ವಿಧಾನಸೌಧ ಬಳಿ ನಾಯಿ, ಪಕ್ಷಿಗಳಿಗೆ ಆಹಾರ ನೀಡುವವರ ವಿರುದ್ಧ ಸಿಜೆ ಕಿಡಿ
ಬೆಂಗಳೂರು, ಅಕ್ಟೋಬರ್ 06; ಬೀದಿ ನಾಯಿಗಳ ಸಂತಾನಹರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ನಿಯಮಗಳ ಜಾರಿಗೆ ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ನಡೆಗೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಧಾನ ವ್ಯಕ್ತಪಡಿಸಿದೆ.
ಅಲ್ಲದೆ, ವಿಧಾನಸೌಧದ ಬಳಿ ನಾಯಿ ಹಾಗೂ ಪಕ್ಷಿಗಳಿಗೆ ಆಹಾರ ನೀಡುವವರ ವಿರುದ್ಧವೂ ಹರಿಹಾಯ್ದಿದೆ. ಸರ್ಕಾರ ಮೂರು ವಾರಗಳಲ್ಲಿ ಸಮರ್ಪಕ ಉತ್ತರ ಕೊಡದಿದ್ದರೆ, ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ವಕೀಲ ಎಲ್. ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಅರ್ಜಿಗೆ ಉತ್ತರಿಸಲು ಸರ್ಕಾರಿ ವಕೀಲರು ಕಾಲಾವಕಾಶ ಕೋರಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಈ ವರ್ಷದ ಜನವರಿಯಲ್ಲಿ ಉತ್ತರಿಸುವುದಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಕೊನೆಯ ಬಾರಿಗೆ ಕಾಲಾವಕಾಶ ಕೇಳಿದ್ದರು. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರದ ಈ ನಡೆ ಒಪ್ಪುವುದಿಲ್ಲ ಎಂದು ಹೇಳಿತು. ಅಷ್ಟೇ ಅಲ್ಲದೆ, ಇನ್ನು ಮೂರು ವಾರಗಳಲ್ಲಿ ಉತ್ತರಿಸಬೇಕು. ಮತ್ತೆ ಕಾಲಾವಕಾಶ ನೀಡುವುದಿಲ್ಲ ಎಂದು ಸರ್ಕಾರಕ್ಕೆ ತಾಕೀತು ಮಾಡಿ ವಿಚಾರಣೆಯನ್ನು ನವೆಂಬರ್ 15ಕ್ಕೆ ಹೈಕೋರ್ಟ್ ಮುಂದೂಡಿತು.
ನಿವಾಸಿಗಳಿಗೆ ತೊಂದರೆ ಆಗಬಾರದು: ಬೀದಿ ನಾಯಿಗಳಿಗೆ ಆಹಾರ ಪೂರೈಸುವುದು ಒಳ್ಳೆಯ ಕಾರ್ಯ. ಆದರೆ, ಅದರ ರೀತಿಯೂ ಸರಿ ಇರಬೇಕು. ನಿಗದಿತ ಸ್ಥಳದಲ್ಲಿ ಅದು ಆದರೆ ಉತ್ತಮ. ಇಲ್ಲದಿದ್ದರೆ ದಾರಿಹೋಕರು, ಆಯಾ ಪ್ರದೇಶದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತದೆ. ವಿಧಾನಸೌಧದ ಗೇಟಿನ ಮುಂಭಾಗವೇ ಕೆಲವರು ಬೆಳಗಿನ ಜಾವ ಪ್ರಾಣಿಗಳಿಗೆ ಆಹಾರ ತಂದು ಹಾಕುತ್ತಾರೆ ಎಂದು ಕೋರ್ಟ್ ಹೇಳಿತು.
ಪ್ರಾಣಿಗಳ ಬಗ್ಗೆ ಅನುಕಂಪ ತೋರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅವ್ಯವಸ್ಥೆ ಸೃಷ್ಟಿಯಾಗಬಾರದು ಎಂದಷ್ಟೇ ನಮ್ಮ ಕಳಕಳಿ. ಅನೇಕ ಕಡೆ ಬೆಳಗಿನ ಅವಧಿಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಇದರಿಂದ ತೊಂದರೆ ಆಗುವುದನ್ನು ತಳ್ಳಿ ಹಾಕುವಂತಿಲ್ಲ.
ಆದ್ದರಿಂದ ಈ ವಿಚಾರದಲ್ಲಿ ಬೀದಿ ನಾಯಿಗಳು ಸೇರಿದಂತೆ ಇತರೆ ಪ್ರಾಣಿ-ಪಕ್ಷಿಗಳ ಬಗ್ಗೆ ಕಾಳಜಿ ತೋರುವವರು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸೂಚ್ಯವಾಗಿ ತಿಳಿಸಿತು. ಅಲ್ಲದೆ, ಇಂತಹ ವಿಚಾರಗಳಲ್ಲಿ ನಾಗರಿಕರು ಸರ್ಕಾರದೊಂದಿಗೆ ಸಹಕರಿಸಬೇಕು. ಹಕ್ಕುಗಳನ್ನು ಪ್ರತಿಪಾದಿಸುವವರು, ಕರ್ತವ್ಯಗಳನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಹಕ್ಕು ಮತ್ತು ಕರ್ತವ್ಯಗಳು ಒಂದಕ್ಕೊಂದು ಹೊಂದಿವೆ ಎಂದು ನ್ಯಾಯಪೀಠ ಹೇಳಿತು.












Click it and Unblock the Notifications