10 ವರ್ಷವಾದರೂ ಕಾನೂನು ಪದವಿ ಪೂರೈಸದ ಅಭ್ಯರ್ಥಿ ನೆರವಿಗೆ ಧಾವಿಸಿದ ಹೈಕೋರ್ಟ್
ಬೆಂಗಳೂರು ಏ.27: ನಾನಾ ಕಾರಣಗಳಿಂದಾಗಿ 10 ವರ್ಷ ಕಳೆದರೂ ಕಾನೂನು ಪದವಿ ಪೂರೈಸಲು ವಿಫಲವಾಗಿರುವ ಅಭ್ಯರ್ಥಿಯ ನೆರವಿಗೆ ಹೈಕೋರ್ಟ್ ಧಾವಿಸಿದೆ.
ಆತನಿಗೆ ಅಂತಿಮ ವರ್ಷದ ಪರೀಕ್ಷೆ ಬರೆಯಲು ಅನುಮತಿ ನೀಡುವ ಸಂಬಂಧದ ಮನವಿಯನ್ನು ಅನುಕಂಪದ ಆಧಾರದಲ್ಲಿ ಪರಿಗಣಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಹೈಕೋರ್ಟ್ ಕರ್ನಾಟಕ ಕಾನೂನು ವಿಶ್ವವಿದ್ಯಾಲಯಕ್ಕೆ ಆದೇಶಿಸಿದೆ.
ಹಾಗಾಗಿ ಆ ವಿಫಲ ವಿದ್ಯಾರ್ಥಿಗೆ ಕಾನೂನು ಪದವಿ ಪೂರೈಸಲು ಒಂದು ಚಾನ್ಸ್ ದೊರೆತಿದೆ. ಚಿತ್ರದುರ್ಗ ತಾಲೂಕಿನ ಎಸ್‌ಜೆಎಂ ಬಡಾವಣೆಯ ಎಸ್. ಜನಾರ್ದನ ಪೂಜಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪರೀಕ್ಷೆ ಬರೆಯಲು ಅನುಮತಿ ಕೋರಿ ಅರ್ಜಿದಾರರು ಒಂದು ವಾರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮನವಿ ಪತ್ರ ಸಲ್ಲಿಸಬೇಕು. ಅರ್ಜಿದಾರರು ಮನವಿ ಪತ್ರ ಸಲ್ಲಿಸಿದರೆ, ಅದನ್ನು ಅನುಕಂಪದ ಮೇಲೆ ಪರಿಗಣಿಸಿ ನಾಲ್ಕು ವಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಹಾಗೂ ಕೈಗೊಂಡ ನಿರ್ಧಾರವನ್ನು ಕೂಡಲೇ ಅರ್ಜಿದಾರರಿಗೆ ತಿಳಿಸಬೇಕು ಎಂದು ವಿವಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಏನಿದು ಪ್ರಕರಣ:
ಅರ್ಜಿದಾರರು 2009ರಲ್ಲಿ ಚಿತ್ರದುರ್ಗದ ಎಸ್‌ಜೆಎಂ ಕಾನೂನು ಕಾಲೇಜಿನಲ್ಲಿ ಐದು ವರ್ಷದ ಕಾನೂನು ಪದವಿಗೆ ಪ್ರವೇಶ ಪಡೆದಿದ್ದರು. ಐದು ವರ್ಷಗಳ ಕಾನೂನು ಪದವಿಯನ್ನು ಪ್ರವೇಶ ಪಡೆದ ವರ್ಷದಿಂದ 10 ವರ್ಷದೊಳಗೆ ಪೂರ್ಣಗೊಳಿಸಬೇಕೆಂಬ ನಿಯಮವಿದೆ. ಆದರೆ, ನಾನಾ ಕಾರಣಗಳಿಂದ ಕಾನೂನು ಪದವಿ ಪೂರ್ಣಗೊಳಿಸಲು ಅರ್ಜಿದಾರರಿಗೆ ಸಾಧ್ಯವಾಗಿರಲಿಲ್ಲ. ಇದರಿಂದ ಬಾಕಿಯಿರುವ ಅಂತಿಮ ವರ್ಷದ ವಿಷಯಗಳಲ್ಲಿ ಉತ್ತೀರ್ಣವಾಗುವುದಕ್ಕಾಗಿ 2022ರ ಏ.16ರಿಂದ ಆರಂಭವಾಗಿರುವ ಪರೀಕ್ಷೆ ಬರೆಯಲು ತಮಗೆ ಅನುಮತಿ ನೀಡುವಂತೆ ಅರ್ಜಿದಾರರು ಕರ್ನಾಟಕ ಕಾನೂನು ವಿವಿಯನ್ನು ಕೋರಿದ್ದರು. ಆದರೆ, ವಿವಿ ಅನುಮತಿ ನಿರಾಕರಿಸಿದ್ದರಿಂದ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

2022ರ ಏ.16ರಿಂದ ಕಾನೂನು ಪದವಿ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಿ ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯ ಹೊರಡಿಸಿದ ಆದೇಶ ರದ್ದುಪಡಿಸಬೇಕು. ಐದು ವರ್ಷಗಳ ಕಾನೂನು ಪದವಿಗೆ ಪ್ರವೇಶ ಪಡೆದ ವರ್ಷದಿಂದ 10 ವರ್ಷಗಳ ಒಳಗೆ ಪದವಿ ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಿರುವ ನಿಯಮ ರದ್ದುಪಡಿಸಬೇಕು. ಈಗಾಗಲೇ ಆರಂಭವಾಗಿರುವ ಐದು ವರ್ಷಗಳ ಕಾನೂನು ಪದವಿಯ ಅಂತಿಮ ವರ್ಷದ ಪರೀಕ್ಷೆ ಬರೆಯಲು ತಮಗೆ ಅನುಮತಿ ನೀಡುವಂತೆ ಕರ್ನಾಟಕ ಕಾನೂನು ವಿವಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.












Click it and Unblock the Notifications