ಅಕ್ರಮ- ಸಕ್ರಮ ಪ್ರಕ್ರಿಯೆಗೆ ಅಡ್ಡ ನಿಂತ ಹೈಕೋರ್ಟ್
ಬೆಂಗಳೂರು, ಮಾ.20: ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಿಕೊಳ್ಳಲು ಮುಂದಾಗಿರುವ ಕರ್ನಾಟಕ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾಗಿದೆ. ಅಕ್ರಮ ಸಕ್ರಮ ಅರ್ಜಿಯನ್ನು ಬೇಕಾದರೆ ಸ್ವೀಕರಿಸಿ ಆದರೆ, ಆನಂತರ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಹೈಕೋರ್ಟ್ ನ್ಯಾಯಪೀಠ ಮಧ್ಯಂತರ ಆದೇಶ ನೀಡಿದೆ.
ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಿಕೊಳ್ಳಲು ಒಂದು ವರ್ಷದ ತನಕ ಕಾಲಾವಕಾಶ ಕಲ್ಪಿಸಲಾಗುತ್ತದೆ. ಮಾರ್ಚ್ 23ರಿಂದ ಒಂದು ವರ್ಷದ ತನಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ದಂಡ ಶುಲ್ಕವನ್ನು ಪಾವತಿ ಮಾಡಿ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಸರ್ಕಾರ ಇತ್ತೀಚೆಗೆ ಪ್ರಕಟಣೆ ಹೊರಡಿಸಿತ್ತು.[ಅಕ್ರಮ-ಸಕ್ರಮ, ನಿಮಗಿದು ತಿಳಿದಿರಲಿ]
ಅಕ್ರಮ ಸಕ್ರಮಕ್ಕೆ ಸಲ್ಲಿಸುವ ಅರ್ಜಿಗಳು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯ. ಆನ್‌ಲೈನ್ ಮೂಲಕವೂ ಅರ್ಜಿಗಳನ್ನು ಪಡೆಯಬಹುದಾಗಿದೆ. ನಗರಾಭಿವೃದ್ಧಿ ಇಲಾಖೆ ವೆಬ್‌ಸೈಟ್‌ನಲ್ಲೂ ಅರ್ಜಿ ಲಭ್ಯವಿದೆ.

ಮುಖ್ಯ ನ್ಯಾ. ಡಿಎಚ್ ವಘೇಲಾ ಹಾಗೂ ಜಸ್ಟೀಸ್ ರಾಮ್ ಮೋಹನ್ ರೆಡ್ಡಿ ಅವರು ಅಕ್ರಮ ಸಕ್ರಮ ಯೋಜನೆ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡು ಈ ರೀತಿ ಮಧ್ಯಂತರ ಆದೇಶ ನೀಡಿದ್ದಾರೆ. [ಅಕ್ರಮ-ಸಕ್ರಮ : ಇದು ಎಲ್ಲರ ಕಥೆ]
ಜನ್ ಫೋರಂ ಫಾರ್ ಮಂಗಳೂರು ಡೆವಲಪ್‌ಮಂಟ್ ಸಲ್ಲಿಸಿದ್ದ ಪಿಐಎಲ್ ಮುಂದಿನ ವಿಚಾರಣೆಯನ್ನು ಏ.15ಕ್ಕೆ ಮುಂದೂಡಲಾಗಿದೆ. ಮಾ.23ರಿಂದ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಬಹುದಾದರೂ ಹೈಕೋರ್ಟ್‌ನ ಮುಂದಿನ ಆದೇಶದ ವರೆಗೆ ಯೋಜನೆ ಸಂಬಂಧ ಯಾವುದೇ ಪ್ರಕಿಯೆ ನಡೆಸಲು ಸರ್ಕಾರಕ್ಕೆ ಸಾಧ್ಯವಿಲ್ಲ. [ಅಕ್ರಮ-ಸಕ್ರಮಕ್ಕೆ ಮಾ.23ರ ನಂತರ ಅರ್ಜಿ ಸಲ್ಲಿಸಿ]
ಎಷ್ಟು ಕಟ್ಟಡಗಳು ನಿಯಮಾವಳಿ ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ. ಈವರೆಗೂ ಅಕ್ರಮವಾಗಿ ನಿರ್ಮಿಸಿದ್ದ ಎಷ್ಟು ಕಟ್ಟಡಗಳನ್ನು ನೀವು ನೆಲಸಮ ಮಾಡಿದ್ದೀರಿ? ಅಕ್ರಮ ಸಕ್ರಮ ಜಾರಿಗೊಂಡರೆ ಎಷ್ಟು ಪ್ರಮಾಣದಲ್ಲಿ ಸಕ್ರಮವಾಗಬಹುದು? ಎಂಬೆಲ್ಲಾ ಪ್ರಶ್ನೆಗಳಿಗೆ ನಗರಾಭಿವೃದ್ಧಿ ಸಚಿವಾಲಯ, ಇಲಾಖೆ ಹಾಗೂ ಅಡ್ವೊಕೇಟ್ ಜನರಲ್ ಉತ್ತರಿಸಬೇಕಿದೆ.
ಒನ್ ಇಂಡಿಯಾ ಸುದ್ದಿ












Click it and Unblock the Notifications