ್ಲಿ 15 ಕೋಟಿ ಠೇವಣಿ ಇಟ್ಟಿತ್ತು.
ಇದನ್ನು ಗಮನಿಸಿದ ಜಿಎಸ್ ಟಿ ಅಧಿಕಾರಿಗಳು ಕೂಡಲೇ ಸ್ವಿಗ್ಗಿ ನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿ ಕೂಡಲೇ ಆ 15 ಕೋಟಿ ಹಣವನ್ನು ತೆರಿಗೆ ರೂಪದಲ್ಲಿ ಠೇವಣಿ ಇಡಬೇಕೆಂದು ಬೇಡಿಕೆಯೊಡ್ಡಿದ್ದರು. ಹಾಗಾಗಿ ಸ್ವಿಗ್ಗಿ ಕಂಪನಿ ಹಣ ಪಾವಸಿಸಿತ್ತು.
ನಂತರ ಅದು ಜಿಎಸ್ ಟಿ ಮಂಡಳಿ ವಿಚಾರಣೆಯ ಹಂತದಲ್ಲಿ ಅಕ್ರಮವಾಗಿ ಒಟ್ಟು 27,51 ಕೋಟಿ ರೂ. ಪಡೆದುಕೊಂಡಿದೆ ಎಂದು ನ್ಯಾಯಾಲಯದ ಮೊರೆ ಹೋಗಿತ್ತು. ಅದು ಜಿಎಸ್ ಟಿ ಮಂಡಳಿ ಕ್ರಮ ಸಂವಿಧಾನದ 14 ಮತ್ತು 19(1)(ಜಿ)ಗೆ ವಿರುದ್ಧವಾಗಿದೆ. ಜೊತೆಗೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ ಸೆಕ್ಷನ್ 16(2)(ಸಿ) ಮತ್ತು ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯಿದೆ 2017 ಉಲ್ಲಂಘನೆಯಾಗಿದೆ. ಹಾಗಾಗಿ ಜಿಎಸ್ ಟಿ ಸಂಗ್ರಹ ಅಸಾಂವಿಧಾನಿಕವೆಂದು ಘೋಷಿಸಿ ಆ ಹಣಕ್ಕೆ ಬಡ್ಡಿ ಸಮೇತ ವಾಪಸ್ ಪಾವತಿಸುವಂತೆ ಕೋರಿತ್ತು. ಏಕಸದಸ್ಯಪೀಠ ಸ್ವಿಗ್ನಿ ಅರ್ಜಿ ಮಾನ್ಯ ಮಾಡಿ ತೆರಿಗೆ ಸಂಗ್ರಹ ಹಣ ಮರುಪಾವತಿಗೆ ಅದೇಶ ನೀಡಿತ್ತು.












Click it and Unblock the Notifications